ಬೆಳ್ಮಣ್: ನಂದಳಿಕೆ -ಬೆಳ್ಮಣ್ ಸಂಪರ್ಕ ರಸ್ತೆಯ ಡಾಮರು ಕಾಮಗಾರಿ ಪೂರ್ಣಗೊಂಡ ಒಂದೆರಡು ವಾರದ ಲ್ಲಿಯೇ ರಸ್ತೆಗೆ ಹಾಕಲಾದ ಡಾಮರು ಕಿತ್ತು ಹೋಗಿದ್ದು, ಕಳಪೆ ಕಾಮಗಾರಿಯ ಬಗ್ಗೆ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.
ಬೆಳ್ಮಣ್ ಗ್ರಾ.ಪಂ. ವ್ಯಾಪ್ತಿಯಿಂದ ನಂದಳಿಕೆ ಗ್ರಾ.ಪಂ. ವ್ಯಾಪ್ತಿಯ ಜಂತ್ರ ಪರಿಸರವನ್ನು ಸಂಪರ್ಕಿಸುವ ಅಗೋಳಿಬೈಲು ರಸ್ತೆ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಇದೀಗ ಈ ರಸ್ತೆಯ ಡಾಮರು ಕಿತ್ತು ಹೋಗಿದ್ದು ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲಲ್ಲಿ ರಸ್ತೆಗೆ ಹಾಕಲಾದ ಟಾರು ಎಲ್ಲವೂ ಕಿತ್ತು ಬರುತ್ತಿದೆ. ಘನ ವಾಹನ ಸಂಚಾರ ನಡೆಸಿದರೆ ಒಂದೇ ತಿಂಗಳಲ್ಲಿ ರಸ್ತೆ ಸಂಪೂರ್ಣ ಹದಗೆಡುವ ಸಾಧ್ಯತೆಯಿದೆ. ಹೊಸದಾಗಿ ರಸ್ತೆಗೆ ಡಾಮರು ಹಾಕಿದರೂ ಬರೀ ತೇಪೆ ಹಾಕಿದಂತೆ ಡಾಮರು ಕಾಮಗಾರಿ ಮಾಡಲಾಗಿದೆ ಎನ್ನುವುದು ಗ್ರಾಮಸ್ಥರ ಆರೋಪ.
ಎರಡು ಪ್ರಮುಖ ಗ್ರಾಮಗಳ ಕೊಂಡಿ :
ಬೆಳ್ಮಣ್ ಗ್ರಾ.ಪಂ. ವ್ಯಾಪ್ತಿಯ ಅಗೋಳಿಬೈಲಿನಿಂದ ನಂದಳಿಕೆ ಗ್ರಾ.ಪಂ. ವ್ಯಾಪ್ತಿಯ ಜಂತ್ರದ ಬಹುತೇಕ ಪರಿಸರವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಈ ಭಾಗದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳಿದ್ದು ಇಲ್ಲಿನ ಜನ ನಿತ್ಯ ಬೆಳ್ಮಣ್ ಪೇಟೆಯನ್ನು ಸಂಪರ್ಕಿಸಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಹಲವು ದಶಕಗಳ ಬೇಡಿಕೆಯ ಫಲವಾಗಿ ಈ ಬಾರಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು ಎರಡೇ ವಾರದಲ್ಲೇ ಗುಣಮಟ್ಟದ ಕುರಿತು ಸಂಶಯ ವ್ಯಕ್ತವಾಗಿದೆ. ಬಹು ಉಪಯೋಗಿ ಈ ರಸ್ತೆ ತೀರಾ ಹದಗೆಡುವ ಮೊದಲು ಗುತ್ತಿಗೆದಾರರು ಮತ್ತೆ ಸರಿಯಾಗಿ ಡಾಮರು ಕಾಮಗಾರಿ ನಡೆಸಬೇಕಾಗಿದೆ ಎನ್ನುವುದು ಗ್ರಾಮಸ್ಥರ ಬೇಡಿಕೆ.
ಜೋರಾಗಿ ಮಳೆ ನೀರು ಹರಿದರೆ ಅಥವಾ ಘನ ವಾಹನ ಸಂಚಾರ ಮಾಡಿದರೆ ಸಂಪೂರ್ಣ ರಸ್ತೆ ಹಾಳಾಗುವ ಸಾಧ್ಯತೆಯಿದೆ. ಗುತ್ತಿಗೆದಾರರು ಕೂಡಲೇ ಸರಿಪಡಿಸುವಂತೆ ಜನಪ್ರತಿನಿಧಿಗಳು ಒತ್ತಡ ಹೇರಬೇಕು.
–ಪ್ರದೀಪ್ ನಂದಳಿಕೆ , ಗ್ರಾಮಸ್ಥ
ಗ್ರಾಮಸ್ಥರ ದೂರಿಗೆ ಸ್ಪಂದಿಸಿ ಈಗಾಗಲೇ ಗುತ್ತಿಗೆದಾರರಿಗೆ ಮಾಹಿತಿ ನೀಡಲಾಗಿದೆ.
–ನಿತ್ಯಾನಂದ ಅಮೀನ್, ಅಧ್ಯಕ್ಷರು, ನಂದಳಿಕೆ ಗ್ರಾ.ಪಂ.
– ಶರತ್ ಶೆಟ್ಟಿ ಮುಂಡ್ಕೂರು