Advertisement

ಕಳಪೆ ಬೀಜ ಪೂರೈಕೆ; ಕಂಪನಿಗಳ ವಿರುದ್ಧ ಕ್ರಮ ಎಂದು?

05:22 PM Mar 31, 2019 | Naveen |

ಕೊಪ್ಪಳ: ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ವಿವಿಧ ಕಂಪನಿಗಳಿಂದ ಪೂರೈಕೆಯಾದ ಬಿತ್ತನೆ ಬೀಜಗಳಲ್ಲಿ 4 ಕಂಪನಿ ಮೆಕ್ಕೆಜೋಳದ ಬೀಜಗಳು ಕಳಪೆಯಾಗಿವೆ ಎಂದು ಪ್ರಯೋಗಾಲಯದ ವರದಿ ಬಂದು ಏಳು ತಿಂಗಳು ಗತಿಸಿದರೂ ಕಂಪನಿಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಈವರೆಗೂ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

Advertisement

ಹೌದು.. ಪ್ರತಿ ವರ್ಷ ಮುಂಗಾರಿನ ಹಂಗಾಮಿನಲ್ಲಿ ಸರ್ಕಾರವು ಕೃಷಿ ಇಲಾಖೆಯಡಿ ಬರುವ ರೈತ ಸಂಪರ್ಕಗಳ ಮೂಲಕ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಔಷ ಧಗಳನ್ನು ರಿಯಾಯತಿ ದರದಲ್ಲಿ ಪೂರೈಕೆ ಮಾಡುತ್ತದೆ. ರೈತರು ರೈತ ಸಂಪರ್ಕ ಕೇಂದ್ರಗಳನ್ನೇ ನಂಬಿಕೊಂಡು ಬೀಜ ಸೇರಿದಂತೆ ಗೊಬ್ಬರ ಖರೀದಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾರೆ. ಇತ್ತೀಚೆಗಿನ ದಿನದಲ್ಲಿ ಹಲವು ಕಂಪನಿಗಳು ಲಾಭದ ಆಸೆಯಿಂದ ಕಳಪೆ ಮಟ್ಟದ ಬೀಜಗಳನ್ನು ಪೂರೈಕೆ ಮಾಡಿ ರೈತರನ್ನು ವಂಚಿಸುತ್ತಿರುವ ಪ್ರಕರಣಗಳು ರಾಜ್ಯದ ವಿವಿಧೆಡೆ ಬೆಳಕಿಗೆ ಬರುತ್ತಿವೆ. ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಕೃಷಿ ಇಲಾಖೆ ಪ್ರಾಯೋಗಿಕವಾಗಿ ನಡೆಸಿದ ಪರೀಕ್ಷೆಯಲ್ಲಿ 4 ಕಂಪನಿಗಳ ಮೆಕ್ಕೆಜೋಳದ ಬೀಜಗಳು ಕಳಪೆಯಾಗಿರುವ ಕುರಿತು ವರದಿ ಬಂದಿದೆ.

ಏಲ್ಲೆಲ್ಲಿ ಬೀಜಗಳು ಕಳಪೆ?
ಜಿಲ್ಲೆಯ ಯಲಬುರ್ಗಾ, ಕುಕನೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಹೈದ್ರಾಬಾದ್‌ ಮೂಲದ ಗಂಗಾ ಕಾವೇರಿ ಸೀಡ್ಸ್‌ ಕಂಪನಿಯ ಬೀಜಗಳು ಕಳಪೆಯಾಗಿದ್ದರೆ, ಕೊಪ್ಪಳದ ಶಾಂತಿ ಆಗ್ರೋ ಡಿಸ್ಟ್ರಿಬ್ಯೂಟರ್ನಲ್ಲಿನ ಹೈದ್ರಾಬಾದ್‌ ಜೆ.ಕೆ ಅಗ್ರಿ ಜೆನೆಟಿಕ್ಸ್‌ ಕಂಪನಿಯ ಮೆಕ್ಕೆಜೋಳ, ಗಂಗಾ ಟ್ರೇಡರ್ನಲ್ಲಿನ ಹೈದ್ರಾಬಾದ್‌ನ ಸಿøಹಾ ಬಯೋ ಸೈನ್ಸ್‌ ಪ್ರೈವೇಟ್‌ ಲಿ,ನ ಮೆಕ್ಕೆಜೋಳ, ಹನುಮನಾಳದ ಮೇ. ಸ್ವಾಮಿ ಫರ್ಟಿಲೈಸರ್ನಲ್ಲಿನ ತೆಲಂಗಾಣ ಮೂಲದ ಕಾವೇರಿ ಸೀಡ್ಸ್‌ ಕಂಪನಿಯ ಮೆಕ್ಕೆಜೋಳವನ್ನು ಜಿಲ್ಲೆ ಕೃಷಿ ಅ ಧಿಕಾರಿಗಳು ಸ್ಯಾಂಪಲ್‌ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪ್ರಯೋಗಾಲಯದಿಂದ ನಾಲ್ಕು ಕಂಪನಿಗಳ ಮೆಕ್ಕೆಜೋಳದ ಬಿತ್ತನೆ ಬೀಜಗಳು ಕಳಪೆಯಾಗಿವೆ ಎಂದು ವರದಿ ಬಂದಿದೆ.

ರಾಜ್ಯ ಹಂತದಲ್ಲೂ ಪರೀಕ್ಷೆಯಾಗುತ್ತೆ: ಅಚ್ಚರಿಯೆಂದರೆ ಮೆಕ್ಕೆಜೋಳ ಸೇರಿದಂತೆ ಎಲ್ಲ ಬಿತ್ತನೆಯ ಬೀಜಗಳನ್ನು ರಾಜ್ಯ ಹಂತದಲ್ಲೂ ಒಂದು ಬಾರಿ ಪ್ರಯೋಗಾಲಯಕ್ಕೆ ರವಾನೆ ಮಾಡಿ ವರದಿ ಬಂದ ಬಳಿಕವೇ ಜಿಲ್ಲಾ ಹಂತಗಳಿಗೆ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲು ಇಲಾಖೆಯು ಶಿಫಾರಸು ಮಾಡಿರುತ್ತದೆ. ಆದರೆ ಅಲ್ಲಿ ಈ ಕಂಪನಿಗಳ ಬೀಜಗಳು ಪ್ರಯೋಗಾಲಯದ ವರದಿಯಲ್ಲಿ ಗುಣಮಟ್ಟದಿಂದ ಕೂಡಿದ್ದರೆ, ಜಿಲ್ಲಾ ಹಂತದಲ್ಲಿ
ಪ್ರಯೋಗಾಲಯದಲ್ಲಿ ಕಳಪೆಯಾಗಿರುವ ಕುರಿತು ವರದಿಯಾಗಿವೆ. ಕಂಪನಿಗಳು ಸಹ ರಾಜ್ಯಕ್ಕೊಂದು, ಜಿಲ್ಲೆಗೊಂದು ಬೀಜಗಳನ್ನು ಪೂರೈಕೆ ಮಾಡುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ. ಇಲ್ಲಿ ಏನೋ ಆಟ ನಡೆಯುತ್ತಿದೆ ಎನ್ನುವ ಅನುಮಾನ ಮೂಡುತ್ತಿದ್ದು, ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕಿದೆ.

ಕಳಪೆಯಾದ ಬೀಜ ಪೂರೈಸಲ್ಲ: ಜಿಲ್ಲಾ ಹಂತದಲ್ಲಿ ಕೃಷಿ ಇಲಾಖೆ ಮೊದಲು ಪ್ರಾಯೋಗಿಕವಾಗಿ ಬಿತ್ತನೆ ಬೀಜಗಳನ್ನು ಎಲ್ಲ ರೈತ ಸಂಪರ್ಕ ಕೇಂದ್ರಗಳಿಂದ ಸ್ಯಾಂಪಲ್‌ ಪಡೆದು, ಪ್ರಯೋಗಾಲಯಕ್ಕೆ ರವಾನೆ ಮಾಡುತ್ತದೆ. ಅಲ್ಲಿಂದ ವರದಿ ಬಂದ ಬಳಿಕವೇ ರೈತರಿಗೆ ಬಿತ್ತನೆ ಬೀಜ ಪೂರೈಕೆ ಮಾಡುತ್ತದೆ. ವರದಿಯಲ್ಲಿ ಕಳಪೆ ಎಂದು ವರದಿ ಬಂದರೆ ಅಂತಹ ಲೋಡ್‌ ಅನ್ನು ಕೃಷಿ ಅಧಿಕಾರಿಗಳೇ ಆರಂಭದಲ್ಲಿ ತಿರಸ್ಕಾರ ಮಾಡುತ್ತಾರೆ.

Advertisement

ಕಂಪನಿಗಳ ಮೇಲೆ ಏನೂ ಕ್ರಮವಿಲ್ಲ : ಯಾವುದೇ ಕಂಪನಿಗಳು ಕಳಪೆ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಿದರೆ ಬೀಜ ಅ ಧಿನಿಯಮದಡಿ ತಾಲೂಕು ಕೃಷಿ ಅಧಿ ಕಾರಿಗಳು ಕಂಪನಿಗಳ ಮೇಲೆ ಪ್ರಕರಣ ದಾಖಲಿಸಬೇಕಾಗುತ್ತದೆ. ನೋಟಿಸ್‌ ನೀಡಿ ಅವರಿಂದ ಉತ್ತರ ಪಡೆಯಬೇಕು. ಜತೆಗೆ ಪ್ರಕರಣದ ಪರವಾದ ಮಾಡಲು ಸರ್ಕಾರಿ ವಕೀಲರನ್ನು ಕೃಷಿ ಇಲಾಖೆ ನಿಯೋಜಿಸಬೇಕಿದೆ. ಆದರೆ ಜಿಲ್ಲೆಯಲ್ಲಿ 4 ಕಂಪನಿಗಳ ಮೆಕ್ಕೆಜೋಳ ಬೀಜವು ಕಳಪೆಯಾಗಿವೆ ಎಂದು ವರದಿ ಬಂದು 7 ತಿಂಗಳು ಕಳೆದರೂ ಯಾವುದೇ ಕ್ರಮವಿಲ್ಲ. ಇದರ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.

ತಾಲೂಕು ಕೃಷಿ ಅಧಿಕಾರಿಗಳು ಕಳಪೆ ಬೀಜ ಪೂರೈಸಿದ ಕಂಪನಿಗಳ ಮೇಲೆ ಕೇಸ್‌ ದಾಖಲಿಸಬೇಕು. ಆದರೆ ಪ್ರಕರಣ ದಾಖಲಿಸಿಲ್ಲ. ಈ ಕುರಿತು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
.ಶಬಾನಾ ಶೇಖ್‌,
 ಜಂಟಿ ಕೃಷಿ ನಿರ್ದೇಶಕಿ

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next