Advertisement
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ, ಸಚಿವ ಬಿ. ರಮಾನಾಥ ರೈ ಅವರ ಗೌರವಾಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿ ಮತ್ತು ಪ್ರ. ಅರ್ಚಕ ವೇ| ಮೂ| ನಟರಾಜ ಉಪಾಧ್ಯಾಯ ಅವರ ಸಹಕಾರದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. 16 ವರ್ಷಗಳ ಹಿಂದೆ ಶ್ರೀಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಇದೀಗ ನಾಲ್ಕು ವರ್ಷ ಹೆಚ್ಚಳವಾದರೂ ನವೀಕರಣದೊಂದಿಗೆ ಬ್ರಹ್ಮಕಲಶೋತ್ಸವ ಜರಗಲಿದೆ.
ಕೃತಯುಗದಲ್ಲಿ ರೌದ್ರ ಗಿರಿರ್ನಾಮವೆಂದು, ತ್ರೇತಾಯುಗದಲ್ಲಿ ಗಜರಾಡ್ಗಿರಿಯೆಂತಲೂ ದ್ವಾಪರಯುಗದಲ್ಲಿ ಭೀಮ ಶೈಲಶ್ಚವೆಂದು ಪ್ರಸ್ತುತ ಕಲಿಯುಗದಲ್ಲಿ ಕಾರಿಂಜ ಎಂಬ ಹೆಸರಿನಿಂದ ಕ್ಷೇತ್ರವು ಪ್ರಸಿದ್ಧಿ ಪಡೆದಿದೆ. ರಾಜ್ಯದ ಅತ್ಯಂತ ಪ್ರಾಚೀನ ಶಿವಾಲಯವಾಗಿರುವ ಈ ಕ್ಷೇತ್ರ ಸಮುದ್ರಮಟ್ಟದಿಂದ ಸಾವಿರದ ಇನ್ನೂರು ಅಡಿ ಎತ್ತರವಿದ್ದು, ಎಂಟುನೂರು ಅಡಿಗಳ ಎತ್ತರದಲ್ಲಿ ಏಕೈಕ ಶಿಲೆಯ ಮೇಲೆ ದೇಗುಲವಿದೆ. ಶ್ರೀ ಕ್ಷೇತ್ರದ ಪ್ರಧಾನ ದೇವರು ಶ್ರೀ ಪಾರ್ವತಿ ಪರಮೇಶ್ವರ, ಶ್ರೀ ಮಹಾಗಣಪತಿ. ರಾಜನ್ ದೈವ ಕೊಡಮಣಿತ್ತಾಯ ಮತ್ತು ಪಿಲಿ ಚಾಮುಂಡಿ, ಉಳ್ಳಾಲ್ತಿ ಅಮ್ಮನವರ ಸಾನ್ನಿಧ್ಯ ಇಲ್ಲಿದೆ. ಕಾವಳಮೂಡೂರು, ಕಾವಳ ಪಡೂರು, ದೇವಸ್ಯಮೂಡೂರು, ದೇವಸ್ಯಪಡೂರು ಗ್ರಾಮಗಳು ಕ್ಷೇತ್ರದ ವಿಸ್ತಾರವನ್ನು ಹೊಂದಿದೆ.
Related Articles
Advertisement
ಅಭಿವೃದ್ಧಿ ಕಾರ್ಯಪ್ರಕೃತ ಶ್ರೀ ಪಾರ್ವತಿ ದೇವಸ್ಥಾನದಲ್ಲಿ 96 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ಸುತ್ತುಗೋಪುರ ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಹೊರಾಂಗಣ ಪೌಳಿ ನವೀಕರಣ, ಉಕ್ಕುಡದಿಂದ ಈಶ್ವರ ಸನ್ನಿಧಿಗೆ ಮೆಟ್ಟಿಲುಗಳ ರಚನೆ, ಅತಿಥಿಗೃಹ, ಅನ್ನಛತ್ರದ ಅಡುಗೆ ಕೊಠಡಿ, ಕಾರ್ಯಾಲಯಕ್ಕೆ 2 ಕೊಠಡಿಗಳು, ಪಾರ್ವತಿ ಸನ್ನಿಧಿ ರಸ್ತೆಗೆ ಡಾಮರು, ಹೊರಾಂಗಣಕ್ಕೆ ಗ್ರಾನೈಟ್ ಹಾಸುವಿಕೆ ಮೊದಲಾದ ಕಾಮಗಾರಿಗಳು ನಡೆದಿವೆ.