Advertisement

Bajpe: 3 ಅಸೆಂಬ್ಲಿ ಕ್ಷೇತ್ರಗಳಿಗೆ ಇನ್ನು ಫ‌ಲ್ಗುಣಿಯೇ ಜೀವನದಿ!

01:28 PM Oct 29, 2024 | Team Udayavani |

ಬಜಪೆ: ಮಂಗಳೂರು ನಗರದ ಪಾಲಿಗೆ ನೇತ್ರಾವತಿ ಹೇಗೆ ಜೀವನದಿಯೋ, ಇನ್ನು ಮಂಗಳೂರು ಉತ್ತರ, ಮೂಡುಬಿದಿರೆ ಮತ್ತು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಹಲವು ಭಾಗಗಳಿಗೆ ಫ‌ಲ್ಗುಣಿ ನದಿ (ಗುರುಪುರ ನದಿ) ಜೀವ ನದಿಯಾಗಲಿದೆ. ಫ‌ಲ್ಗುಣಿ ನದಿಗೆ ಮಳವೂರಿನಲ್ಲಿ ನಿರ್ಮಿಸಲಾಗಿರುವ ವೆಂಟೆಡ್‌ ಡ್ಯಾಂನಿಂದ ಈಗಾಗಲೇ 11 ಗ್ರಾಮ ಮತ್ತು ಬಜಪೆ ಪಟ್ಟಣ ಪಂಚಾಯತ್‌ಗೆ ನೀರು ಸರಬರಾಜಾಗುತ್ತಿದೆ. ಇದನ್ನು ಇನ್ನೂ ಹಲವು ಗ್ರಾಮಗಳು, ಪಟ್ಟಣ ಪಂಚಾಯತ್‌ಗಳಿಗೆ ವಿಸ್ತರಿಸುವ ಯೋಚನೆ ಇದ್ದು, ಕೆಲವೊಂದು ಕಾಮಗಾರಿಗಳು ಆರಂಭಗೊಂಡಿದೆ.

Advertisement

ನೇತ್ರಾವತಿ ನದಿಯಿಂದ ತುಂಬೆ ಡ್ಯಾಂ ಮೂಲಕ ಮಂಗಳೂರಿಗೆ ಪೂರೈಕೆಯಾಗುವ ನೀರಿನ ಪ್ರಮಾಣ 120 ಎಂಎಲ್‌ಡಿ (ಮಿಲಿಯನ್‌ ಲೀಟರ್‌/ಪ್ರತಿದಿನ) ಆಗಿದ್ದರೆ, ಈಗಿನ ಪ್ರಸ್ತಾವನೆಯ ಪ್ರಕಾರ ಫ‌ಲ್ಗುಣಿ ನದಿಯಿಂದ 36.7 ಎಂಎಲ್‌ಡಿ ನೀರನ್ನು ಕುಡಿಯಲು ಬಳಸಲಾಗುತ್ತದೆ.

ಈಗ ಎಷ್ಟು ನೀರು ಸರಬರಾಜು?
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು, ಬಡಗ ಎಕ್ಕಾರು, ಸೂರಿಂಜೆ, ದೇಲಂತ ಬೆಟ್ಟು ,ಬಾಳ, ಕಳವಾರು, 62ನೇ ತೋಕೂರು, ಮೂಡುಶೆಡ್ಡೆ, ಪಡುಶೆಡ್ಡೆ ಎಂಬ 11 ಗ್ರಾಮಗಳಿಗೆ 50 ಲಕ್ಷ ಲೀಟರ್‌ ಅಂದರೆ 5 ಎಂಎಲ್‌ಡಿ ನೀರು ಪೂರೈಸಲಾಗುತ್ತಿದೆ. ಅದೇ ಹೊತ್ತಿಗೆ ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಬಜಪೆ, ಕೆಂಜಾರು, ಮಳವೂರು ಗ್ರಾಮಗಳಿಗೆ ದಿನಕ್ಕೆ 20 ಲಕ್ಷ ಲೀಟರ್‌ (2 ಎಂಎಲ್‌ಡಿ) ನೀರು ಸರಬರಾಜು ಆಗುತ್ತಿದೆ.
ಕೋಸ್ಟ್‌ ಗಾರ್ಡ್‌ಗೆ ದಿನಕ್ಕೆ 7.5 ಲಕ್ಷ ಲೀಟರ್‌

ಕೋಸ್ಟ್‌ ಗಾರ್ಡ್‌ಗೆ ದಿನಕ್ಕೆ 7.5 ಲಕ್ಷ ಲೀಟರ್‌ ಅವಶ್ಯಕತೆಯ ಬಗ್ಗೆಯೂ ಯೋಜನೆ ರೂಪಿಸಲಾಗಿದೆ ಎಂದು ಕೆಲವು ಮೂಲಗಳು ತಿಳಿಸಿದೆ.

Advertisement

40 ಗ್ರಾಮಗಳಿಗೆ 11 ಎಂಎಲ್‌ಡಿ ನೀರು ಬೇಡಿಕೆ
ಮಂಗಳೂರು ನಗರ ಉತ್ತರ, ಮೂಡುಬಿದಿರೆ ಮತ್ತು ಬಂಟ್ವಾಳ ಕ್ಷೇತ್ರದ ಗ್ರಾಮವನ್ನೊಳಗೊಂಡ 40 ಗ್ರಾಮಗಳಿಗೆ 11 ಎಂಎಲ್‌ಡಿ ನೀರು ಫ‌ಲ್ಗುಣಿ ನದಿಯಿಂದಲೇ ಆಗಲಿದೆ. ಈಗಾಗಲೇ ಗುರುಪುರ ಸೇತುವೆ ಬಳಿ ಜ್ಯಾಕ್‌ವೆಲ್‌ ನಿರ್ಮಾಣಗೊಂಡಿದೆ. ಕೊಂಪದವಿನಲ್ಲಿ ನೀರಿನ ಶುದ್ಧಿಕರಣ ಘಟಕವೂ ಆಗಿದೆ. ಪ್ರಾಯೋಗಿಕವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಒಟ್ಟು 143 ಕೋಟಿ ರೂಪಾಯಿ ಅನುದಾನದಲ್ಲಿ ಈ ಯೋಜನೆ ಕಾರ್ಯಗತವಾಗುತ್ತಿದೆ. 583 ಜನವಸತಿ ಪ್ರದೇಶಗಳಿಗೆ, 230 ಟ್ಯಾಂಕ್‌ಗಳಿಗೆ ನೀರು ಸರಬರಾಜು ಆಗಲಿದೆ.

ಶೇಖರಣಾ ಸಾಮರ್ಥ್ಯ ಹೆಚ್ಚಳಕ್ಕೆ ಆದ್ಯತೆ
ನೀರಿಗೆ ಹೆಚ್ಚುವರಿ ಬೇಡಿಕೆ ಇರುವುದರಿಂದ ಮಳವೂರು ಡ್ಯಾಂನ ಕಿಂಡಿಗಳಿಗೆ ಹಲಗೆ ಹಾಕುವ ಕಾರ್ಯ ಬೇಗನೆ ನಡೆಯಬೇಕಾಗುತ್ತದೆ. ಹಿಂದೆ ನವಂಬರ್‌ ತಿಂಗಳಲ್ಲಿ ಹಲಗೆ ಹಾಕುವ ಕ್ರಮ ಇತ್ತು. ಮುಂದೆ ಅಕ್ಟೋಬರ್‌ನಲ್ಲೇ ಹಾಕಬೇಕಾಗಬಹುದು. ವೆಂಟೆಡ್‌ ಡ್ಯಾಂ 180 ಮೀಟರ್‌ ಉದ್ದವಿದೆ. 80 ಕಿಂಡಿಗಳಿವೆ. ಇನ್ನು ಹೆಚ್ಚು ನೀರು ಸಬರಾಜಾಗುವುದರಿಂದ ಎಪ್ರಿಲ್‌, ಮೇ ತಿಂಗಳಲ್ಲಿ ನೀರಿನ ಮಟ್ಟ ಕಡಿಮೆ ಆಗಬಹುದು. ಅದನ್ನು ಮೊದಲೇ ಪರಿಗಣಿಸಿ ಕ್ರಮ ಕೈಗೊಳ್ಳಬೇಕು.

ಎಲ್ಲೆಲ್ಲಿಗೆ ನೀರು ಸರಬರಾಜು ವಿಸ್ತರಣೆ?
ಕಿನ್ನಿಗೋಳಿ, ಬಜಪೆ ಮತ್ತು ಮೂಲ್ಕಿ ಪಟ್ಟಣ ಪಂಚಾಯತ್‌ಗೆ ಮಳವೂರು ವೆಂಟಡ್‌ ಡ್ಯಾಂನಿಂದ ನೀರು ಪೂರೈಸಲು ಮಳವೂರಿನಲ್ಲಿ ಜಾಕ್‌ವೆಲ್‌ ಕಾಮಗಾರಿ ಆರಂಭಗೊಂಡಿದೆ. ಮೂಲ್ಕಿ ಹಾಗೂ ಬಜಪೆ ಪಟ್ಟಣ ಪಂಚಾಯತ್‌ಗೆ ತಲಾ 7 ಎಂಎಲ್‌ಡಿ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ಗೆ 6 ಎಂಎಲ್‌ಡಿ ನೀರು ಅವಶ್ಯಕತೆಯ ಬಗ್ಗೆ ಯೋಜನೆ ರೂಪಿಸಲಾಗಿದೆ. ಅಂದರೆ ಈ ಮೂರು ಪಟ್ಟಣ ಪಂಚಾಯತ್‌ಗಳಿಗೆ 20 ಎಂಎಲ್‌ಡಿ ನೀರು ಬೇಕಾಗುತ್ತದೆ.

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next