ಹೊಸಪೇಟೆ: ಇಲ್ಲಿನ ಟಿ.ಬಿ. ಡ್ಯಾಂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹನುಮಂತಪ್ಪ ಹಾಗೂ ಹೇಮಾವತಿ ದಂಪತಿ ಪುತ್ರ ಕೀರ್ತಿ ಕಿರಣ್ ಎಚ್.ಪೂಜಾರ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ 115ನೇ ರ್‍ಯಾಂಕ್ ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಕೀರ್ತಿ ಕಿರಣ್ ಎಚ್.ಪೂಜಾರ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ 115ನೇ ರ್‍ಯಾಂಕ್ ಗಳಿಸಿದ್ದು, ರಾಜ್ಯಕ್ಕೆ 2ನೇ ರ್‍ಯಾಂಕ್ ಪಡೆದಿದ್ದಾರೆ.
ಟಿ.ಬಿ.ಡ್ಯಾಂನ ಸಂತ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹಾಗೂ ವ್ಯಾಸನಕೇರಿ ಸ್ಮಯೋರ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪೂರೈಸಿರುವ ಕೀರ್ತಿ ಕಿರಣ್ ಪೂಜಾರ್, ಎಸ್ಸೆಸ್ಸೆಲ್ಸಿ ಯಲ್ಲಿ ಶೇ. 93ರಷ್ಟು ಅಂಕಗಳೊಂದಿಗೆ, ಪಿಯುಸಿ ಶೇ. 95ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು. ನಂತರ 2010ರಲ್ಲಿ ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ.
2014 ರಲ್ಲಿ ಮದ್ರಾಸ್ ಐಐಟಿಯಿಂದ ಎಂ.ಟೆಕ್ ಪದವಿ ಪಡೆದಿರುವ ಇವರು ಬೆಂಗಳೂರಿನ ಬಿಎಚ್‌ಇಎಲ್‌ನಲ್ಲಿ ಕೂಡ ಎಂಜಿನಿಯರ್ ಆಗಿ, ಡಿಆರ್ ಒದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಒಟ್ಟು ವಿವಿಧೆಡೆ ನಾಲ್ಕೂವರೆ ವರ್ಷ ಸೇವೆ ಸಲ್ಲಿಸಿರುವ ಕೀರ್ತಿ ಕಿರಣ್ ಪೂಜಾರ್ ಈ ಬಾರಿಯ ಪಿಎಸ್‌ಸಿ ಪರೀಕ್ಷೆಯಲ್ಲಿ 115ನೇ ರ್‍ಯಾಂಕ್ ಗಳಿಸುವ ಮೂಲಕ ನಗರಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ನಿಗದಿತ ಗುರಿಯೊಂದಿಗೆ ಸತತ ಪರಿಶ್ರಮಪಟ್ಟು ಓದಿದರೆ ಜೀವನದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ. ಸತತ ಓದಿನೊಂದಿಗೆ ಗ್ರಹಿಕೆ ಇದ್ದರೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಗಳಿಸಬಹುದು.
ಕೀರ್ತಿ ಕಿರಣ್ ಎಚ್.ಪೂಜಾರ್