Advertisement

Competitive Exam: ಯುಪಿಎಸ್‌ಸಿ ಮಾದರಿ ಕೆಪಿಎಸ್‌ಸಿಯಲ್ಲೂ ಸುಧಾರಣೆಯಾಗಲಿ: ಸಿಎಂ

09:23 PM Sep 25, 2024 | Team Udayavani |

ಬೆಂಗಳೂರು:  ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಕೂಡ ಯುಪಿಎಸ್‌ಸಿ ಮಾದರಿಯಲ್ಲಿ ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುವ  ಕುರಿತು ಸುಧಾರಣಾ ಕ್ರಮಗಳ ಕೈಗೊಳ್ಳುವಂತೆ ಮುಖ್ಯಮಂತ್ರಿ  ಸಿದ್ದರಾಮಯ್ಯ (Siddaramaiah) ಸೂಚನೆ ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿ ಸರ್ಕಾರದ ವತಿಯಿಂದ ನಡೆದ ವಿವಿಧ ನೇಮಕಾತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ನೇಮಕಾತಿ ಪ್ರಕ್ರಿಯೆಗಳ ವಿಳಂಬ, ಕಾನೂನು ತೊಡಕುಗಳ ಕುರಿತು ಹಾಗೂ 371 ಜೆ ಅಡಿ ಮೀಸಲಾತಿಗೆ ಸಂಬಂಧಿಸಿದ ಸವಾಲುಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಪ್ರತಿ ವರ್ಷ ಎಲ್ಲ ಇಲಾಖೆಗಳ ನೇಮಕಾತಿಗೆ ಏಕಕಾಲಕ್ಕೆ ಅಧಿಸೂಚನೆ ಹೊರಡಿಸಲು ಅನುಕೂಲವಾಗುವಂತೆ ಎಲ್ಲ ಇಲಾಖೆಗಳು ನಿಗದಿತ ಗಡುವಿನೊಳಗೆ ನೇಮಕಾತಿ ಕುರಿತು ಪ್ರಸ್ತಾವನೆಗಳ ಸಲ್ಲಿಸಲು ಸೂಚನೆ ನೀಡಿದ್ದಾರೆ.

ಪರೀಕ್ಷಾ ವೇಳಾಪಟ್ಟಿಯಲ್ಲಿ ಫಲಿತಾಂಶ ಪ್ರಕಟಣೆಯ ದಿನಾಂಕ ನಿಗದಿ, ಸಿಬ್ಬಂದಿ ಕೊರತೆ, ವಿವಿಧ ನೇಮಕಾತಿ ಪ್ರಾಧಿಕಾರಗಳ ಪರೀಕ್ಷೆಗಳೊಂದಿಗೆ ದಿನಾಂಕ ಕ್ಲ್ಯಾಷ್​ ಆಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ವಿವಿಧ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ನ್ಯೂನ್ಯತೆಯೂ ನೇಮಕಾತಿ ವಿಳಂಬಕ್ಕೆ ಒಂದು ಕಾರಣ ಎಂದು ಮನವರಿಕೆ ಮಾಡಲಾಗಿದೆ.

ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳ ಕುರಿತು ಸವಿಸ್ತಾರವಾಗಿ ಪರಿಶೀಲಿಸಿ, ಸಚಿವ ಸಂಪುಟ ಉಪಸಮಿತಿಯ ಆದೇಶಗಳ ಪಾಲನೆಯ ಕುರಿತು ಸಚಿವ ಸಂಪುಟದ ಮುಂದೆ ವಿಷಯ ಮಂಡಿಸುವುದು. ಸಚಿವ ಸಂಪುಟ ಉಪ ಸಮಿತಿಯ ಸೂಚನೆಗಳನ್ನು ಇಲಾಖಾ ಮುಖ್ಯಸ್ಥರು ಪಾಲಿಸಬೇಕು. ಒಂದು ವೇಳೆ ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.

ಪ್ರತಿ ನೇಮಕಾತಿ ಪ್ರಕ್ರಿಯೆಯೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಲ್ಯಾಣ ಕರ್ನಾಟಕ ಕೋಶದ ಸಹಮತಿಯೊಂದಿಗೆ ಅಧಿಸೂಚನೆ ಹೊರಡಿಸಬೇಕು. ಅಂತಿಮ ಆಯ್ಕೆ ಪಟ್ಟಿ ಪ್ರಕಟವಾದ ನಂತರ ಸಿಂಧುತ್ವ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗುವುದರಿಂದ ನೇಮಕಾತಿ ಆದೇಶ ನೀಡುವಲ್ಲಿಯೂ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಬಗ್ಗೆ ಇಲಾಖಾ ಮುಖ್ಯಸ್ಥರು, ಪ್ರತಿ ವಾರ ಪರಿಶೀಲನೆ ಮಾಡಬೇಕು. ಸುತ್ತೋಲೆಗಳ ಕೈಪಿಡಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಬೇಕು. ಮುಂದಿನ ವಾರ ಮತ್ತೊಮ್ಮೆ ಸಭೆ ಕರೆದು ಸಂಪೂರ್ಣ ಮಾಹಿತಿ ಪಡೆದು ಚರ್ಚಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next