ದೇವರನ್ನು ಪೂಜಿಸುವಾಗ ನಾವು ಪ್ರಕೃತಿಯನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತೇವೆ. ದೇವರು ಪ್ರಕೃತಿಯ ಪ್ರತಿರೂಪವೂ ಹೌದು. ಪತ್ರೆಪೂಜೆ ಮತ್ತು ಪುಷ್ಪಪೂಜೆ ಎರಡೂ ಪ್ರಕೃತಿಗೆ ನೇರವಾಗಿ ಸಂಬಂಧಿಸಿದವು.
ಎಲ್ಲಾ ಬಗೆಯ ದೇವರ ಪೂಜೆಯಲ್ಲಿ ಪತ್ರೆ ಪೂಜೆ ಮತ್ತು ಪುಷ್ಪಪೂಜೆ ಇದ್ದೇ ಇರುತ್ತದೆ. ಈ ಪೂಜಾ ಕ್ರಮದಲ್ಲಿ ಹಲವಾರು ಬಗೆಯ ಪತ್ರೆಗಳನ್ನೂ ಪುಷ್ಪಗಳನ್ನೂ ದೇವರಿಗೆ ಮಂತ್ರಮುಖೇನ ಸಮರ್ಪಿಸಲಾಗುತ್ತದೆ. ಪತ್ರೆವೆಂದರೆ ಎಲೆ, ಪುಷ್ಪವೆಂದರೆ ಹೂ. ಪರಿಸರದಲ್ಲಿನ ವಿಧವಿಧವಾದ ಹೂವು, ಎಲೆಗಳನ್ನು ಹುಡುಕಿತಂದು ದೇವರಿಗೆ ಅರ್ಪಿಸುವುದರಿಂದ ದೇವರು ಸಂಪ್ರೀತನಾಗಿ ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆಂಬ ನಂಬಿಕೆ ಇದೆ.
ಆದರೆ ಈ ಎಲೆಹೂಗಳನ್ನು ಪೂಜೆ ಮಾಡುವುದರ ನಿಜವಾದ ಅಗತ್ಯತೆ ಏನು? ಎಂಬುದನ್ನು ಹುಡುಕುತ್ತ ಹೋದರೆ ನಮ್ಮ ಆಯಸ್ಸು, ಜಗತ್ತಿನ ಆಯಸ್ಸು ಹಾಗೂ ಆರೋಗ್ಯದ ಬಲ ಹೆಚ್ಚಿಸಲು ಇರುವ ಮಾರ್ಗವೇ ಇದು ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ. ದೇವರಿಗೂ, ಪ್ರಕೃತಿಗೂ ಅವಿನಾಭಾವ ಸಂಬಂಧವಿದೆ. ದೇವರನ್ನು ಪೂಜಿಸುವಾಗ ನಾವು ಪ್ರಕೃತಿಯನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತೇವೆ. ದೇವರು ಪ್ರಕೃತಿಯ ಪ್ರತಿರೂಪವೂ ಹೌದು. ಪತ್ರೆಪೂಜೆ ಮತ್ತು ಪುಷ್ಪಪೂಜೆ ಎರಡೂ ಪ್ರಕೃತಿಗೆ ನೇರವಾಗಿ ಸಂಬಂಧಿಸಿದವು.
ಪರಿಸರ, ಪ್ರಪಂಚ, ವಿಶ್ವ ಹೇಗೆ ಕರೆದರೂ ಅದು ಪ್ರಕೃತಿಯೇ. ಈ ಪ್ರಕೃತಿಯು ಶುದ್ಧವಾಗಿದ್ದಲ್ಲಿ ಮಾತ್ರ ಉಸಿರಾಡುವ ಎಲ್ಲಾ ಜೀವಿಗಳ ಉಳಿವು ಸಾಧ್ಯ. ಅದಕ್ಕೆ ಕಾರಣ, ಈ ಪ್ರಕೃತಿಯಲ್ಲಿ ಹಸಿರು. ಹಸಿರು ಎಂದರೆ ಗಿಡ, ಮರ, ಕಾಡು ಎಲ್ಲ. ಈ ಎಲ್ಲವೂ ಸಾಕಷ್ಟು ಇದ್ದಾಗ ಮಾತ್ರ ಜಗದ ಆಯಸ್ಸು ಹೆಚ್ಚುತ್ತದೆ; ಆರೋಗ್ಯಕರವಾದ ವಾತಾವರಣವಿರುತ್ತದೆ. ಪತ್ರೆ ಪೂಜೆಯನ್ನು ಮಾಡಬೇಕಾದರೆ ನಾವು ಆ ಮಂತ್ರಗಳಲ್ಲಿ ಸೂಚಿಸಿದ ಎಲೆಯನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಅವು ಎಲ್ಲಿಯೂ ಸಿಗದಾದಾಗ ನಾವೇ ಅಂತಹ ಎಲೆಯ ಅಥವಾ ಹೂವಿನ ಗಿಡಗಳನ್ನು ಬೆಳೆಸಬೇಕಾಗುತ್ತದೆ. ಇದರಿಂದ ವಿವಿಧ ರೂಪದ ಗಿಡಗಳೂ ಮರಗಳೂ ಬೆಳೆಯುವುದು ಸಾಧ್ಯ. ಗಿಡಗಳಿಂದ ಮರಗಳು, ಮರಗಳಿಂದ ಕಾಡು, ಗುಡ್ಡಬೆಟ್ಟ, ಮಳೆ, ಹಳ್ಳ, ತೊರೆ ಎಲ್ಲವೂ ಸಾಧ್ಯ. ಅಂದರೆ, ದೇವರಪೂಜೆ ಎಂಬುದು ಪರಿಸರದ ಬೆಳವಣಿಗೆಗೆ ಕಾರಣವಾಗುವ ಮುಖ್ಯ ಅಂಶಗಳಲ್ಲೊಂದು ಎಂಬುದು ಸತ್ಯವಾದ ಸಂಗತಿ. ಅದೆಷ್ಟೋ ಪತ್ರೆಯ ಗಿಡಗಳು ಈ ಕಾರಣದಿಂದಾಗಿಯೇ ಬೆಳೆಯುವಂತಾಗಿ, ಉಳಿಯುವಂತಾದರೆ ಪೂಜೆಯ ಫಲ ಸಿಕ್ಕಂತೆ.
ಹಸಿರಿದ್ದರೆ ಉಸಿರು ಎಂಬುದು ವೈಜ್ಞಾನಿಕ ಸತ್ಯ. ಆ ಸತ್ಯದ ಹಿಂದೆ ದೇವರೆನ್ನುವ ಶಕ್ತಿ ಹೇಗೆಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇದೊಂದು ಪುಟ್ಟ ನಿದರ್ಶನ. ಪತ್ರೆ ಪುಷ್ಪಪೂಜೆಯ ನೆಪದಲ್ಲಾದರೂ ಗಿಡಮರಗಳು ಬೆಳೆದರೆ ವಿಶ್ವ ಪ್ರಾಕೃತಿಕ ವಿಕೋಪಕ್ಕೊಳಗಾಗದು. ಆದರೆ ಇಂದು ಆಡಂಬರಕ್ಕೆ ಶರಣಾಗಿರುವ ನಾವು ಎಲ್ಲವನ್ನೂ ಮಂತ್ರಕಷ್ಟೇ ಸೀಮಿತಗೊಳಿಸಿಬಿಟ್ಟಿದ್ದೇವೆ. ಪತ್ರೆ ಪೂಜೆಯಲ್ಲಿ ಹೇಳಿದ ಎಲೆಯನ್ನು ತರುವ ಪ್ರಯತ್ನವನ್ನು ನಾವು ಮಾಡುವುದಿಲ್ಲ. ಮಂತ್ರವನ್ನುತ್ಛರಿಸುತ್ತ ಅಕ್ಷತೆಯ ಕಾಳನ್ನು ಹಾಕಿ ಪತ್ರ ಅಥವಾ ಪುಷ್ಪಪೂಜೆ ಮಾಡಿಬಿಡುತ್ತೇವೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಆ ಪತ್ರೆಪೂಜೆಯಲ್ಲಿ ಹೇಳಿದ ಎಲೆಯ ಗಿಡಗಳನ್ನು ಉಳಿಸಿ ಬೆಳೆಸಬೇಕಾದುದು ನಮ್ಮ ಕರ್ತವ್ಯ. ಇವೆಲ್ಲವೂ ನಮ್ಮ ರಕ್ಷಣೆಗಾಗಿಯೇ ಇರುವಂಥವು. ಹಾಗಾಗಿ, ಪೂಜೆ ಎಂಬುದು ಕೇವಲ ಪೇಟೆಯಿಂದ ತಂದ ಫಲಪುಷ್ಪಾದಿಗಳನ್ನು ಅರ್ಪಿಸುವುದಷ್ಟಕ್ಕೇ ಸೀಮಿತವಲ್ಲ ಎಂಬುದನ್ನು ನಾವು ಕಣ್ತೆರೆದು ನೋಡಬೇಕು; ಅರಿಯಬೇಕು.
ವಿಷ್ಣು ಭಟ್ಟ ಹೊಸ್ಮನೆ