Advertisement

ಇಲ್ಲಿ  ಹೊಂಡಗಳದ್ದೇ ಕಾರುಬಾರು.!?

08:55 AM Jul 24, 2017 | Team Udayavani |

ಮಹಾನಗರ: ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಕಂಕನಾಡಿ- ಪಂಪ್‌ವೆಲ್‌ ಬೈಪಾಸ್‌ ರಸ್ತೆಯು ಪೂರ್ತಿ ಹೊಂಡ ಗುಂಡಿಗಳಿಂದ ಕೂಡಿದ್ದು, ಸಂಚಾರ ದುಸ್ತರವೆನಿಸಿದೆ. ರಸ್ತೆಯಲ್ಲಿ ಬಹುತೇಕ ಅಪಾಯಕಾರಿ ಹೊಂಡಗಳೇ ಸೃಷ್ಟಿಯಾಗಿರುವುದರಿಂದ ಅಪಘಾತದ ಭೀತಿಯೂ ಎದುರಾಗಿದೆ. 

Advertisement

ಈ ರಸ್ತೆಯಲ್ಲಿ ನಿತ್ಯ ನೂರಾರು ಬಸ್‌ಗಳ ಜತೆಗೆ ಸಾವಿರಾರು ವಾಹನಗಳು ಓಡಾ ಡುತ್ತವೆ. ಕಾಸರಗೋಡು, ಬಿ.ಸಿ. ರೋಡ್‌, ದೇರಳಕಟ್ಟೆ ಭಾಗಗಳಿಗೆ ತೆರಳುವ ಬಸ್ಸುಗಳು ಇದೇ ರಸ್ತೆಯಲ್ಲಿ ಸಾಗುತ್ತಿರುವುದರಿಂದ ದಿನದ ಬಹುತೇಕ ಹೊತ್ತು ವಾಹನಗಳ ಒತ್ತಡ ಹೆಚ್ಚಿರುತ್ತದೆ. ಪ್ರಸ್ತುತ ಹೊಂಡಗಳು ಸೃಷ್ಟಿ ಯಾಗಿ ಸುಗಮ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. 

ಮಳೆಗಾಲದ ಆರಂಭದಲ್ಲೇ ಹೊಂಡಗಳು ಸೃಷ್ಟಿ ಯಾಗಿದ್ದವು. ಪ್ರಸ್ತುತ ದಿನೇ ದಿನೇ ಹೊಂಡಗಳ ಗಾತ್ರ ದೊಡ್ಡದಾಗುತ್ತಿದ್ದು, ಅಪಾಯ ಕಾರಿಯಾಗಿ ಮಾರ್ಪಟ್ಟಿದೆ. ಮಳೆಗಾಲ ಆರಂಭವಾಗುವ ಮುಂಚೆಯೇ ರಸ್ತೆಗಳಿಗೆ ಸೂಕ್ತ ಕಾಯಕಲ್ಪ ಮಾಡಿದರೆ ಈ ರೀತಿಯ ಸಮಸ್ಯೆಗಳು ಉಂಟಾಗುತ್ತಿರಲಿಲ್ಲ. ಪ್ರಸ್ತುತ ವಾಹನಗಳು ಎದ್ದು ಬಿದ್ದು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

ದುರಸ್ತಿಯಾಗದ ಹೊಂಡ
ನಗರದ ಬೆಂದೂರುವೆಲ್‌ ಭಾಗದಿಂದ ಕಂಕನಾಡಿ ಜಂಕ್ಷನ್‌ಗೆ ತೆರಳುವಲ್ಲಿ ಬೃಹತ್‌ ಹೊಂಡವೊಂದು ಸೃಷ್ಟಿಯಾಗಿದೆ. ಬೆಂದೂರುವೆಲ್‌ನಿಂದ ವೆಲೆನ್ಸಿಯಾ, ಮಂಗಳಾದೇವಿ ಭಾಗಕ್ಕೆ ಹೋಗುವವರು ನೇರವಾಗಿ ಕಂಕನಾಡಿ ಜಂಕ್ಷನ್‌ನ ಸಿಗ್ನಲ್‌ ದಾಟಿ ಹೋಗಬೇಕಿದೆ. ಆದರೆ ಪಂಪ್‌ವೆಲ್‌ ಭಾಗಕ್ಕೆ ಹೋಗುವವರಿಗೆ ಫ್ರಿಲೆಫ್ಟ್‌ ಮೂಲಕ ಹೋಗಲು ಅನುಕೂಲವಾಗುವಂತೆ ಬ್ಯಾರಿಕೇಡ್‌ ಇಡಲಾಗಿದೆ. ಅದೇ ರಸ್ತೆಯಲ್ಲಿ ಹೊಂಡಗಳ ಸೃಷ್ಟಿಯಾಗಿ ವಾಹನಗಳು ಎಡಕ್ಕೆ ಹೋಗುವ ಬದಲು ಬಲಭಾಗದಿಂದಲೇ ಸಾಗುತ್ತಿವೆ. ಹೀಗಾಗಿ ಟ್ರಾಫಿಕ್‌ ಜಾಮ್‌ ಕೂಡ ಸಂಭವಿಸುತ್ತದೆ. ಬಸ್‌ಗಳು ಹೊಂಡಕ್ಕೆ ಬಿದ್ದು ಚಲಿಸಿದರೂ, ಸಣ್ಣ ವಾಹನಗಳು ಬಲಭಾಗದಿಂದಲೇ ಹೋಗುತ್ತದೆ. 

ಪ್ರತಿವರ್ಷವೂ ಹೀಗೆ
ಕಂಕನಾಡಿ-ಪಂಪ್‌ವೆಲ್‌ ರಸ್ತೆ ಪ್ರತಿ ವರ್ಷವೂ ಹೀಗೆ ಇರುತ್ತದೆ. ನಗರದ ಡಾಮರು ರಸ್ತೆಗಳು ಪದೇ ಪದೇ ಹದಗೆಡುತ್ತಿರುವುದರಿಂದ ಇಲ್ಲಿನ ರಸ್ತೆಗಳನ್ನು ಕಾಂಕ್ರೀಟ್‌ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಆದರೆ ನಗರದ ಪ್ರಮುಖ ಪ್ರದೇಶವಾಗಿರುವ ಕಂಕನಾಡಿಯಲ್ಲಿ ಇನ್ನೂ ಡಾಮರು ರಸ್ತೆಯೇ ಇರುವುದರಿಂದ ಈ ರೀತಿಯ ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. 

Advertisement

ಇದು ಇಳಿಜಾರು ರಸ್ತೆಯಾಗಿದ್ದು ಸಮರ್ಪಕ ಚರಂಡಿ ವ್ಯವಸ್ಥೆಯೂ ಇಲ್ಲ. ಇರುವ ಚರಂಡಿಗೆ ಒಂದು ಭಾಗದಲ್ಲಿ ಗುಡ್ಡ ಜರಿದು ಹಾನಿಯಾಗಿದೆ. ಅದನ್ನು ದುರಸ್ತಿ ಪಡಿಸದೇ ಇರುವುದರಿಂದ ಮಳೆನೀರು ರಸ್ತೆಯಲ್ಲೇ ಹರಿಯುತ್ತಿದೆ. ರಸ್ತೆಯನ್ನು ಅಗೆದು ಡ್ರೈನೇಜ್‌ನ ಮ್ಯಾನ್‌ಹೋಲ್‌ ನಿರ್ಮಿಸಿದ್ದು, ಪ್ರಸ್ತುತ ಮ್ಯಾನ್‌ಹೋಲ್‌ನ ಸುತ್ತ ಹೊಂಡಗಳು ಸೃಷ್ಟಿಯಾಗಿವೆ. 

Advertisement

Udayavani is now on Telegram. Click here to join our channel and stay updated with the latest news.

Next