ಬೆಂಗಳೂರು: ಪಾಲಿಕೆ ವ್ಯಾಪ್ತಿ ಒಣತ್ಯಾಜ್ಯ ಘಟಕಗಳ ಅಭಿವೃದ್ಧಿಪಡಿಸಲು ಮುಂದಾಗಿರುವ ಬಿಬಿಎಂಪಿಯು ಘಟಕಗಳ ಪರಿಶೀಲನೆಗೆ ಸಿದ್ಧತೆ ನಡೆಸಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ನಿತ್ಯ ಉತ್ಪತ್ತಿಯಾಗುವ 4 ಸಾವಿರ ಟನ್ ತ್ಯಾಜ್ಯದಲ್ಲಿ ಶೇ 25 ರಿಂದ 30ರಷ್ಟು ಒಣತ್ಯಾಜ್ಯವಿರುತ್ತದೆ. ಆ ಪೈಕಿ ಸ್ವಲ್ಪ ಪ್ರಮಾಣದ ತ್ಯಾಜ್ಯವನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಕಳುಹಿಸಿದರೆ, ಉಳಿದ ತ್ಯಾಜ್ಯವನ್ನು ಪಾಲಿಕೆಯಲ್ಲಿರುವ 164 ಒಣತ್ಯಾಜ್ಯ ಸಂಗ್ರಹ ಘಟಕಗಳಿಗೆ ಕಳುಹಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಘಟಕಗಳ ಸ್ಥಿತಿಗತಿಯ ಕುರಿತು ಪರಿಶೀಲಿಸಲು ಪಾಲಿಕೆ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಪಾಲಿಕೆಯಲ್ಲಿರುವ ಎಲ್ಲ 164 ಒಣತ್ಯಾಜ್ಯ ಸಂಗ್ರಹ ಘಟಕಗಳನ್ನು ಸರ್ಕಾರೇತರ ಸಂಸ್ಥೆಗಳು ನಿರ್ವಹಿಸುತ್ತಿದ್ದು, ಸಂಗ್ರಹವಾಗುವ ಒಣತ್ಯಾಜ್ಯವನ್ನು ಮರುಬಳಕೆ ಮಾಡಲಾಗುತ್ತಿವೆ. ಆ ಹಿನ್ನೆಲೆಯಲ್ಲಿ ಘಟಕಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಒದಗಿಸುವ ಮೂಲಕ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ.
ಅದರಂತೆ ಮೊದಲಿಗೆ ಒಣತ್ಯಾಜ್ಯ ಘಟಕಗಳಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ, ಅಲ್ಲಿನ ಲೋಪಗಳು, ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ವರದಿ ಸಿದ್ಧಪಡಿಸಲು ತಿರ್ಮಾನಿಸಲಾಗಿದೆ. ಆದರೆ, ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಯನ್ನು ಲೋಕಸಭಾ ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಗಿದ ಬಳಿಕ ಪರಿಶೀಲನಾ ಕಾರ್ಯಕ್ಕೆ ಚಾಲನೆ ನೀಡಲು ಪಾಲಿಕೆ ನಿರ್ಧರಿಸಿದೆ.
ಮೊದಲ ಹಂತದಲ್ಲಿ 10 ಘಟಕಗಳು ಮೇಲ್ದರ್ಜೆಗೆ: ಮೊದಲ ಹಂತದಲ್ಲಿ 10 ಘಟಕಗಳನ್ನು ಉನ್ನತೀಕರಿಸಲು ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಯುರೋಪಿಯನ್ ಮೂಲದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದ್ದು, ಆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ನೀಡಿದ ನಂತರ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು 10 ಘಟಕಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.