Advertisement

ಜನಜೀವನಕೆ ಕಂಟಕವಾದ ರಾಸಾಯನಿಕ ತ್ಯಾಜ್ಯ

12:32 PM Jul 15, 2017 | |

ಹುಮನಾಬಾದ: ಮಳೆಗಾಲದಲ್ಲಿ ನೀರು ಹರಿಯಬೇಕಿದ್ದ ಹಳ್ಳವೊಂದರಲ್ಲಿ ವಿಷಪೂರಿತ ರಾಸಾಯನಿಕ ಹರಿದಾಡುತ್ತಿದೆ. ಇದರಿಂದ ಸುತ್ತಲಿನ ಗ್ರಾಮಗಳ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಜಲಚರಗಳ ಜೀವಕ್ಕೂ ಕಂಟಕ ಎದುರಾಗಿದೆ.

Advertisement

ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶಗಳಲ್ಲಿ ಅನೇಕ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಅನೇಕ ರಾಸಾಯನಿಕ, ಔಷಧಗಳ ಕಚ್ಚಾ ವಸ್ತು ಹಾಗೂ ರೈತರು ಉಪಯೋಗಿಸುವ ರಾಸಾಯನಿಕ ಗೊಬ್ಬರ ತಯಾರಿಸಲಾಗಿತ್ತದೆ. ಇದರಿಂದ ಸುತ್ತಲಿನ ಗಡವಂತಿ, ಮಾಣಿಕನಗ ಸೇರಿದಂತೆ ಅನೇಕ ಗ್ರಾಮಗಳ ಜನರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತಿದೆ. ಆದರೂ ಕಾರ್ಖಾನೆಗಳ ಮಾಲೀಕರು ಯಾವುದನ್ನೂ ಲೇಕ್ಕಿಸದೆ ಕಾರ್ಖಾನೆಗಳ ತ್ಯಾಜ್ಯವನ್ನು ನೇರವಾಗಿ ಹಳ್ಳಕ್ಕೆ ಬಿಡುತ್ತಿದ್ದಾರೆ.

ಕೆಂಪು ಲ್ಯಾಟರೈಟ್‌ ಮಣ್ಣು: ಜಿಲ್ಲೆಯ ಪೈಕಿ ಬೀದರ, ಹುಮನಾಬಾದ ತಾಲೂಕಿನಲ್ಲಿ ಕೆಂಪು ಲ್ಯಾಟರೈಟ್‌ ಮಣ್ಣು ಇದೆ. ಹೆಚ್ಚು ಮಳೆ ಆದರೂ ಈ ಭೂಮಿಯಲ್ಲಿ ನೀರು ಸರಳವಾಗಿ ಭೂಮಿಯಲ್ಲಿ ಇಂಗುವ ಗುಣ ಹೊಂದಿದೆ. ಹಾಗೆ ನೀರಿನೊಂದಿಗೆ ವಿಷಪೂರಿತ ರಾಸಾಯನಿಕ ಹಳ್ಳಗಳ ಮೂಲಕ ಹರಿದು ಅಂತರ್ಜಲಕ್ಕೆ ಸೇರುವುದು ಸುಲಭ. ಅಂತರ್ಜಲಕ್ಕೆ ವಿಷಪೂರಿತ ರಾಸಾಯನಿಕ ಸೇರಿದರೆ ಸುತ್ತಲ್ಲಿನ ಪ್ರದೇಶದಲ್ಲಿನ ಕೊಳವೆಬಾವಿ, ತೆರದ ಬಾವಿ ಹಾಗೂ ಇತರ ನೀರಿನ ಮೂಲಗಳ ಮೂಲಕ ಜನ-ಜಾನುವಾರುಗಳಿಗೆ ಮಾರಕವಾಗುತ್ತದೆ. ರಾಸಾಯನಿಕ ಮಿಶ್ರಿತ ನೀರು ಸೇವನೆಯಿಂದ ಜನರಲ್ಲಿ ವಿವಿಧ ಬಗೆಯ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸುತ್ತಲಿನ ಪ್ರದೇಶದಲ್ಲಿ ವಾಸಿಸುವ ಜನರು ರಾಸಾಯನಿಕ ಮಿಶ್ರಿತ ನೀರಿನ ಮಾದರಿ ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಿ ಯಾವ ರಾಸಾಯನಿಕ ಹರಿದು ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚಬಹುದು. ಯಾವ ಕಾರ್ಖಾನೆಯಲ್ಲಿ ಆ ರಾಸಾಯನಿಕ ಬಳಸಲಾಗುತ್ತಿದೆ ಎಂಬುದನ್ನು ಗುರುತಿಸಿ ನ್ಯಾಯಾಲಯದ ಮೊರೆ ಹೋಗಬಹುದಾಗಿದೆ.

ಸಮಸ್ಯೆ ಯಾರಿಗೆ ಹೇಳುವುದು?: ಹೊಲಕ್ಕೆ ಹೆಚ್ಚು ಪ್ರಮಾಣದ ರಾಸಾಯನಿಕ ಗೊಬ್ಬರ ಬಳಸಿದರೆ ಆ ಮಣ್ಣು ಶಕ್ತಿ ಕಳೆದುಕೊಳ್ಳುತ್ತದೆ. ಬೆಳೆಗಳು ಹಾಳಾಗುತ್ತವೆ. ಇಂತಹ ಸಂದರ್ಭದಲ್ಲಿ ವಿವಿಧ ಬಗೆಯ ವಿಷಪೂರಿತ ರಾಸಾಯನಿಕ ತ್ಯಾಜ್ಯ ಅಂತರ್ಜಲಕ್ಕೆ ಸೇರುತ್ತಿದೆ. ಹೊಲಗಳಲ್ಲಿನ ಬಾವಿಗಳಲ್ಲಿ ಎಣ್ಣೆಯಂತಹ ರಾಸಾಯನಿಕ ಕಂಡುಬರುತ್ತಿದೆ. ದೊಡ್ಡ ನಗರಗಳಿಂದ ಹೊರ ಹಾಕಿದ ವಿವಿಧ ಕಾರ್ಖಾನೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಸಮಸ್ಯೆಯನ್ನು ಯಾರಿಗೆ ಹೇಳಬೇಕು ಎಂಬುದೇ ತಿಳಿಯದಾಗಿದೆ ಎಂದು ಗಡವಂತಿ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಕೈಗಾರಿಕಾ ಪ್ರದೇಶದಲ್ಲಿನ ಔಷಧ, ರಾಸಾಯನಿಕದ ಕಾರ್ಖಾನೆಗಳು ಸರಕಾರದ ಮಾರ್ಗಸೂಚಿಗಳನ್ನು ಮೀರಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಗಡವಂತಿ ಗ್ರಾಮದಲ್ಲಿ ಅನೇಕರಿಗೆ ಚರ್ಮ ರೋಗ, ತುರಿಸುವಿಕೆ ಹಾಗೂ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಈ ಕುರಿತು ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದರೂ ಯಾರೂ ಸ್ಪಂದಿಸುತ್ತಿಲ್ಲ. ಅಧಿಕಾರಿಗಳ ಕರ್ತವ್ಯ ನಿರ್ಲಕ್ಷತನದಿಂದ ಜನರ ಜೀವನ ಸಂಕಷ್ಟಕ್ಕೆ ಸಿಲುಕುತ್ತಿದೆ. ಅಧಿಕಾರಿಗಳು ದೊಡ್ಡ ಅನಾಹುತ ಸಂಭವಿಸುವ ಮುನ್ನ ಸೂಕ್ತ ಮುನ್ನೆಚರಿಕೆ ಕ್ರಮ ಕೈಗೊಂಡು ಮಾರಕ ಕಾರ್ಖಾನೆಗಳನ್ನು ಬಂದ್‌ ಮಾಡಬೇಕು ಎಂದು ತಾಪಂ ಮಾಜಿ ಸದಸ್ಯ ಗಜೇಂದ್ರ ಕನಕಟ್ಟಕರ್‌, ಓಂಕಾರ ತುಂಬಾ ಸೇರಿದಂತೆ ಇತರೆ ಗ್ರಾಮಸ್ಥರು ತಿಳಿಸಿದ್ದಾರೆ.

Advertisement

ದುರ್ವಾಸನೆ ಸಮಸ್ಯೆ: ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು ಸರ್ಕಾರದ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಅಂತರ್ಜಲ ಮಾತ್ರವಲ್ಲದೇ ಗಾಳಿಯೂ ವಿಷಪೂರಿತವಾಗುತ್ತಿದೆ. ಪಟ್ಟಣ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳಲ್ಲಿ ಪ್ರತಿದಿನ ಸಂಜೆ ದುರ್ವಾಸನೆ ಹರಡುತ್ತಿದೆ. ಅಲ್ಲದೇ ಬೀದರ್‌-ಕಲಬುರಗಿ ರಸ್ತೆ ಮಧ್ಯ ಸಂಚರಿಸುವ ಜನರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ಇಲ್ಲಿದೆ. ಇದಕ್ಕೆ ಕಡಿವಾಣ ಹಾಕಬೇಕಿರುವ ಇಲಾಖೆಯಲ್ಲಿ ಪೂರ್ಣ ಅವಧಿಯ ಅಧಿಕಾರಿಗಳೆ ಇಲ್ಲ ಎಂಬ ಮಾತುಗಳು ಕೇಳಿಬಂದಿವೆ. ಇರುವ ಅಧಿಕಾರಿಗಳು ಮೊಬೈಲ್‌ ಕರೆಗಳನ್ನು ಸ್ವೀಕರಿಸುವುದಿಲ್ಲ. ಹಾಗಾಗಿ ಪ್ರತಿ ನಿತ್ಯ ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next