Advertisement

Pollution; ಹೆಚ್ಚುತ್ತಿರುವ ಮಾಲಿನ್ಯವೂ…ಹವಾಮಾನ ಬದಲಾವಣೆಯೂ…

11:12 PM Dec 01, 2023 | Team Udayavani |

ವಿಶ್ವದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಪರಿಣಾಮ ಹವಾಮಾನ ಬದಲಾವಣೆ ವರ್ಷಗಳುರುಳಿದಂತೆ ಬಲುದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಭೂ, ಜಲ, ವಾಯುಮಾಲಿನ್ಯದಿಂದಾಗಿ ಮಾನವನ ಆರೋಗ್ಯದಲ್ಲಿ ಏರುಪೇರು ಗಳಾಗುತ್ತಿವೆ ಮಾತ್ರವಲ್ಲದೆ ಜೀವಜಗತ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಯಿಂದ ಭಾರತವೂ ಹೊರತಾಗಿಲ್ಲ. ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರತೀ ವರ್ಷ ಡಿ.2ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತಿದೆ.

Advertisement

ಬಾಹ್ಯ ವಾಯುಮಾಲಿನ್ಯ: ಭಾರತ ದ್ವಿತೀಯ!
ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ಬಾಹ್ಯ ವಾಯುಮಾಲಿನ್ಯದಲ್ಲಿ ವಿಶ್ವದಲ್ಲಿ ಚೀನ ಮೊದಲ ಸ್ಥಾನದಲ್ಲಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. ವಾಯುಮಾಲಿನ್ಯದಿಂದ ದೇಶದಲ್ಲಿ ಅಂದಾಜು 2.18 ಮಿಲಿ ಯನ್‌ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ಹೇಳಿದೆ. ಅದ ರಲ್ಲೂ ಕೇವಲ ಕಾರ್ಖಾನೆಗಳು ಬಳಸುವ ಪಳೆಯುಳಿಕೆ ಇಂಧನ ಗಳಿಂದ ಉಂಟಾಗುವ ವಾಯುಮಾಲಿನ್ಯದಿಂದ ವಿಶ್ವದಲ್ಲಿ 5.1 ಮಿಲಿಯನ್‌ ಜನರು ಸಾವನ್ನಪ್ಪುತ್ತಿದ್ದಾರೆ. ದಕ್ಷಿಣ ಹಾಗೂ ಪೂರ್ವ ಏಷ್ಯಾದಲ್ಲಿ ವಾಯುಮಾಲಿನ್ಯದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಚೀನದಲ್ಲಿ ಪ್ರತೀ ವರ್ಷ 2.44 ಮಿಲಿಯನ್‌ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದೆ.

ಸಾಮೂಹಿಕ ಪ್ರಯತ್ನ ಅಗತ್ಯ
ಹವಾಮಾನ ಬದಲಾವಣೆಗೆ ಮೂಲ ಕಾರಣವಾಗಿರುವ ನೆಲ, ಜಲ ಮತ್ತು ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಡೀ ಜಗತ್ತು ಒಗ್ಗೂಡಬೇಕಿದೆ. ಈ ನಿಟ್ಟಿನಲ್ಲಿ ಜನತೆ ಕೂಡ ತಮ್ಮ ಕರ್ತವ್ಯ, ಹೊಣೆಗಾರಿಕೆಗಳನ್ನು ಅರಿತುಕೊಳ್ಳಬೇಕಿದೆ.

ಹಿನ್ನೆಲೆ
1984ರ ಡಿ. 2-3ರ ರಾತ್ರಿ ಭೋಪಾಲ್‌ನ ಕ್ರಿಮಿನಾಶಕ ತಯಾರಿಕ ಕಂಪೆನಿಯಾದ ಯೂನಿಯನ್‌ ಕಾರ್ಬನ್‌ ಇಂಡಿಯಾ ಲಿಮಿಟೆಡ್‌ನ‌ ಕಾರ್ಖಾನೆಯಲ್ಲಿ ಸಂಭವಿಸಿದ ಅನಿಲ ಸೋರಿಕೆ ದುರಂತದ ವೇಳೆ ಮಿಥೈಲ್‌ ಐಸೋಸೈನೆಟ್‌ ವಿಷಾನಿಲ ಸೋರಿಕೆಯಾಗಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಈ ದುರಂತದ ದುಷ್ಪರಿಣಾಮವನ್ನು ಆ ಪರಿಸರದ ಜನರು ಇಂದಿಗೂ ಅನುಭ ವಿಸುತ್ತಿದ್ದಾರೆ. ಭೋಪಾಲ್‌ ಅನಿಲ ದುರಂತದಲ್ಲಿ ಸಾವನ್ನಪ್ಪಿದವರ ಸ್ಮರಣೆಗಾಗಿ ಪ್ರತೀ ವರ್ಷ ಡಿ. 2ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ ಆಚರಿಸಲಾಗುತ್ತಿದೆ. ಎಲ್ಲ ತೆರನಾದ ಮಾಲಿನ್ಯವನ್ನು ನಿಯಂತ್ರಿಸುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಈ ಭೂಮಿಯ ಮೇಲಣ ಜೀವ ಸಂಕುಲದ ರಕ್ಷಣೆಯ ಸದುದ್ದೇಶದೊಂದಿಗೆ ಈ ದಿನವನ್ನು ಆಚರಿಸುತ್ತ ಬರಲಾಗಿದೆ.

ಪಳೆಯುಳಿಕೆ ಇಂಧನಗಳ ಬಳಕೆಗೆ ಕಡಿವಾಣ ಅನಿವಾರ್ಯ
ಹೆಚ್ಚಿನ ದೇಶಗಳು ಇಂದಿಗೂ ಪಳೆಯುಳಿಕೆ ಇಂಧನ ಶಕ್ತಿಯ ಮೇಲೆ ಅವಲಂಬಿತವಾಗಿರುವುದರಿಂದ ವಾಯು ಮಾಲಿನ್ಯ ನಿಯಂತ್ರಣ ಕಷ್ಟಸಾಧ್ಯವಾಗುತ್ತಿದೆ. ಈ ಕಾರಣದಿಂದಾಗಿಯೇ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಯನ್ನು ಕಡಿಮೆ ಮಾಡಿದಲ್ಲಿ ವಾಯುಮಾಲಿನ್ಯ ದಿಂದಾಗಿ ಸಂಭವಿಸುತ್ತಿರುವ ಸಾವುಗಳಲ್ಲಿ ಶೇ.90ರಷ್ಟು ತಡೆಗಟ್ಟಬಹುದು ಎಂದು ವರದಿ ಬೆಟ್ಟು ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next