Advertisement

ಮಾಲಿನ್ಯ ಮಂಡಲಿ ಅಧ್ಯಕ್ಷ-ಕಾರ್ಯದರ್ಶಿ ಕಿತ್ತಾಟ

10:53 PM Jul 16, 2023 | Team Udayavani |

ಬೆಂಗಳೂರು: ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಯ ನಡುವೆ ಕೆಲವು ದಿನಗಳಿಂದ ನಡೆಯುತ್ತಿದ್ದ “ಅಧಿಕಾರ’ದ ಜಟಾಪಟಿ ತಾರಕಕ್ಕೇರಿದೆ.

Advertisement

ಮಂಡಳಿ ಅಧ್ಯಕ್ಷ ಶಾಂತ ಎ.ತಿಮ್ಮಯ್ಯ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಮಂಡಳಿಯ ಹಂಗಾಮಿ ಸದಸ್ಯ ಕಾರ್ಯದರ್ಶಿ ಸೂರಿ ಪಾಯಲ ಅವರು ಪರಿಸರ ಹಾಗೂ ಜೀವ ಪರಿಸ್ಥಿತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಜು. 3ರಂದು ಪತ್ರ ಬರೆಯುವುದರೊಂದಿಗೆ ಸಂಘರ್ಷ ಆರಂಭಗೊಂಡಿತ್ತು. ಈಗ ಸೂರಿ ಪಾಯಲ ಅವರ ವಿದ್ಯಾರ್ಹತೆಯ ಕಾರಣ ನೀಡಿ ಸದಸ್ಯ ಕಾರ್ಯದರ್ಶಿ ಹುದ್ದೆ ಯಿಂದ ವಜಾಗೊಳಿಸಿ ಮಂಡಳಿ ಅಧ್ಯಕ್ಷ ಶಾಂತ ಎ. ತಿಮ್ಮಯ್ಯ ಆದೇಶ ಹೊರಡಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಎರಡು ಉನ್ನತ ಹುದ್ದೆಯ ನಡುವೆ ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿದ ಸಂಘರ್ಷ ಬೀದಿಗೆ ಬಂದಿದ್ದರೂ ಸರಕಾರ ಈ ಬಗ್ಗೆ ಮೌನವಾಗಿದೆ. ಅರಣ್ಯ ಮತ್ತು ಪರಿಸರ ಸಚಿವ ಸಚಿವ ಈಶ್ವರ ಖಂಡ್ರೆ ಅವರಿಗೆ ಈ ಎಲ್ಲ ವಿದ್ಯಮಾನಗಳ ಮಾಹಿತಿ ತಿಳಿದಿದ್ದರೂ ಮೌನ ವಹಿಸಿರುವುದು ಅಚ್ಚರಿ ಮೂಡಿಸಿದೆ.

ಜು. 3ರಂದು ಇಲಾಖೆಯ ಪ್ರಧಾನ ಕಾರ್ಯ ದರ್ಶಿಗೆ ಪತ್ರ ಬರೆದಿದ್ದ ಸೂರಿ ಪಾಯಲ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಕಾಯ್ದೆ – 1999 ಉಲ್ಲಂಘಿ ಸಿ ಹಲವು ಸಂಸ್ಥೆಗಳಿಗೆ ಹಣ ಹಂಚಿಕೆ ಮಾಡಿದ್ದಾರೆ. ಜ. 30 ರಂದು ನಡೆದಿದ್ದ ಪರಿಸರ ಜಾಗೃತಿ ಸಮಿತಿ ಸಭೆಯಲ್ಲಿ ಸುಮಾರು 17 ಕೋಟಿ ರೂ.ಗಳನ್ನು ಜಾಹೀರಾತು ನೀಡಲು ವಿವಿಧ ಏಜೆನ್ಸಿಗಳಿಗೆ ಹಂಚಿ ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿ ಸಿದ್ದಾರೆ ಎಂದು ಆರೋಪಿಸಿದ್ದರು.

ಈ ಬೆಳವಣಿಗೆಯಿಂದ ಕೆಂಡಾಮಂಡಲ ವಾಗಿ ರುವ ಶಾಂತ ತಿಮ್ಮಯ್ಯ, ಸೂರಿ ಪಾಯಲ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಮುಖ್ಯ ಪರಿಸರ ಅಧಿಕಾರಿ ಟಿ. ಮಹೇಶ್‌ ಅವರನ್ನು ಹಂಗಾಮಿ ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದಾರೆ.

Advertisement

ಮಂಡಳಿ ಸದಸ್ಯ ಕಾರ್ಯದರ್ಶಿ ಯಾಗಿದ್ದ ಐಎಎಸ್‌ ಅಧಿಕಾರಿ ಗಿರೀಶ್‌ ಎಚ್‌. ಸಿ. ಅವರು ಜೂ. 7ರಂದು ಕಿಯೋನಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಮಂಡಳಿಯಲ್ಲಿ ಐ.ಟಿ. ವ್ಯವಸ್ಥಾಪಕರಾಗಿದ್ದ ಸೂರಿ ಪಾಯಲ ಅವರನ್ನು ಹೆಚ್ಚುವರಿ ಪ್ರಭಾರ ಹುದ್ದೆ ಯಾಗಿ ಮಂಡಳಿ ಸದಸ್ಯ ಕಾರ್ಯದರ್ಶಿ ಯನ್ನಾಗಿ ನೇಮಿಸಿದ್ದರು. ಅಚ್ಚರಿಯೆಂದರೆ ತಾವೇ ನೇಮಿಸಿದ್ದ ಆದೇಶವನ್ನು ವಾಪಾಸ್‌ ಪಡೆದಿರುವುದು ಈಗ ಹೊಸ ವಿವಾದ ಸೃಷ್ಟಿಸಿದೆ.

ಸದಸ್ಯ ಕಾರ್ಯದರ್ಶಿ ಹುದ್ದೆಗೆ ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಕನಿಷ್ಠ ಸ್ನಾತಕೋತ್ತರ ಪದವಿ ಹೊಂದಿರಬೇಕು. ಆದರೆ ಸೂರಿ ಪಾಯಲ್‌ ಅವರಿಗೆ ಈ ಅರ್ಹತೆಯಿಲ್ಲ ಎಂದು ಶಾಂತ ತಿಮ್ಮಯ್ಯ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಚರ್ಚಿಸಿ ಸಮಸ್ಯೆ ಇತ್ಯರ್ಥ
ಮಂಡಳಿ ಅದ್ಯಕ್ಷರ ವಿರುದ್ಧ ಗಂಭೀರ ಸ್ವರೂಪದ ಭ್ರಷ್ಟಾಚಾರದ ಆರೋಪ ಮಾಡಿ ಸರಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ತಮ್ಮ ಅಕ್ರಮಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದಲೇ ಶಾಂತ ತಿಮ್ಮಯ್ಯ ತಮ್ಮನ್ನು ಸದಸ್ಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಿದ್ದಾರೆ ಎಂದು ಸೂರಿ ಪಾಯಲ ಆರೋಪಿಸಿದ್ದಾರೆ.

ಸುಮಾರು 10-15 ದಿನಗಳಿಂದ ಮಂಡಳಿಯ ಅಧ್ಯಕ್ಷ -ಕಾರ್ಯದರ್ಶಿಯ ಮಧ್ಯೆ ಕಿತ್ತಾಟ ನಡೆಯುತ್ತಿದ್ದರೂ ಪರಿಸರ ಸಚಿವ ಈಶ್ವರ ಖಂಡ್ರೆ ಬಿಕ್ಕಟ್ಟು ಪರಿಹರಿಸಲು ಪ್ರಯತ್ನಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಈಗ ಬೀದಿ ರಂಪದ ಸ್ಥಿತಿ ಸೃಷ್ಟಿಯಾಗಿದ್ದು ಸೋಮವಾರ ಇಬ್ಬರನ್ನೂ ಕರೆದು ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಸಚಿವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next