Advertisement

ಕಲುಷಿತ ನೀರಿನ ಪ್ರಕರಣ: ಕಾವಾಡಿಗರಹಟ್ಟಿಯಲ್ಲಿ ಬಿಗುವಿನ ವಾತಾವರಣ

12:49 PM Aug 02, 2023 | Team Udayavani |

ಚಿತ್ರದುರ್ಗ: ಕಲುಷಿತ ನೀರು ಸೇವಿಸಿದ ಪ್ರಕರಣದಲ್ಲಿ ನಗರದ 16ನೇ ವಾರ್ಡ್ ವ್ಯಾಪ್ತಿಯ ಕಾವಾಡಿಗರಹಟ್ಟಿಯಲ್ಲಿ ಅಸ್ವಸ್ಥರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.

Advertisement

ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಒಟ್ಟು 60 ಜನ ದಾಖಲಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ 18 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸವೇಶ್ವರ ಆಸ್ಪತ್ರೆಯಲ್ಲಿರುವ ಐವರ ಸ್ಥಿತಿ ಚಿಂತಾಜನಕವಾಗಿದೆ.

ಮಂಗಳವಾರ ಮೃತಪಟ್ಟಿದ್ದ ಮಂಜುಳಾ ಮೃತದೇಹವನ್ನು ಸಂಬಂಧಿಕರು ಹಾಗೂ ಗ್ರಾಮಸ್ಥರು ಅಂತ್ಯಕ್ರಿಯೆ ಮಾಡದೆ ಮನೆಯ ಮುಂದೆ ಇಟ್ಟುಕೊಂಡು ಪರಿಹಾರಕ್ಕೆ ಪಟ್ಟು ಹಿಡಿದಿದ್ದಾರೆ.

ಮೃತ ಮಹಿಳೆ ಮಂಜುಳಾ ಅವರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕವಾಡಿಗರಹಟ್ಟಿಗೆ ತರಲಾಗಿದೆ. ಮೃತ ಮಹಿಳೆಯ ಸಂಬಂಧಿಕರು, ಬಡಾವಣೆಯ ಜನರ ಆಕ್ರೋಶ ಕಟ್ಟೆಯೊಡೆದಿದ್ದು. ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು ಪಟ್ಟುಹಿಡಿದು ಬುಧವಾರ ಪ್ರತಿಭಟನೆ ಆರಂಭಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದಂತೆ ಪರಿಹಾರವನ್ನು ಕೂಡಲೇ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

ಹೊಳಲ್ಕೆರೆ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ತಡೆದು ಪ್ರತಿಭಟನೆ ನಡೆಸಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಕಾರರ ಮನವೊಲಿಸಿದರು.

ಬೆಂಗಳೂರಿನಲ್ಲಿ ವಾಂತಿ-ಭೇದಿ ಕಾಣಿಸಿಕೊಂಡು‌ ಮೃತಪಟ್ಟಿರುವ ರಘು ಎಂಬುವರ ಮೃತದೇಹದ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ.

ಮೃತದೇಹವನ್ನು ಚಿತ್ರದುರ್ಗಕ್ಕೆ ತರಲಾಗುತ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಅಂಬ್ಯುಲೆನ್ಸ್ ಓಡಾಟ ನಿರಂತರ:

ಕವಾಡಿಗರಹಟ್ಟಿಯ ಪರಿಶಿಷ್ಟ ಜಾತಿ ಕಾಲೊನಿ ಬಳಿ ವೈದ್ಯರು ಪೊಲೀಸರ ತಂಡವೇ ಬೀಡುಬಿಟ್ಟಿದ್ದು,  ಬುಧವಾರ ಹಲವರು ಅಸ್ವಸ್ಥರಾಗಿದ್ದಾರೆ. ಬುಧವಾರ ನಸುಕಿನಿಂದ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ 20 ಕ್ಕೂ ಹೆಚ್ಚು ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಟ್ಟಿಯಲ್ಲಿ ಅಸ್ವಸ್ಥರಾದವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.

ನಗರಸಭೆಯಿಂದ ಟ್ಯಾಂಕರ್ ನೀರು ಪೂರೈಕೆ:

ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥರಾಗಿರುವುದರಿಂದ ಕವಾಡಿಗರಹಟ್ಟಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮನೆಯಲ್ಲಿದ್ದ ಹಳೆಯ ನೀರನ್ನೆಲ್ಲಾ ಚೆಲ್ಲಿದ್ದು,

ಕೊಳವೆ ಭಾವಿ ನೀರನ್ನು ಮನೆ-ಮನೆಗೂ ಸರಬರಾಜು ಮಾಡಲಾಗುತ್ತಿದೆ. ಬಡಾವಣೆಯಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಕವಾಡಿಗರಹಟ್ಟಿಯಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮಂಗಳವಾರ ರಾತ್ರಿ ಕಲ್ಲು ಬೀಸಲಾಗಿದೆ. ಘಟಕದ ಗಾಜು ಪುಡಿಯಾಗಿದ್ದು, ಆಕ್ರೋಶಗೊಂಡ ಸ್ಥಳೀಯರು ಗಾಜು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next