Advertisement

Politics: ರಾಜಕೀಯ ನಿಂತ ನೀರಲ್ಲ- ಹರಿಪ್ರಸಾದ್‌

11:27 PM Dec 10, 2023 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್‌ ಕಾರ್ಯಕ್ರಮಗಳು ಸಾಮಾಜಿಕ ನ್ಯಾಯದಡಿ ಸಂವಿಧಾನದ ಚೌಕಟ್ಟಿನಲ್ಲಿವೆ. ಸಾಮಾಜಿಕ ನ್ಯಾಯ ಎಂದರೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾಕರು, ಆದಿವಾಸಿಗಳ ಜತೆಗೆ ಮೇಲ್ಜಾತಿಯವರನ್ನು ಒಗ್ಗೂಡಿಸಿಕೊಂಡು ಹೋಗುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ರಾಜಕೀಯ ಎನ್ನು ವುದು ನಿಂತ ನೀರಲ್ಲ. ನಾನು ಎಂದೂ ಅಧಿಕಾರದ ಹಿಂದೆ ಹೋದವನಲ್ಲ. ದೇಶ ಸುತ್ತಿ ಕೆಲಸ ಮಾಡಿದ
ವನು. ಬೇರೆ ಬೇರೆ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಮಾಡಿದ ವನು. ಹೀಗಾಗಿ ಸಚಿವನಾಗಬೇಕು ಎನ್ನುವ ಆಸೆಯಿಲ್ಲ. ನಾನೆಂದೂ ಯಾರನ್ನೂ ಹೊಗಳಿದವನಲ್ಲ. ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಕುತಂತ್ರಕ್ಕೆ ಬಗ್ಗುವ ವನಲ್ಲ. ಸರಕಾರದಲ್ಲಿ ಸದ್ಯಕ್ಕೆ ಅನುದಾನವಿಲ್ಲ. ಗ್ಯಾರಂಟಿಗಳಿಗೆ ದುಡ್ಡು ಕೊಡಬೇಕಾಗಿದೆ. ಮುಂದಿನ ಬಜೆಟ್‌ ವೇಳೆಗೆ ಸರಿಯಾಗಬಹುದು. ಸರಕಾರ ಬರುವವರೆಗೂ ನಮ್ಮ ಪಾತ್ರ. ಸರಕಾರ ನಡೆಸುವುದು ಅವರ ಪಾತ್ರ. ಸರಕಾರ ಹೇಗೆ ನಡೆಯಬೇಕು ಎಂಬುದನ್ನು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ನೋಡಿಕೊಳ್ಳುತ್ತಾರೆ. ಅನುದಾನ ಕೊಡುವಾಗ ಎಲ್ಲರಿಗೂ ಕೊಡಬೇಕಾಗುತ್ತದೆ. ಕೆಲವು ಸಂಗತಿಗಳನ್ನು ಪಕ್ಷದ ಚೌಕಟ್ಟಿನಲ್ಲಿ ಮಾತನಾಡುತ್ತೇನೆ ಹೊರತು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ ಎಂದರು.

ಹರಿಪ್ರಸಾದ್‌ ವಿರುದ್ಧ ಮಸಲತ್ತು: ಜೋಷಿ
ಹುಬ್ಬಳ್ಳಿ: ಬಿ.ಕೆ.ಹರಿಪ್ರಸಾದ್‌ ವಿರುದ್ಧ ಕಾಂಗ್ರೆಸ್‌ನಲ್ಲಿ ಮಸಲತ್ತು ಮಾಡುವವರ ವಿರುದ್ಧ ಮಾತನಾಡುವ ತಾಕತ್ತಿಲ್ಲ. ಹೀಗಾಗಿ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಈಡಿಗ ಸಮಾಜದ ನಾಯಕತ್ವದಿಂದ ಹರಿಪ್ರಸಾದ್‌ ಅವರನ್ನು ಹಿಂದೆ ಸರಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಷಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಹರಿಪ್ರಸಾದ ಅವರಿಗೆ ಒಂದು ಉತ್ತಮ ಸ್ಥಾನವಿತ್ತು. ಆದರೆ ಅವರನ್ನು ಬಿಟ್ಟು ಸಮಾವೇಶ ಮಾಡಲಾಗುತ್ತಿದೆ. ತಾನು ಪುಟಿಯುವ ಚೆಂಡು ಎಂದು ಹರಿಪ್ರಸಾದ್‌ ಹೇಳಿದ್ದಾರೆ. ಮುಂದೆ ಎಷ್ಟು ಪುಟಿಯುತ್ತಾರೆ ಎಂದು ನೋಡಿ ಮಾತನಾಡುವೆ ಎಂದರು.

ರಾಜಕಾರಣದಲ್ಲಿ ಯಾವಾಗ ಏನಾಗುತ್ತೆ ಎನ್ನುವುದೇ ಗೊತ್ತಾಗುವುದಿಲ್ಲ: ಶೆಟ್ಟರ್‌
ಹುಬ್ಬಳ್ಳಿ: ಈಡಿಗ ಸಮಾವೇಶ ರಾಜಕೀಯ ಪ್ರೇರಿತ ಎಂಬ ಬಿ.ಕೆ.ಹರಿಪ್ರಸಾದ್‌ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಉತ್ತರ ಕೊಡುತ್ತಾರೆ. ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಅವರಿಬ್ಬರೂ ಕಾಳಜಿ ವಹಿಸುತ್ತಾರೆ. ಹರಿಪ್ರಸಾದ ಅವರನ್ನು ಕರೆದು ಮಾತನಾಡಿಸಿ ಸರಿ ಮಾಡುತ್ತಾರೆ. ಅವರವರ ವೈಯಕ್ತಿಕ ಅಭಿಪ್ರಾಯಕ್ಕೆ ನಾನು ಉತ್ತರಿಸಲು ಸಾಧ್ಯವಿಲ್ಲ. ರಾಜಕಾರಣದಲ್ಲಿ ಯಾವಾಗ ಏನಾಗುತ್ತೆ ಅನ್ನೋದೇ ಗೊತ್ತಾಗಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.

ಹರಿಪ್ರಸಾದ್‌ ಹೇಳಿಕೆ ವೈಯಕ್ತಿಕ: ಭೋಸರಾಜು
ರಾಯಚೂರು: ಬಿ.ಕೆ. ಹರಿಪ್ರಸಾದ್‌ ತಮ್ಮ ಸಮಾಜಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದಾರೆ. ಆದರೆ ಅದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಅವರಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್‌.ಎಸ್‌. ಬೋಸರಾಜು ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಈಡಿಗ ಸಮಾಜದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಹಿತ ಎಲ್ಲ ಸಚಿವರನ್ನು ಕರೆದಿದ್ದಾರೆ. ಹರಿಪ್ರಸಾದ್‌ ಕಾರ್ಯಕ್ರಮಕ್ಕೆ ಹೋಗದಿರುವುದು ಅವರ ವೈಯಕ್ತಿಕ ವಿಚಾರ. ಅದಕ್ಕೂ ಪಕ್ಷಕ್ಕೂ ತಳುಕು ಹಾಕುವುದು ಸರಿಯಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next