ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸಲು ದಿಲ್ಲಿಗೆ ತೆರಳಿದ್ದ ಸಚಿವರು, ಶಾಸಕರು, ಮೇಲ್ಮನೆ ಸದಸ್ಯರು ಬೆಂಗಳೂರಿಗೆ ವಾಪಸಾಗಿದ್ದು, ಅವರಲ್ಲಿ ಕೆಲವು ಸಚಿವರು ಆಹಾರ ಸಚಿವ ಕೆ.ಎಚ್.ಮುನಿಯಪ್ಪರ ನಿವಾಸದಲ್ಲಿ ಸಮಾಲೋಚನೆ ನಡೆಸಿದ್ದಾರೆ.
Advertisement
ಗೃಹ ಸಚಿವ ಡಾ| ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಮಾಜ ಕಲ್ಯಾಣ ಸಚಿವ ಡಾ| ಎಚ್.ಸಿ.ಮಹದೇವಪ್ಪ ಅವರು ಲೋಕಸಭಾ ಚುನಾವಣೆಯ ತಂತ್ರಗಾರಿಕೆ ಬಗ್ಗೆ ಸಮಾಲೋಚಿಸಿದ್ದಾರೆ. ಪಕ್ಷವು 15 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ತಲುಪಲು ಮೀಸಲು ಕ್ಷೇತ್ರಗಳು (ಎಸ್‌ಸಿ-5, ಎಸ್‌ಟಿ-2) ಅತ್ಯಂತ ಪ್ರಮುಖವಾಗಿವೆ. ಈ ಕ್ಷೇತ್ರಗಳಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ದೊರೆತಿದ್ದು, ಅವುಗಳನ್ನು ಅದೇ ರೀತಿ ಮುಂದುವರಿಸಿಕೊಂಡು ಹೋದರೆ ಈ ಸಲವೂ ಹೆಚ್ಚಿನ ಫಲಿತಾಂಶ ಸಿಗಲಿದೆ. ಅದಕ್ಕಾಗಿ ಬಿಜೆಪಿಯ ಕುತಂತ್ರದ ಬಗ್ಗೆ ಪರಿಶಿಷ್ಟರು ಮೋಸಕ್ಕೆ ಒಳಗಾಗದಂತೆ ಜಾಗೃತಿಗೊಳಿಸುವ ಮತ್ತು ಸಂಘಟಿಸುವ ಕೆಲಸ ಆಗಬೇಕಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿವೆ ಎನ್ನಲಾಗಿದೆ.