Advertisement
ನಮ್ಮ ಕನ್ನಡ ಸುದ್ದಿ ವಾಹಿನಿಗಳು ಮಾಜಿ ರೈಲ್ವೇ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಬಗೆಗಿನ ವಿವರಗಳನ್ನು ವ್ಯವಸ್ಥಿತ ರೀತಿಯಲ್ಲಿ ಪ್ರಸಾರಿಸುವ ಗೋಜಿಗೆ ಹೋಗದೆ, ರಾಜಕೀಯ ನಾಯಕನಾಗಿ ಪರಿವರ್ತಿತರಾದ ಜನಪ್ರಿಯ ಚಿತ್ರನಟ ಅಂಬರೀಷ್ ಅವರ ನಿಧನ ಹಾಗೂ ಅಂತ್ಯಕ್ರಿಯಾ ವಿಧಿಗಳ ಪ್ರಸಾರಕ್ಕೇ ಆದ್ಯತೆ ನೀಡಿದವು. ಸುದ್ದಿ ಪ್ರಸಾರ ಜಗತ್ತಿನ ಈ ನಡವಳಿಕೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸುದ್ದಿ ವಾಹಿನಿಗಳ ಈ ತಾರತಮ್ಯ ಧೋರಣೆ, ಕಣ್ಣಿಗೆ ಹೊಡೆಯುವಷ್ಟು ಸ್ಪಷ್ಟವಾಗಿದೆ; ಇದು ಸುದ್ದಿ ಪ್ರಸಾರಕ್ಕೆ ಸಂಬಂಧಿಸಿದ ವೃತ್ತಿ ನೈತಿಕತೆಯೇನಿದೆ, ಅದಕ್ಕೆ ತೀರಾ ವಿರುದ್ಧವಾದ ಪ್ರವೃತ್ತಿಯಾಗಿದೆ.
Related Articles
Advertisement
ಪಕ್ಷದಲ್ಲೇ ಸಾಕಷ್ಟು ವಿರೋಧವಿದ್ದರೂ ಲೆಕ್ಕಿಸದೆ ಕರ್ನಾಟಕದ ಬಿಜೆಪಿ ಘಟಕ 2011ರ ಮಾರ್ಚ್‌ನಲ್ಲಿ ಒಂದು ಕಾಲದ ಹಿಂದಿ ಚಿತ್ರ ತಾರೆ ಹೇಮಮಾಲಿನಿ ಅವರನ್ನು ರಾಜ್ಯಸಭೆಯ ಸದಸ್ಯೆಯನ್ನಾಗಿಸಿತು. ಆದರೆ ಇದು ಕೇವಲ ಒಂದು ವರ್ಷದ ಮಟ್ಟಿಗಷ್ಟೆ. ಈ ಅವಧಿಯಲ್ಲಿ ಆಕೆ ಸಂಸತ್ತಿನ ಒಳಗಡೆಯಾಗಲಿ ಹೊರಗಡೆಯಾಗಲಿ ದನಿಯೆತ್ತಲು ವಿಫಲರಾದರು ಎಂಬ ಮಾತನ್ನು ಹೇಳುವ ಅಗತ್ಯವೇ ಇಲ್ಲ! ಇಂದು ಉತ್ತರ ಪ್ರದೇಶದ ಮಥುರಾದ ಬಿಜೆಪಿ ಸಂಸತ್ಸದಸ್ಯೆಯಾಗಿರುವ ಹೇಮಮಾಲಿನಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಟಿ.ವಿ.ಯಲ್ಲಿ ಮಾತ್ರ. “ವಾಟರ್ ಪ್ಯೂರಿಫೈಯರ್’ನ ಜಾಹೀರಾತಿನಲ್ಲಿ! ಈ ವಿಷಯದಲ್ಲಿ ಆಕೆಯನ್ನಷ್ಟೇ ದೂರುವಂತಿಲ್ಲ; ಸಚಿನ್ ತೆಂಡುಲ್ಕರ್ ಅವರಂಥ ಭಾರತರತ್ನ ಬಿರುದಾಂಕಿತರು ಕೂಡ ಓರ್ವ ಜಾಹೀರಾತು ಮಾಡೆಲ್ ಆಗಿಯೇ ಮಿಂಚುತ್ತಿದ್ದಾರೆ. ಸಾರ್ವಜನಿಕವಾಗಿ ಆರಾಧಿಸಲ್ಪಡುವ ಗಣ್ಯ ವ್ಯಕ್ತಿಗಳು ದಿನಬಳಕೆಯ ವಸ್ತುಗಳ ಹೆಸರನ್ನು ಮಾರಿಕೊಳ್ಳುವ ಪ್ರವೃತ್ತಿಗೆ ಸಂಬಂಧಿಸಿದಂತೆ ನೀತಿ ಸಂಹಿತೆಯೊಂದನ್ನು ಜಾರಿಗೆ ತರಬೇಕಾದ ಅಗತ್ಯವಿದೆ. ಇಂದಿನ ಜಾಹೀರಾತುಗಳು ಹಿಂದಿನ ಕಾಲದಂಥವುಗಳಲ್ಲ. ಇಂದಿನವು ಮಾಡೆಲ್‌ಗಳ ಪಾಲಿಗೆ ಸಾಕಷ್ಟು ಹಣ ತಂದುಕೊಡುವ ಸಂಪನ್ಮೂಲಗಳಾಗಿವೆ. ಉದಾಹರಣೆಗೆ ಹಿಂದಿನ ಕಾಲದ ಪ್ರಖ್ಯಾತ ಬಂಗಾಲಿ ಹಾಗೂ ಹಿಂದಿ ಚಿತ್ರ ತಾರೆ ಭಾರತೀದೇವಿ (1940ರ ದಶಕದಲ್ಲಿ) ಸ್ನಾನದ ಸಾಬೂನಿನ ಜಾಹೀರಾತಿಗಾಗಿ ತಮ್ಮ ಮುಖವನ್ನು ಬಳಸಲು ಅವಕಾಶ ನೀಡಿದ್ದರು. ಇದಕ್ಕಾಗಿ ಆಕೆ ಪಡೆದ ಸಂಭಾವನೆ ಏನು ಗೊತ್ತೆ? ಹಣವಲ್ಲ; ಎಷ್ಟೋ ವರ್ಷಗಳವರೆಗೆ ಸ್ನಾನದ ಸೋಪಿನ ಪೆಟ್ಟಿಗೆಗಳು! ಆದರೆ ಕರ್ನಾಟಕ ದಿಂದ ಲೋಕಸಭೆಗೆ ಚುನಾಯಿತರಾದ ಇನ್ನೋರ್ವ ಚಿತ್ರ ನಟಿ ರಮ್ಯಾ, ಸಂಸತ್ತಿನಲ್ಲಿ ತಾನಿದ್ದ ಅಲ್ಪಾವಧಿಯಲ್ಲೇ ತನ್ನ ಆಸ್ತಿತ್ವ ದರ್ಶನದ ಮಟ್ಟಿಗೆ ಎದ್ದು ತೋರುವಂಥ ನಿರ್ವಹಣೆಯನ್ನು ತೋರಿದರು. 2013ರಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿದ್ದವರು ಅವರು. ಆದರೆ ಪಕ್ಷದ ನಾಯಕರಿಗೇ ಮುಜುಗರ ತರುವ ರೀತಿಯಲ್ಲಿ ಸದ್ದುಗದ್ದಲವೆಬ್ಬಿಸುವ ಆಕೆಯ ಚರ್ಯೆಯಿಂದಾಗಿ ಕಾಂಗ್ರೆಸ್ ಆಕೆಯನ್ನು ಎತ್ತಂಗಡಿ ಮಾಡಿತು; ಎಐಸಿಸಿಯೊಂದಿಗಿನ ಆಕೆಯ ನಿಕಟ ಸಂಪರ್ಕದ ಹೊರತಾಗಿಯೂ.
ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಮತದಾರರು ಹೆಚ್ಚು ಪ್ರಬುದ್ಧರು. “ಹೊಳೆಯುವುದೆಲ್ಲವೂ ಚಿನ್ನವಲ್ಲ’ ಎಂಬ ಸತ್ಯ ಅವರಿಗೆ ಗೊತ್ತಿದೆ. ಹಾಗೆಂದೇ ಚಿತ್ರ ತಾರೆಯರನ್ನು ಚುನಾವಣೆಗಳಲ್ಲಿ ಸೋಲಿಸುತ್ತ ಬಂದಿದ್ದಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಕೂಡ ರಾಜಕಾರಣಿಗಳಾಗಿ ಪರಿವರ್ತಿತರಾದ ಚಿತ್ರತಾರೆಯರ ವರ್ಚಸ್ಸು ಕುಂದುತ್ತ ಬಂದಿದೆ. ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಚಿರಂಜೀವಿ ಅವರಿಗೆ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆ ಯಲ್ಲಿ ಗೆಲುವೆಂಬುದು ಅಕ್ಷರಶಃ ಮರೀಚಿಕೆಯಾಯಿತು. ಚುನಾವಣಾ ಸಭೆಗಳಲ್ಲಿ ಭಾರೀ ಜನಸಂದಣಿಯನ್ನು ಆಕರ್ಷಿಸುವಲ್ಲಿ ಸಫಲರಾದರೂ ಅವರು ಗೆದ್ದು ಬರಲಾಗಲಿಲ್ಲ.
ಅಂಬರೀಷ್ ಅವರ ಸಾವಿಗೆ ತಮ್ಮ ಗಮನದ ಸಿಂಹಪಾಲನ್ನು ನೀಡಿ, ಜಾಫರ್ ಷರೀಫರನ್ನು ಬಹುತೇಕ ನಿರ್ಲಕ್ಷಿಸಿದ ಕೆಲಸವಾಗಿದೆಯೆಂದು ಜರೆಯುವ ಮೂಲಕ ನಾವು ಕನ್ನಡ ಟಿ.ವಿ. ಸುದ್ದಿಚಾನೆಲ್‌ಗಳ ಮೇಲೆ ಗೂಬೆಕೂರಿಸುವಂತಿಲ್ಲ. ಎಷ್ಟೆಂದರೂ ಅವು ಟಿಆರ್‌ಪಿ ರೇಟಿಂಗ್ ಮೇಲೆ ಕಣ್ಣಿಟ್ಟಿರುತ್ತವೆ. ಅವುಗಳಿಗೆ ಇನ್ನುಳಿದ ಸಾರ್ವಜನಿಕ ಕ್ಷೇತ್ರಗಳ ಸಾಧನಶೀಲರಿಗಿಂತಲೂ ಚಿತ್ರತಾರೆಯರ ಹಾಗೂ ಕ್ರಿಕೆಟ್ ಹೀರೋಗಳ ಮೇಲೆ ಹೆಚ್ಚು ಒಲವು. ದೂರದರ್ಶ ನವನ್ನು ಬಿಟ್ಟರೆ ಇನ್ನುಳಿದ ಯಾವುದೇ ಇಂಗ್ಲಿಷ್/ಕನ್ನಡ ಚಾನೆಲ್‌ಗಳು ನಮ್ಮ ವಿಜ್ಞಾನಿಗಳ, ವೈದ್ಯರುಗಳ, ಕೃಷಿಕರ ಅಥವಾ ಇತರ ಸಾಧನ ತಪಸ್ವಿಗಳ ಕೊಡುಗೆಗಳನ್ನಾಗಲಿ, ಸಿದ್ಧಿ – ಸಾಧನೆಗಳನ್ನಾಗಲಿ ಪ್ರಸಾರ ಮಾಡುವುದು ತೀರಾ ಅಪರೂಪ. ಇಂದು ಭಾರತೀಯ ಕ್ರೀಡಾರಂಗದ ನಿಜವಾದ ಮಹಾ ನಾಯಕಿ, ಬಾಕ್ಸಿಂಗ್ ಮೇರಿ ಕೋಮ್ ಅವರೇ ಹೊರತು ವಿರಾಟ್ ಕೊಹ್ಲಿಯಾಗಲಿ ಇತರರಾಗಲಿ ಅಲ್ಲ. ಆದರೆ ಆಕೆಯ ಮೇಲೆ ಸಾಕಷ್ಟು ಗಮನ ಬಿದ್ದಿಲ್ಲ.
ನಿಸ್ಸಂದೇಹವಾಗಿ ಸಿ.ಕೆ. ಜಾಫರ್ ಷರೀಫ್ ಅವರು ರಾಜ್ಯವು ದೇಶಕ್ಕೆ ನೀಡಿದ ಖ್ಯಾತ ರೈಲ್ವೇ ಸಚಿವರಲ್ಲೊಬ್ಬರು. ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಬೆಂಬಲದೊಂದಿಗೆ ಷರೀಫ್ ಮಾಡಿರುವ ಸಾಧನೆ ಗಣನೀಯವಾದುದು. ಈ ಹಿಂದೆ ರೈಲ್ವೇ ಖಾತೆಯನ್ನು ಎಚ್.ಸಿ. ದಾಸಪ್ಪ, ಕೆ. ಹನುಮಂತಯ್ಯ, ಟಿ.ಎ. ಪೈ ಹಾಗೂ ಜಾರ್ಜ್ ಫೆರ್ನಾಂಡಿಸ್‌ರಂಥ ಕರ್ನಾಟಕದ ಘಟಾನುಘಟಿಗಳು ನಿರ್ವಹಿಸಿದ್ದಾರೆ. ಮೀಟರ್‌ಗೆಜನ್ನು ಬ್ರಾಡ್‌ಗೆಜ್ ಆಗಿ ಪರಿವರ್ತಿಸಿದ ಕೆಲಸ ಮಾತ್ರವಲ್ಲ, ಅದರೊಂದಿಗೆ ಇತರ ಅನೇಕ ರೈಲ್ವೇ ಸೇವೆಗಳನ್ನು ಹಾಗೂ ಯೋಜನೆಗಳನ್ನು ಜಾರಿಗೊಳಿಸಿದ ಸಾಧನೆಗಾಗಿಯೂ ಅವರ ಸಚಿವಾವಧಿ ಗಮನಯೋಗ್ಯವಾಗಿದೆ. 1979ರ ತನಕವೂ ನಮ್ಮ ಕರ್ನಾಟಕ, ದಿಲ್ಲಿಯೊಂದಿಗೆ ರೈಲು ಸಂಪರ್ಕ ಹೊಂದಿರದ ಕೆಲ ರಾಜ್ಯಗಳ ಪೈಕಿ ಒಂದಾಗಿತ್ತು. ದಿಲ್ಲಿ ಅಥವಾ ಬಾಂಬೆ ಮುಂತಾದ ಕಡೆಗಳಿಂದ ಬೆಂಗಳೂರಿಗೆ ಪ್ರಯಾಣಿಸಬೇಕಾದರೆ ಅದೊಂದು ತ್ರಾಸಭರಿತ ಯಾತ್ರೆಯೇ ಆಗಿರುತ್ತಿತ್ತು. ನೇರ ರೈಲ್ವೇ ಸೇವೆ ಇರದಿದ್ದುದರಿಂದ, ಎಲ್ಲೋ ಯಾರೋ ದಕ್ಕಿಸಿಕೊಳ್ಳದೆ ಉಳಿದಿದ್ದ ಸೀಟುಗಳಿಗಾಗಿ ರಾಜ್ಯದ ಜನರು ಮದ್ರಾಸ್ ಸೆಂಟ್ರಲ್ ಸ್ಟೇಶನ್‌ನಲ್ಲಿ, ಅಥವಾ ಗುಂತಗಲ್‌ನಲ್ಲಿ, ಮೀರಜ್‌ನಲ್ಲಿ ಅಕ್ಷರಶಃ “ಹೋರಾಡ’ಬೇಕಿತ್ತು. ರೈಲ್ವೇ ಹಳಿಗಳನ್ನು ಬ್ರಾಡ್‌ಗೆàಜ್ ಆಗಿ ಪರಿವರ್ತಿಸಿದ ಬಳಿಕವಷ್ಟೇ ಉತ್ತರ ಮತ್ತು ಪಶ್ಚಿಮ ರಾಜ್ಯಗಳ ಯಾನಕ್ಕೆ ಅಗತ್ಯವಿದ್ದ ರೈಲುಗಳ ಸೇವೆ ದೊರಕುವಂತಾಯಿತು. ಸಿ.ಎಂ. ಪೂಣಚ್ಚ, ಹನುಮಂತಯ್ಯ ಹಾಗೂ ಟಿ.ಎ.ಪೈಗಳ ಕಾಲದಲ್ಲಿ ಹಳಿ ಪರಿವರ್ತನೆಯ ಕಾರ್ಯವನ್ನು ಕೈಗೆತ್ತಿಕೊಳ್ಳುವ ಹಾಗೂ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಕೆಲಸವಾಯಿತು. ಕೊಂಕಣ ರೈಲ್ವೇ ಯೋಜನೆಯ ಕಾಮಗಾರಿ ಆರಂಭಗೊಂಡದ್ದು ಜಾರ್ಜ್ ಫೆರ್ನಾಂಡಿಸ್ ಅವರು ರೈಲ್ವೇ ಸಚಿವರಾಗಿದ್ದಾಗ.
ಷರೀಫ್ ಅವರು ನಿಸ್ಸಂದೇಹವಾಗಿ ರಾಷ್ಟ್ರದ ಉನ್ನತ ಮುಸ್ಲಿಂ ರಾಜಕಾರಣಿಗಳಲ್ಲೊಬ್ಬರು. ರಾಜ್ಯಮಟ್ಟದಲ್ಲಿ ಅವರು ಸಿ.ಎಂ. ಇಬ್ರಾಹಿಂ ಹಾಗೂ ರೆಹಮಾನ್ ಖಾನ್‌ರಂಥವರಿಗಿಂತ ಉನ್ನತ ಮಟ್ಟದಲ್ಲಿದ್ದರು. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದ ಸಂದರ್ಭದಲ್ಲಿ ಅವರು ಎಸ್. ನಿಜಲಿಂಗಪ್ಪನವರಿಗೆ ದ್ರೋಹ ಬಗೆದು ಇಂದಿರಾ ಗಾಂಧಿ ಬಣದೊಂದಿಗೆ ಸೇರಿಕೊಂಡರು ಎಂದು ಬರೆಯುವುದು ತೀರಾ ತಪ್ಪಾಗುತ್ತದೆ. ಅವರಂತೆ ಮಾಡಿದವರು ಇನ್ನೂ ಅನೇಕರಿದ್ದರು. ಜಾಫರ್ ಷರೀಫ್ ದುರ್ಬಲ ವರ್ಗದಿಂದ ಹೊಮ್ಮಿಬಂದವರು. ರಾಷ್ಟ್ರೀಯ ಮಟ್ಟದವರೆಗೆ ಬೆಳೆದು ಹೆಸರು ಮಾಡಿದವರು. ಆದರೂ ಜೈನ್ ಹವಾಲಾ ಪಾವತಿ ಪ್ರಕರಣ ಅಥವಾ ಲಂಡನ್‌ಗೆ ಕೈಗೊಂಡ ವೈದ್ಯಕೀಯ ಪ್ರವಾಸದ ವೇಳೆ ತನ್ನ ನಾಲ್ವರು ಆಪ್ತರನ್ನು ಜತೆಗೊಯ್ದ ಪ್ರಕರಣಗಳೂ ಸೇರಿದಂತೆ ಅವರ ವಿರುದ್ಧ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ, ಆದರೆ ತಕ್ಕ ಪುರಾವೆ/ಸಮರ್ಥನೆಗಳಿಲ್ಲದೆ ಬಿದ್ದು ಹೋದ ಪ್ರಕರಣವೇ ಮೊದಲಾದ “ಭ್ರಷ್ಟಚಾರ ಸಂಬಂಧಿ ಕೇಸು’ಗಳನ್ನು ನಾವು ಸುಲಭದಲ್ಲಿ ನಿರ್ಲಕ್ಷಿಸುವ ಹಾಗಿಲ್ಲ.