Advertisement
ರಾಜ್ಯಪಾಲರ ವಿರುದ್ಧದ ಆರೋಪವೇನು?ತಮಿಳುನಾಡು: ಈ ರಾಜ್ಯದಲ್ಲಿ ಎನ್.ರವಿ ಅವರು ರಾಜ್ಯಪಾಲರಾಗಿದ್ದು, ಚುನಾಯಿತ ಸರಕಾರವೊಂದು ವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ಸಹಿ ಹಾಕದೇ ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ. ಇವರು ಈ ಮಸೂದೆಗಳಿಗೆ ಸಹಿಯನ್ನೂ ಹಾಕುತ್ತಿಲ್ಲ ಅಥವಾ ಸ್ಪಷ್ಟನೆ ಕೋರಿ ವಾಪಸ್ ಕಳುಹಿಸುತ್ತಲೂ ಇಲ್ಲ. ಅವರೇ ನಮಗೆ ರಾಜಕೀಯ ವೈರಿಗಳಂತೆ ಆಗಿದ್ದಾರೆ. ಈ ಮೂಲಕ ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಿದ್ದಾರೆ ಎಂಬುದು ತಮಿಳುನಾಡಿನ ಡಿಎಂಕೆ ಸರಕಾರದ ಆರೋಪ.
Related Articles
ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದು ಇದೇ ಮೊದಲೇನಲ್ಲ. ಈ ವರ್ಷದ ಎಪ್ರಿಲ್‌ನಲ್ಲಿ ತೆಲಂಗಾಣ ಸರಕಾರ, ರಾಜ್ಯಪಾಲರ ನಡೆ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 2022ರ ಸೆಪ್ಟಂಬರ್‌ನಿಂದಲೂ ರಾಜ್ಯಪಾಲರಾದ ತಮಿಳುಸಾಯಿ ಸೌಂದರರಾಜನ್ ಮಸೂದೆಗಳಿಗೆ ಸಹಿ ಹಾಕದೇ ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಬಿಆರ್‌ಎಸ್ ಸರಕಾರ ಆರೋಪಿಸಿತ್ತು. ಸುಪ್ರೀಂ ಮಧ್ಯಪ್ರವೇಶದ ಬಳಿಕ ರಾಜ್ಯಪಾಲರು ಸಹಿ ಹಾಕಿದ್ದರು. ಈ ಪ್ರಕರಣದಲ್ಲಿ ವಾದಿಸಿದ್ದ ಹಿರಿಯ ವಕೀಲ ದುಷ್ಯಂತ್ ದವೆ ಅವರು, ರಾಜ್ಯ ಸರಕಾರಗಳು ರಾಜ್ಯಪಾಲರ ಅಧೀನದಲ್ಲಿ ಕಾರ್ಯ ನಿರ್ವಹಿಸುವಂತೆ ಆಗಿದೆ ಎಂದು ವಾದಿಸಿದ್ದರು.
Advertisement
ಮಸೂದೆಗಳ ಅಂಗೀಕಾರ ಪ್ರಕ್ರಿಯೆರಾಜ್ಯ ಸರಕಾರಗಳು ಮಸೂದೆಯೊಂದನ್ನು ಮೊದಲಿಗೆ ತಮ್ಮ ರಾಜ್ಯಗಳ ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯುತ್ತವೆ. ಆ ರಾಜ್ಯದಲ್ಲಿ ವಿಧಾನಪರಿಷತ್ ಇದ್ದರೆ ಅಲ್ಲಿಗೆ ಕಳುಹಿಸಿ ಅಲ್ಲಿಯೂ ಒಪ್ಪಿಗೆ ಪಡೆದ ಮೇಲೆ, ಅಂತಿಮವಾಗಿ ಸಹಿಗಾಗಿ ರಾಜ್ಯಪಾಲರಲ್ಲಿಗೆ ಕಳುಹಿಸಲಾಗುತ್ತದೆ. ಈ ಬಗ್ಗೆ ಸಂವಿಧಾನದ 200ನೇ ಪರಿಚ್ಛೇದದಲ್ಲಿ ಉಲ್ಲೇಖೀಸಲಾಗಿದೆ. ಇದರಂತೆ, ರಾಜ್ಯಪಾಲರು ಈ ಮಸೂದೆಗೆ ಅಂಕಿತ ಹಾಕಿ ಕಳುಹಿಸಬಹುದು ಅಥವಾ ಸ್ಪಷ್ಟನೆ ಕೋರಿ ಸರಕಾರಕ್ಕೆ ವಾಪಸ್ ಕಳುಹಿಸಬಹುದು. ಆದರೆ ಹಣಕಾಸು ಮಸೂದೆಯಾಗಿದ್ದರೆ ಇದಕ್ಕೆ ಅಂಕಿತ ಹಾಕಬೇಕಾಗುತ್ತದೆ. ಇದರ ಜತೆಗೆ ಮಸೂದೆಯೊಂದು ರಾಷ್ಟ್ರಪತಿಗಳ ಮಟ್ಟದಲ್ಲೇ ನಿರ್ಧಾರವಾಗಲಿ ಎಂದು ರಾಜ್ಯಪಾಲರಿಗೆ ಅನ್ನಿಸಿದರೆ, ಹೈಕೋರ್ಟ್‌ನ ವ್ಯಾಪ್ತಿಗೂ ಮೀರಿದಂಥ ವಿಷಯವಿದ್ದರೆ ಅದನ್ನು ಅಲ್ಲಿಗೆ ಕಳುಹಿಸಬಹುದು ಎಂದು ಇರಿಸಿಕೊಳ್ಳಬಹುದು. ಒಂದು ವೇಳೆ ರಾಜ್ಯಪಾಲರು ಸಹಿ ಹಾಕದೇ, ಕೆಲವೊಂದು ತಿದ್ದುಪಡಿ ಅಥವಾ ಈ ಮಸೂದೆ ಅಗತ್ಯವಿದೆಯೇ? ಎಂಬ ಟಿಪ್ಪಣಿ ಹಾಕಿ ತ್ವರಿತವಾಗಿ ಸರಕಾರಕ್ಕೆ ವಾಪಸ್ ಕಳುಹಿಸಬೇಕು. ಈ ವೇಳೆ ವಿಧಾನಸಭೆಗಳು ರಾಜ್ಯಪಾಲರ ಸಲಹೆಯನ್ನು ನೋಡಿ, ವಾಪಸ್ ವಿಧಾನಸಭೆಯಲ್ಲಿ ಅಂಗೀಕಾರ ಮಾಡಿ ಸಹಿಗಾಗಿ ವಾಪಸ್ ಕಳುಹಿಸುತ್ತವೆ. ಆಗ ರಾಜ್ಯಪಾಲರು ಮಸೂದೆಗೆ ಸಹಿ ಹಾಕಲೇಬೇಕು. ಏಕೆಂದರೆ ಸಾಂವಿಧಾನಿಕ ಮುಖ್ಯಸ್ಥರು ಜನರಿಂದ ಆಯ್ಕೆಯಾದ ಚುನಾಯಿತ ಸರಕಾರಗಳ ನಿರ್ಧಾರವನ್ನು ಗೌರವಿಸಲೇಬೇಕಾಗುತ್ತದೆ. ರಾಜ್ಯಗಳ ವಾದವೇನು?
ಈ ಹಿಂದೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲೇ ಸಮಂಜಸವಾದ ಸಮಯದ ಮಿತಿಯೊಳಗೆ ಮಸೂದೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದ್ದರೂ, ಇಂತಿಷ್ಟೇ ಸಮಯ ಎಂಬುದಾಗಿ ಫಿಕ್ಸ್ ಮಾಡಿಲ್ಲ. ಹೀಗಾಗಿ ರಾಜ್ಯಪಾಲರು ನಿಗದಿತ ಸಮಯದಲ್ಲಿ ಮಸೂದೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಕೇರಳ ಸರಕಾರ 1962ರಲ್ಲಿ ಸಲ್ಲಿಕೆ ಮಾಡಿದ್ದ ಅರ್ಜಿಯ ಸಂಬಂಧ ವಿಚಾರಣೆ ನಡೆದು, ತೀರ್ಪು ಬಂದಿದ್ದರೂ, ಈಗಲೂ ಪಾಲನೆಯಾಗುತ್ತಿಲ್ಲ. ಆಗ ಪಂಚ ಸದಸ್ಯರ ಸಾಂವಿಧಾನಿಕ ಪೀಠವೇ ವಿಚಾರಣೆ ನಡೆಸಿತ್ತು. ಈಗ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚನೆ ಮಾಡಿ, ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಬೇಕು ಎಂದು ಕೇರಳ ಸರಕಾರ ಮನವಿ ಮಾಡಿದೆ. ರಾಜ್ಯಪಾಲರಿಗೆ ವಿವೇಚನಾಧಿಕಾರ ಇದೆಯೇ?
ಸಂವಿಧಾನದ 200ನೇ ಪರಿಚ್ಛೇದದ ಪ್ರಕಾರ, ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಕೆ ಮಾಡಿ, ವಿಧಾನಸಭೆಗಳಿಗೆ ಮಸೂದೆಗಳನ್ನು ವಾಪಸ್ ಕಳುಹಿಸಬಹುದು. ಈ ಸಂದರ್ಭದಲ್ಲಿ ಮೊದಲೇ ಹೇಳಿದ ಹಾಗೆ ಕೆಲವೊಂದು ತಿದ್ದುಪಡಿ ಅಥವಾ ಸಲಹೆ ನೀಡಬಹುದು. ಆದರೆ ಇದೇ ಅಂತ್ಯವಾಗುವುದಿಲ್ಲ. ಸಂವಿಧಾನವೇ ಹೇಳಿದ ಹಾಗೆ, ರಾಜ್ಯಪಾಲರು ರಾಜ್ಯಗಳ ಸಚಿವ ಸಂಪುಟದ ಸಲಹೆ ಮೇರೆಗೆ ಕಾರ್ಯನಿರ್ವಹಿಸಬೇಕು. ಹೀಗಾಗಿ ರಾಜ್ಯಪಾಲರು ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತಿಲ್ಲ. ಮಸೂದೆಗಳನ್ನು ಯಾವಾಗ ವಾಪಸ್ ಕಳುಹಿಸಬೇಕು?
ವಿಧಾನಸಭೆಯಲ್ಲಿ ಮಸೂದೆಗೆ ಅಂಗೀಕಾರ ಸಿಕ್ಕ ಬಳಿಕ, ರಾಜ್ಯಪಾಲರಲ್ಲಿಗೆ ಸಹಿಗಾಗಿ ಬರುತ್ತವೆ. ಈ ಮಸೂದೆಗೆ ಅವರು ಆದಷ್ಟು ಬೇಗ ಸಹಿ ಹಾಕಬೇಕು ಅಥವಾ ವಾಪಸ್ ಕಳುಹಿಸಬೇಕು. ಯಾವುದೇ ಕಾರಣಕ್ಕೂ ತಮ್ಮಲ್ಲೇ ಇರಿಸಿಕೊಳ್ಳಬಾರದು. ಈ ಹಿಂದಿನ ಸುಪ್ರೀಂ ಕೋರ್ಟ್‌ನ ತೀರ್ಪುಗಳ ಆಧಾರದ ಮೇಲೆ ಹೇಳುವುದಾದರೆ, ಸಮಂಜಸ ಸಮಯ, ಅಂದರೆ 3 ತಿಂಗಳ ಒಳಗೆ ಮಸೂದೆಯನ್ನು ಇತ್ಯರ್ಥ ಮಾಡಬೇಕು.