ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ಥಾನದಲ್ಲಿ ಮತ್ತೆ ರಾಜಕೀಯ ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡಾಗಿನಿಂದಲೂ ಪಾಕಿಸ್ಥಾನದಲ್ಲಿ ಈವರೆಗೆ ಯಾವೊಬ್ಬ ನಾಯಕನಿಗೂ ಪ್ರಧಾನಿಯಾಗಿ 5 ವರ್ಷಗಳ ಪೂರ್ಣಾವಧಿಯನ್ನು ಪೂರೈಸಲು ಸಾಧ್ಯವಾಗಿಲ್ಲ. ಇದೀಗ ಆ ಪಟ್ಟಿಗೆ ಹೊಸ ಸೇರ್ಪಡೆ ಇಮ್ರಾನ್ ಖಾನ್. ವಿಪಕ್ಷಗಳು ಪ್ರಧಾನಿ ಇಮ್ರಾನ್ ಖಾನ್ ನಾಯಕತ್ವದ ಪಾಕಿಸ್ಥಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ನೇತೃತ್ವದ ಮೈತ್ರಿಕೂಟ ಸರ ಕಾರದ ವಿರುದ್ಧ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣ ಯದಿಂದ ಪಾರಾಗಲು ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದ ಬಳಿಕ ಇಮ್ರಾನ್ ಪಕ್ಕಾ ರಾಜಕಾರಣಿಯಂತೆ ದಾಳವನ್ನು ಉರುಳಿಸಿ ವಿಪಕ್ಷಗಳನ್ನು ತಬ್ಬಿಬ್ಟಾಗಿಸಿದರು.
ರವಿವಾರ ಪಾಕ್‌ನ ರಾಷ್ಟ್ರೀಯ ಅಸೆಂಬ್ಲಿಯ ಉಪ ಸ್ಪೀಕರ್, ವಿಪಕ್ಷ ಗಳು ಮಂಡಿಸಿದ ಅವಿಶ್ವಾಸ ನಿರ್ಣಯ ವಿದೇಶಿ ಸಂಚಿನ ಭಾಗ ಎಂದು ಅಭಿಪ್ರಾಯಪಟ್ಟು ನಿರ್ಣಯವನ್ನೇ ವಜಾಗೊಳಿಸಿದರು. ಉಪ ಸ್ಪೀಕರ್ ಅವರ ನಿರ್ಧಾರಕ್ಕೆ ವಿಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗ ತೊಡಗುತ್ತಿದ್ದಂತೆಯೇ ಇಮ್ರಾನ್ ಖಾನ್, ದೇಶವನ್ನುದ್ದೇಶಿಸಿ ಮಾತನಾಡಿ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವಂತೆ ರಾಷ್ಟ್ರಪತಿಯವರಿಗೆ ಶಿಫಾ ರಸು ಮಾಡಿದ್ದು ಮುಂದಿನ 3 ತಿಂಗಳುಗಳ ಒಳಗೆ ದೇಶದಲ್ಲಿ ಹೊಸದಾಗಿ ಚುನಾವಣೆ ನಡೆಯಲಿದೆ ಎಂದು ಘೋಷಿಸಿದರು.
ಇಮ್ರಾನ್ ಖಾನ್ ಶಿಫಾರಸಿನಂತೆ ರಾಷ್ಟಪತಿ ಆರಿಫ್ ಅಲ್ವಿ ಅವರು ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವ ಆದೇಶಕ್ಕೆ ಅಂಕಿತ ಹಾಕಿದರು. ಚುನಾವಣ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಇಮ್ರಾನ್ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಈ ಮೂಲಕ ಇಮ್ರಾನ್ ಪರೋಕ್ಷ ವಾಗಿ ದೇಶದ ಆಡಳಿತವನ್ನು ತಮ್ಮ ಹಿಡಿತದಲ್ಲಿರಿಸಿಕೊಂಡಿದ್ದು ಎಲ್ಲವೂ ಅವರ ನಿರೀಕ್ಷೆಯಂತೆಯೇ ನಡೆದಲ್ಲಿ ಅವರ ಉಸ್ತುವಾರಿಯಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದೆ. ಇಮ್ರಾನ್ ಎಸೆದ ಇನ್‌ಸಿÌಂಗ್ ಯಾರ್ಕರ್‌ಗೆ ವಿಪಕ್ಷಗಳು ಮಾತ್ರವಲ್ಲದೆ ರಾಜಕೀಯ ವಿಶ್ಲೇಷಕರೂ ಬೌಲ್ಡ್ ಆಗಿದ್ದಾರೆ.
ಪಾಕಿಸ್ಥಾನದಲ್ಲಿನ ರಾಜಕೀಯ ಪ್ರಹಸನ ಇದೀಗ ಇನ್ನೊಂದು ಮಜಲಿಗೆ ಹೊರಳಿದ್ದು ವಿಪಕ್ಷಗಳು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿವೆ. ಇದಕ್ಕಾಗಿ ವಿಶೇಷ ಪೀಠ ರಚನೆಯ ಘೋಷಣೆಯನ್ನೂ ಮಾಡಿದ್ದಾರೆ. ಈಗಾಗಲೇ ವಿಪಕ್ಷಗಳು ಪಾಕಿಸ್ಥಾನದಾದ್ಯಂತ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಲಾರಂಭಿಸಿದ್ದು ಪ್ರತಿಭಟನೆ ನಡೆಸತೊಡಗಿವೆ. ದೇಶದ ಹಲವೆಡೆ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ರಾಜಧಾನಿ ಇಸ್ಲಾಮಾಬಾದ್ ಸಹಿತ ಕೆಲವೊಂದು ಕಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಒಟ್ಟಾರೆ ಪಾಕಿಸ್ಥಾನದಲ್ಲಿ ಮತ್ತೂಮ್ಮೆ ರಾಜಕೀಯ ಅರಾಜಕತೆಯ ವಾತಾವರಣ ಸೃಷ್ಟಿಯಾಗಿದ್ದು ಇದು ದೇಶದ ಕಾನೂನು ಸುವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ವನ್ನುಂಟು ಮಾಡುವ ಸಾಧ್ಯತೆ ಇದೆ. ಮತ್ತೂಂದೆಡೆ ಸೇನೆ ಕೂಡ ದೇಶದಲ್ಲಿನ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದ್ದು ಈ ಹಿಂದಿನ ಮಾದರಿಯಲ್ಲಿ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಇವೆಲ್ಲದರ ನಡುವೆ ವಿಪಕ್ಷಗಳು ಉಪ ಸ್ಪೀಕರ್ ನಿರ್ಧಾರವನ್ನು ಅನೂರ್ಜಿತಗೊಳಿಸಿದ್ದು ಶೆಹಬಾಜ್ ಶರೀಫ್ ಅವರನ್ನು ದೇಶದ ನೂತನ ಪ್ರಧಾನಿ ಎಂದು ಘೋಷಿಸಿವೆ. ಅಲ್ಲದೆ ಅಯಾಜ್ ಸಾದಿಕ್ ಅವರನ್ನು ರಾಷ್ಟ್ರೀಯ ಅಸೆಂಬ್ಲಿಯ ಹೊಸ ಸ್ಪೀಕರ್ ಆಗಿ ಆಯ್ಕೆ ಮಾಡುವ ಮೂಲಕ ಇಮ್ರಾನ್ ಖಾನ್ ಅವರಿಗೆ ಸಡ್ಡು ಹೊಡೆದಿವೆ.