Advertisement

ಅವಧಿಪೂರ್ವ ಚುನಾವಣೆ? ರಾಜ್ಯಕ್ಕೆ  ಶಾ, ರಾಹುಲ್‌ ; ಗರಿಗೆದರಿದ ರಾಜಕೀಯ ಚಟುವಟಿಕೆ

01:45 AM Mar 30, 2022 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಆದರೆ ಈಗಿನಿಂದಲೇ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಇದಕ್ಕೆ ಸಾಕ್ಷಿಯೆಂಬಂತೆ ಎ. 1ರ ಸಿದ್ಧಗಂಗಾ ಶ್ರೀಗಳ ಜಯಂತಿ ಕಾರ್ಯಕ್ರಮ ಪ್ರಯುಕ್ತ ಬಿಜೆಪಿ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಒಂದು ದಿನದ ಅಂತರದಲ್ಲಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಈ ಬೆಳವಣಿಗೆಗಳು ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಯ ಮುನ್ಸೂಚನೆ ನೀಡುವಂತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಅಮಿತ್‌ ಶಾ ಮುನ್ನುಡಿ
ಎಲ್ಲರಿಗಿಂತ ಮುನ್ನವೇ ಚುನಾವಣೆಗೆ ಸಿದ್ಧವಾಗುವುದು ಬಿಜೆಪಿ ಸಂಪ್ರದಾಯ. ಬಿಜೆಪಿಯ ಚಾಣಕ್ಯ ಎಂದೇ ಖ್ಯಾತರಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಎ. 1ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇದು ಮುಂದಿನ ವಿಧಾನಸಭೆ ಚುನಾವಣೆ ಸಿದ್ಧತೆಯ ಮುನ್ನುಡಿ ಎಂದೇ ಬಣ್ಣಿಸಲಾಗುತ್ತಿದೆ.

ಅಮಿತ್‌ ಶಾ ಎ. 1ರ ಬೆಳಗ್ಗೆ ಸಿದ್ಧಗಂಗಾ ಮಠದಲ್ಲಿ ಸಿದ್ಧ ಗಂಗಾ ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ 400 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗ ಲಿದ್ದಾರೆ. ಅನಂತರ ರಾಜ್ಯ ನಾಯಕರ ಜತೆ ಸಮಾಲೋಚಿಸಿ ಸಂಜೆ 6ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಿಎಸ್‌ವೈ ಜತೆ ಪ್ರತ್ಯೇಕ ಚರ್ಚೆ
ಈ ವರ್ಷಾಂತ್ಯದಲ್ಲಿ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ದಲ್ಲಿ ಚುನಾವಣೆ ನಡೆಯಲಿದೆ. ಅವುಗಳ ಜತೆಗೆ ಕರ್ನಾಟಕ ದಲ್ಲೂ ಚುನಾವಣೆ ನಡೆಸುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಅಮಿತ್‌ ಶಾ ಮಾಜಿ ಸಿಎಂ ಬಿಎಸ್‌ವೈ ಜತೆಗೆ ಪ್ರತ್ಯೇಕವಾಗಿ ಚರ್ಚಿಸಲಿದ್ದಾರೆ ಎನ್ನಲಾಗುತ್ತಿದೆ. ಕೇಂದ್ರದ ವರಿಷ್ಠರು ಕೂಡ ಈ ಎರಡು ರಾಜ್ಯಗಳ ಜತೆಯಲ್ಲೇ ಕರ್ನಾಟಕದಲ್ಲೂ ಚುನಾವಣೆ ನಡೆಸಿದರೆ ಉತ್ತಮ ಎಂಬ ಅಭಿಪ್ರಾಯದಲ್ಲಿದ್ದಾರೆ ಎನ್ನಲಾಗಿದೆ.

ರಾಹುಲ್‌ ಪೂರ್ವಸಿದ್ಧತೆ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡ ಸಿದ್ಧಗಂಗಾ ಶ್ರೀಗಳ ಜಯಂತಿಗೆ ರಾಜ್ಯಕ್ಕೆ ಬರಲಿದ್ದು, ಆ ಬಳಿಕ ಬಳಿಕ ರಾಜ್ಯ ನಾಯಕರ ಜತೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯುವ ಸಾಧ್ಯತೆಗಳ ವಿಚಾರವಾಗಿ ಅವರು ಇಲ್ಲಿನ ನಾಯಕರೊಂದಿಗೆ ಚರ್ಚಿಸಲಿದ್ದಾರೆ.

Advertisement

ವೇಳಾ ಪಟ್ಟಿಯಂತೆ ರಾಹುಲ್‌ ಮಾ. 31ರಂದು ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಬಳಿಕ ಬೆಂಗಳೂರಿಗೆ ಮರಳಿ ಕಾಂಗ್ರೆಸ್‌ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಅನಂತರ ಎ. 1ರಂದು ಎಲ್ಲ ಶಾಸಕರು, ಮಾಜಿ ಶಾಸಕರು, 2018ರ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, ಸಂಸತ್‌ ಚುನಾ ವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, ಮಾಜಿ ಸಂಸದರು, ವಿವಿಧ ಘಟಕಗಳ ಅಧ್ಯಕ್ಷರ ಜತೆ ಸಭೆ ನಡೆಸಲಿದ್ದಾರೆ.

ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯ ರಾಗಿರುವವರ ಜತೆ ರಾಹುಲ್‌ ಸಂವಾದ ನಡೆಸಲಿದ್ದಾರೆ. ಯೂತ್‌ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್‌, ಎನ್‌ಎಸ್‌ಯುಐ, ಸೇವಾದಳ ಹಾಗೂ ಮುಂಚೂಣಿ ಘಟಕಗಳ ಮುಖ್ಯಸ್ಥರ ಜತೆ ಪ್ರತ್ಯೇಕ ಸಭೆ ನಡೆಸುವರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಮಂಗಳೂರು: ಬೆಂಕಿಗಾಹುತಿಯಾದ ಕಾರು: ಮಹಿಳೆ, ನಾಯಿ ಪಾರು

ನ. 27ಕ್ಕೆ ಚುನಾವಣೆ?
ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರಾಜ್ಯದ ಚುನಾವಣೆಯ ಬಗ್ಗೆ ಊಹಿಸಿದ ದಿನಾಂಕ. ಈ ತಿಂಗಳು ಅಥವಾ ನಾಳೆಯೇ ಆಗಲಿ ಅಥವಾ ನ. 27ಕ್ಕೆ ಚುನಾವಣೆ ನಡೆಯಲಿ; ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಿಕೆಶಿ ಹೇಳಿದರು. ನವೆಂಬರ್‌ 27 ಎಂಬ ಊಹೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ, ನಿಮಗೆ ಇರುವ ಹಾಗೆಯೇ ನಮಗೂ ಮಾಹಿತಿ ಮೂಲಗಳು ಇರುತ್ತವೆ. ಆ ಆಧಾರದಲ್ಲಿ ಹೇಳಿದ್ದೇನೆ ಎಂದರು.

ಅಮಿತ್‌ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅನಂತರ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ  ಪಾಲ್ಗೊಳ್ಳಲಿದ್ದಾರೆ.
– ಜೆ.ಸಿ. ಮಾಧುಸ್ವಾಮಿ, ಕಾನೂನು ಸಚಿವ

ಗಾಂಧಿ ಕುಟುಂಬಕ್ಕೆ ಎಲ್ಲ ಮಠಗಳು, ಎಲ್ಲ ಧರ್ಮಗಳ ಜತೆಗೆ ಭಕ್ತ ಮತ್ತು ಭಗವಂತನಿಗೆ ಇರುವಂಥ ಸಂಬಂಧವಿದೆ. ಹಿಂದೆ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಕೂಡ ಮಠಗಳಿಗೆ ಭೇಟಿ ನೀಡಿದ್ದರು. ಹಾಗೆಯೇ ಈಗ ರಾಹುಲ್‌ ಗಾಂಧಿ ಸಿದ್ಧಗಂಗಾ ಮಠಕ್ಕೆ ಬರುತ್ತಿದ್ದಾರೆ.
-ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಅವಧಿಪೂರ್ವ ಚುನಾವಣೆ ಬಂದರೆ ಎದುರಿಸಲು ನಾವು ತಯಾರಿದ್ದೇವೆ. ಕಾರ್ಯಕರ್ತರು ಹಾಗೂ ಮುಖಂಡರು ಸಿದ್ಧರಿದ್ದಾರೆ.
– ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next