Advertisement

ಪ್ರೀತಿಯಡಿ ರಾಜಕೀಯ ಆಟ

05:48 PM Apr 27, 2018 | |

ಆತ ಧ್ವಜ, ಈತ ಜನಾರ್ದನ. ಒಬ್ಬನದ್ದು ಮೀಸೆ ಮೇಲೆಯೇ ಕೈ, ಇನ್ನೊಬ್ಬ ಕೈಯಲ್ಲಿ ಪಠ್ಯಪುಸ್ತಕ. ಆತ ರಾಜಕಾರಣಿ, ಈತ ಕಾಲೇಜು ಲೆಕ್ಚರರ್‌ … ಹೀಗೆ ಅವಳಿಗಳಾಗಿ ಹುಟ್ಟಿ, ಭಿನ್ನ ಆಸಕ್ತಿಗಳನ್ನು ಬೆಳೆಸಿಕೊಂಡ ಧ್ವಜ ಹಾಗೂ ಜನಾರ್ದನ ಒಂದು ಹಂತದಲ್ಲಿ ಒಂದಾಗುತ್ತಾರೆ. ಒರಟ ಹಾಗೂ ಮೃದು ಸ್ವಭಾವ ಒಟ್ಟಿಗೆ ಸೇರಿದಾಗ ಏನಾಗಬಹುದೋ ಅದು ನಡೆಯುತ್ತದೆ. ಅಷ್ಟಕ್ಕೂ ಹೇಗೆ ಒಂದಾಗುತ್ತಾರೆ, ಮುಂದೆ ಏನೇನೆಲ್ಲಾ ನಡೆಯುತ್ತದೆ ಎಂಬ ಕುತೂಹಲವಿದ್ದರೆ ನೀವು “ಧ್ವಜ’ ಸಿನಿಮಾ ನೋಡಬೇಕು. 

Advertisement

“ಧ್ವಜ’ ಒಂದು ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾ. ಬಾಲ್ಯದಿಂದಲೇ ತಾನು ರಾಜಕಾರಣಿಯಾಗಬೇಕು, ಅಧಿಕಾರ ಹಿಡಿಯಬೇಕೆಂದು ಕನಸು ಕಂಡು ಮುಂದೆ ಬೆಳೆಯುತ್ತಾ ರಾಜಕೀಯ ದ್ವೇಷ, ಜಿದ್ದಾಜಿದ್ದಿಗೆ ನಾಂದಿಯಾಡುವ ಜೋಡಿಗಳ ನಡುವಿನ ಕಥೆ. “ಧ್ವಜ’ ಚಿತ್ರ ಒಬ್ಬ ಪಕ್ಕಾ ಲೋಕಲ್‌ ಹುಡುಗನ ಎಂಟ್ರಿಯೊಂದಿಗೆ ಆರಂಭವಾದರೆ, ಮುಂದೆ ವಿವಿಧ ತಿರುವುಗಳನ್ನು ಪಡೆಯುತ್ತಾ, ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಥ್ರಿಲ್ಲರ್‌ ಸಿನಿಮಾವನ್ನು ಇಷ್ಟಪಡುವವರಿಗೆ “ಧ್ವಜ’ ಮಜಾ ಕೊಡುತ್ತದೆ.

ಅಂದಹಾಗೆ, ಇದು ತಮಿಳಿನ “ಕೋಡಿ’ ಚಿತ್ರದ ರೀಮೇಕ್‌. ಧನುಶ್‌ ನಾಯಕರಾಗಿರುವ ಈ ಚಿತ್ರ 2016 ರಲ್ಲಿ ತೆರೆಕಂಡಿತ್ತು. ಈ ಚಿತ್ರವನ್ನು ನಿರ್ದೇಶಕ ಅಶೋಕ್‌ ಕಶ್ಯಪ್‌ ಕನ್ನಡದಲ್ಲಿ “ಧ್ವಜ’ವನ್ನಾಗಿಸಿದ್ದಾರೆ. ಅವರು ಹೆಚ್ಚೇನು ಬದಲಾವಣೆ ಮಾಡಿಕೊಳ್ಳದೇ, ಮೂಲಕಥೆಯನ್ನು, ಸನ್ನಿವೇಶಗಳನ್ನು ದಾಟುವ ಪ್ರಯತ್ನ ಮಾಡದೇ ಇಡೀ ಸಿನಿಮಾವನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ. ಇಡೀ ಸಿನಿಮಾದ ಬ್ಯೂಟಿ ಅಡಗಿರೋದೇ ಕಥೆಯಲ್ಲಿ.

ಒಂದು ಸರಳ ಕಥೆಯನ್ನು ರೋಚಕವಾಗಿ, ಪಕ್ಕಾ ಕಮರ್ಷಿಯಲ್‌ ಸಿನಿಮಾಕ್ಕೆ ಏನು ಬೇಕೋ ಆ ಎಲ್ಲಾ ಅಂಶಗಳೊಂದಿಗೆ ಕಟ್ಟಿಕೊಡಲಾಗಿದೆ. ಇಲ್ಲಿ ಯಾವ ದೃಶ್ಯವೂ ಅನಾವಶ್ಯಕ ಎನ್ನುವಂತಿಲ್ಲ. ಪ್ರತಿ ದೃಶ್ಯವೂ ಕಥೆಯನ್ನು ಮುಂದುವರೆಸಿಕೊಂಡು ಹೋಗುತ್ತವೆ. ರಾಜಕೀಯ, ಅದರ ಒಳಸುಳಿ, ಒಬ್ಬರನ್ನು ಮುಗಿಸಲು ಮತ್ತೂಬ್ಬರು ಹಾಕುವ ಸ್ಕೆಚ್‌, ಅದರ ನಡುವೆ ಬಂದು ಹೋಗುವ ಪ್ರೇಮಕಥೆ … ಈ ಅಂಶಗಳ ಮೂಲಕ “ಧ್ವಜ’ ಸಾಗಿಬರುತ್ತದೆ.

ರಾಜಕೀಯ ಸೇಡಿನ ಕಥೆಗಳು ಕನ್ನಡದಲ್ಲಿ ಹೊಸದೇನಲ್ಲ. ಆದರೆ, ಇಲ್ಲಿನ ಕಥೆ ಸಾಗುವ ರೀತಿಯೇ ಮಜವಾಗಿದೆ. ನಿರ್ದೇಶಕ ಅಶೋಕ್‌ ಕಶ್ಯಪ್‌ ಇಡೀ ಸಿನಿಮಾವನ್ನು ಸರಳವಾಗಿ ನಿರೂಪಿಸುವ ಮೂಲಕ ಕಥೆಯನ್ನು ಅಂದವನ್ನು ಹೆಚ್ಚಿಸಿದ್ದಾರೆ. ಈ ಕಥೆಯಲ್ಲಿ ಆ್ಯಕ್ಷನ್‌ ಇದೆ, ಕಾಮಿಡಿ ಇದೆ, ಲವ್‌ ಇದೆ, ಜಿದ್ದು ಇದೆ. ಆದರೆ, ಯಾವುದೂ ಇಲ್ಲಿ ಪ್ರತ್ಯೇಕವಾಗಿ ಕಾಣೋದಿಲ್ಲ. ಎಲ್ಲವೂ ಕಥೆಯೊಂದಿಗೆ ಸಾಗುತ್ತದೆ. ಇಡೀ ಸಿನಿಮಾದ ಅಚ್ಚರಿ ಎಂದರೆ ಅದು ನಾಯಕ ರವಿ.

Advertisement

ರವಿಯವರಿಗೆ ಇದು ಮೊದಲ ಚಿತ್ರ. ಇಲ್ಲಿ ಅವರದು ದ್ವಿಪಾತ್ರ. ಇಡೀ ಸಿನಿಮಾ ಸಾಗುವುದು ಕೂಡಾ ಅವರ ಪಾತ್ರಗಳ ಸುತ್ತವೇ. ನಾಯಕ ರವಿ ಮಾತ್ರ ಎರಡೂ ಪಾತ್ರಗಳನ್ನು ತೂಗಿಸಿಕೊಂಡು ಹೋದ ರೀತಿಯನ್ನು ಮೆಚ್ಚಲೇಬೇಕು. ರಗಡ್‌ ಧ್ವಜನಾಗಿ ಹಾಗೂ ಸಾಫ್ಟ್ ಜನಾರ್ದನಾಗಿ ಎರಡೂ ಪಾತ್ರಗಳಿಗೂ ನ್ಯಾಯ ಒದಗಿಸಿದ್ದಾರೆ. ನಟನೆಯ ಜೊತೆಗೆ ಬಾಡಿ ಲಾಂಗ್ವೇಜ್‌ನಲ್ಲೂ ಅವರು ಗಮನ ಸೆಳೆಯುತ್ತಾರೆ.  

ಇಡೀ ಸಿನಿಮಾದಲ್ಲಿ ಗಮನ ಸೆಳೆಯುವ ಮತ್ತೂಂದು ಪಾತ್ರವೆಂದರೆ ಪ್ರಿಯಾಮಣಿ ಅವರದು. ನಾಯಕನಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವದ ಪಾತ್ರ ಪ್ರಿಯಾಮಣಿಯವರಿಗೂ ಸಿಕ್ಕಿದೆ. ನೆಗೆಟಿವ್‌ ಶೇಡ್‌ನ‌ಲ್ಲಿ ಸಾಗುವ ಪಾತ್ರದಲ್ಲಿ ಪ್ರಿಯಾಮಣಿ ಮಿಂಚಿದ್ದಾರೆ. ಉಳಿದಂತೆ ದಿವ್ಯ ಉರುಡುಗ, ಟಿ.ಎನ್‌. ಸೀತಾರಾಂ, ಸುಂದರ್‌ರಾಜ್‌, ವೀಣಾ ಸುಂದರ್‌, ತಬಲ ನಾಣಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅಶೋಕ್‌ ಕಶ್ಯಪ್‌ ಛಾಯಾಗ್ರಹಣ, ಸಂತೋಷ್‌ ನಾರಾಯಣ್‌ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. 

ಚಿತ್ರ: ಧ್ವಜ
ನಿರ್ಮಾಣ: ಸುಧಾ ಬಸವೇಗೌಡ
ನಿರ್ದೇಶನ: ಅಶೋಕ್‌ ಕಶ್ಯಪ್‌
ತಾರಾಗಣ: ರವಿ, ಪ್ರಿಯಾಮಣಿ, ಟಿ.ಎನ್‌. ಸೀತಾರಾಂ, ಸುಂದರ್‌ರಾಜ್‌, ವೀಣಾ ಸುಂದರ್‌, ತಬಲ ನಾಣಿ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next