ಹುಬ್ಬಳ್ಳಿ: ಸಂಸ್ಥೆಯ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೌಜನ್ಯ, ಶಿಸ್ತಿನಿಂದ ನಡೆದುಕೊಂಡು ಅಭಿಮಾನದೊಂದಿಗೆ ದುಡಿದರೆ ಸಂಸ್ಥೆ ಲಾಭದತ್ತ ಸಾಗಲು ಸಾಧ್ಯ ಎಂದು ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ಸಂಸ್ಥೆಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಸ್ಥೆಯ ಕರ್ತವ್ಯ ನಿರತ/ನಿವೃತ್ತ ನೌಕರರ ಕುಂದುಕೊರತೆ ಆಲಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಸ್ಥೆಯ ನಿರ್ವಾಹಕರು, ಚಾಲಕರು ಪ್ರಯಾಣಿಕರೊಂದಿಗೆ ಸಂಯಮವಾಗಿ ವರ್ತಿಸಲ್ಲ.
ಪ್ರಯಾಣಿಕರು ಕೈ ಮಾಡಿದಲ್ಲಿ ಹಾಗೂ ನಿಗದಿತ ಬಸ್ ನಿಲ್ದಾಣಗಳಲ್ಲಿ ನಿಲ್ಲಿಸಲ್ಲವೆಂಬ ದೂರುಗಳು ಕೇಳಿಬರುತ್ತಿವೆ. ಸಮವಸ್ತ್ರ, ಬ್ಯಾಡ್ಜ್ ಧರಿಸಿಕೊಳ್ಳಬೇಕು. ನಡವಳಿಕೆ ತಿದ್ದಿಕೊಳ್ಳಬೇಕು. ಬಸ್ ಡಿಪೋ, ಕೇಂದ್ರ ಕಚೇರಿಯಲ್ಲಿ ನೀರು ಶುದ್ಧಿಕರಣ ಘಟಕ (ಆರ್‌ಒ) ಅಳವಡಿಸಲಾಗುವುದು.
ಮುಂದಿನ ದಿನಗಳಲ್ಲಿ ವಿಭಾಗಮಟ್ಟಗಳಲ್ಲೂ ನೌಕರರ ಕುಂದು-ಕೊರತೆ ಸಭೆ ನಡೆಸಲಾಗುವುದು. ಇದು ನಿರಂತರವಾಗಿರುತ್ತದೆ ಎಂದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಆರ್. ವಿನೋತ್ ಪ್ರಿಯಾ, ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಎಸ್.ಕೆ. ಹಳ್ಳಿ, ಹುಬ್ಬಳ್ಳಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ,
ವಿಭಾಗೀಯ ಸಾರಿಗೆ ಅಧಿಕಾರಿ ಶಶಿಧರ ಚನ್ನಪ್ಪಗೌಡರ, ಮಂಡಳಿ ನಿರ್ದೇಶಕ ಕರ್ಜಗಿ, ಸಂಸ್ಥೆಯ ವಿವಿಧ ಇಲಾಖೆಗಳ ಮುಖ್ಯಸ್ಥರು, ಕಾರ್ಮಿಕ ಮುಖಂಡರು ಹಾಗೂ ಗದಗ, ಸವದತ್ತಿ, ಹಾವೇರಿ ಸೇರಿದಂತೆ ವಿವಿಧ ವಿಭಾಗಗಳ ಸಂಸ್ಥೆಯ ನೌಕರರು ಸಭೆಯಲ್ಲಿ ಪಾಲ್ಗೊಂಡಿದ್ದರು.