ಹಾವೇರಿ : ಸಮಾಜಕ್ಕೆ ಪೊಲೀಸರ ಸೇವೆ ಬಹಳ ಪ್ರಮುಖವಾಗಿದೆ. ಸಮಾಜ ಪೊಲೀಸರ ಮೇಲಿಟ್ಟಿರುವ ನಂಬಿಕೆಯಂತೆ ನಾವು ಕರ್ತವ್ಯದ ಬಗ್ಗೆ ಗೌರವ ಭಾವ ಹೊಂದಿರಬೇಕೆಂದು ನಿವೃತ್ತ ಪಿಎಸ್‌ಐ ಡಿ.ಎಸ್.ಸಣ್ಣಮನಿ ಹೇಳಿದರು. ನಗರ ಹೊರವಲಯದ ಕೆರಿಮತ್ತಿಹಳ್ಳಿ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಿವೃತ್ತಿ ನಂತರವೂ ಕರೆದು ಗೌರವ ನೀಡುತ್ತಿರುವುದು ಪೊಲೀಸ್ ಇಲಾಖೆಯಲ್ಲಿ ಮಾತ್ರ. ಇದು ನಮಗೆಲ್ಲ ಹೆಮ್ಮೆಯ ವಿಷಯ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ನಾವು ಒತ್ತಡದಿಂದ ಕಾರ್ಯನಿರ್ವಹಿಸುತ್ತೇವೆ. ಈ ಕರ್ತವ್ಯದ ಒತ್ತಡದಲ್ಲಿ ಕುಟುಂಬ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ನಿರ್ಲಕ್ಷ ವಹಿಸಬಾರದು. ಬಿಡುವಿನ ವೇಳೆಯಲ್ಲಿ ಕುಟುಂಬದೊಂದಿಗೆ ಪ್ರೀತಿ, ವಾತ್ಸಲ್ಯದಿಂದ ಸಮಯ ಕಳೆಯಬೇಕು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ನೀಡಬೇಕು. 1965ರ ಏ.2ರಿಂದ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಕರ್ತವ್ಯದಲ್ಲಿದ್ದಾಗ ಮಾತ್ರ ಸಮಾಜ ಸೇವೆ ಮಾಡಬಹುದು ಎಂದೇನಿಲ್ಲ. ನಿವೃತ್ತಿ ನಂತರವೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಪಿ.ಆರ್.ಹಾವನೂರ ಮಾತನಾಡಿ, ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಪಾತ್ರ ಬಹಳ ದೊಡ್ಡದು. ಕಳೆದ ವರ್ಷ ಕೋವಿಡ್ ಸಂಕಷ್ಟದಲ್ಲಿ ಪೊಲೀಸ್ ಇಲಾಖೆ ಅ ಧಿಕಾರಿ ಹಾಗೂ ಸಿಬ್ಬಂದಿ ಹಗಲು-ರಾತ್ರಿ ಎನ್ನದೇ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವ ಮೂಲಕ ಸಮಾಜದ ಸ್ವಾಸ್ಥ Â ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೋವಿಡ್ 2ನೇ ಅಲೆ ಆರಂಭವಾಗಿದ್ದು, 45 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆ ತಪ್ಪದೆ ಹಾಕಿಸಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸುವ ಮೂಲಕ ಮುಂಜಾಗ್ರತೆ ವಹಿಸಬೇಕೆಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ವರದಿ ವಾಚಿಸಿ, ಧ್ವಜ ದಿನಾಚರಣೆ ದಿನದಂದು ಸಂಗ್ರಹಿಸಲಾದ ನಿಧಿ ಯನ್ನು ಪೊಲೀಸರ ಕಲ್ಯಾಣ ನಿಧಿ ಗೆ ಜಮೆ ಮಾಡಲಾಗುತ್ತದೆ. ಈ ಹಣವನ್ನು ಪೊಲೀಸ್ ಇಲಾಖೆ ನಿವೃತ್ತ ಅಧಿ ಕಾರಿ ಹಾಗೂ ಸಿಬ್ಬಂದಿ ಶವ ಸಂಸ್ಕಾರ, ಆರೋಗ್ಯ ಚಿಕಿತ್ಸೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯ ಮಾಡಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿ ಕಾರಿ ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ನಿವೃತ್ತ ಪೋಲಿಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಆರ್‌ಪಿಐ ಮಾರುತಿ ಹೆಗಡೆ ಕವಾಯತು ನೇತೃತ್ವ ವಹಿಸಿದ್ದರು. ಹಾವೇರಿ ಡಿವೈಎಸ್‌ಪಿ ಶಂಕರ ಮಾರಿಹಾಳ ಸ್ವಾಗತಿಸಿ, ರಾಣೆಬೆನ್ನೂರು ಡಿವೈಎಸ್‌ಪಿ ಟಿ.ವಿ.ಸುರೇಶ ವಂದಿಸಿದರು.