ಕಾಪು: ಶೈಕ್ಷಣಿಕ, ಕೈಗಾರಿಕೆ, ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಯಲ್ಲಿ ಗಣನೀಯ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಳಪು ಗ್ರಾಮದಲ್ಲಿ ಪೊಲೀಸ್ ಸಂಶೋಧನಾ ಕೇಂದ್ರ, ವಸತಿ ಗೃಹ – ಕವಾಯತು ಮೈದಾನ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯ ಮನವಿಯ ಮೇರೆಗೆ ಗ್ರಾಮ ಪಂಚಾಯತ್ 5 ಎಕರೆ ಸರಕಾರಿ ಜಮೀನನ್ನು ಮೀಸಲಿರಿಸಿದ್ದು, ಜಾಗ ಮಂಜೂರಾತಿಗೆ ಗ್ರಾಮ ಪಂಚಾಯತ್ ಮೂಲಕವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೇ ಪ್ರಥಮದ್ದಾದ ಪೊಲೀಸ್ ಇಲಾಖಾ ಸಂಶೋಧನಾ ಕೇಂದ್ರ ನಿರ್ಮಾಣ ಸಹಿತ ಕಾಪು ವೃತ್ತ ವ್ಯಾಪ್ತಿಯ ಪೊಲೀಸರ ಉಪಯೋಗಕ್ಕಾಗಿ ಬಹುಮಹಡಿ ವಸತಿ ಗೃಹ ಕಟ್ಟಡ ಮತ್ತು ಪೊಲೀಸ್ ಕವಾಯತು ಮೈದಾನ ನಿರ್ಮಾಣಕ್ಕೆ ಜಾಗ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ನಿರ್ದೇಶನ ಪಡೆದು, ಉಡುಪಿ ಜಿಲ್ಲಾ ವರಿಷ್ಠಾಧಿಕಾರಿಯ ಸೂಚನೆಯಂತೆ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಅವರು ವರ್ಷದ ಹಿಂದೆಯೇ ಪೊಲೀಸ್ ಇಲಾಖೆಯ ಪರವಾಗಿ ಜಾಗ ಒದಗಿಸುವಂತೆ ಗ್ರಾಮ ಪಂಚಾಯತ್‌ಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಪೊಲೀಸ್ ಇಲಾಖೆಯ ಕೋರಿಕೆಯಂತೆ ಬೆಳಪು ಗ್ರಾಮ ಪಂಚಾಯತ್‌ನ ಹಿಂದಿನ ಆಡಳಿತಾವಧಿಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯದೊಂದಿಗೆ ಪೊಲೀಸ್ ಇಲಾಖಾ ಸಿಬ್ಬಂದಿಗಳ ಮತ್ತು ಅಧಿಕಾರಿಗಳ ಬಹುಮಹಡಿ ವಸತಿ ಗೃಹ, ಸಂಶೋಧನಾ ಕೇಂದ್ರ ಹಾಗೂ ಪೊಲೀಸ್ ಕವಾಯತು ಮೈದಾನ ನಿರ್ಮಾಣಕ್ಕೆ 5 ಎಕ್ರೆ ಸರಕಾರಿ ಜಾಗವನ್ನು ಮೀಸಲಿಡಲಾಗಿತ್ತು. ಇದೀಗ ಆ ಜಾಗವನ್ನು ಇಲಾಖಾ ಮಂಜೂರು ಮಾಡುವಂತೆ ಗ್ರಾಮ ಪಂಚಾಯತ್ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೆಳಪು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಚ್.ಆರ್. ರಮೇಶ್ ತಿಳಿಸಿದ್ದಾರೆ.
ಸರಕಾರಿ ಯೋಜನೆ, ಸಾಮಾಜಿಕ ಚಟುವಟಿಕೆಗೆ ಮೀಸಲು : ಬೆಳಪು ಗ್ರಾಮದಲ್ಲಿ ಸುಮಾರು 70 ಎಕರೆ ಸರಕಾರಿ ಭೂಮಿಯಿದ್ದು ಅದರಲ್ಲಿ 20 ಎಕರೆ ಮಂಗಳೂರು ವಿವಿ ಸಂಯೋಜಿತ ವಿಜ್ಞಾನ ಸಂಶೋಧನಾ ಕೇಂದ್ರ, 5 ಎಕರೆ ಸರಕಾರಿ ಪಾಲಿಟೆಕ್ನಿಕ್ ವಿದ್ಯಾಲಯ, 3 ಎಕರೆ ಕಸ ವಿಲೇವಾರಿ ಘಟಕ, 1 ಎಕರೆ ಮೌಲನಾ ಆಜಾದ್ ವಸತಿ ಶಾಲೆ ಮತ್ತು 25 ಸೆಂಟ್ಸ್ ಜಮೀನನ್ನು ಸಾರ್ವಜನಿನ ಗ್ರಂಥಾಲಯಕ್ಕೆ ಮೀಸಲಿರಿಸಲಾಗಿದೆ. ಉಳಿದಂತೆ 5 ಎಕರೆ ಜಮೀನನ್ನು ಪೊಲೀಸ್ ಇಲಾಖೆಯ ಸಂಶೋಧನಾ ಕೇಂದ್ರ, ವಸತಿ ಗೃಹ ಮತ್ತು ಕವಾಯತು ಮೈದಾನ ನಿರ್ಮಾಣ ಮತ್ತು ತಲಾ 20 ಸೆಂಟ್ಸ್ ಜಮೀನನ್ನು ಬಿಲ್ಲವ ಸಂಘ ಮತ್ತು ಕುಲಾಲ ಸಂಘಕ್ಕೆ ಮೀಸಲಿರಿಸಿ, ಜಮೀನು ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೆಳಪು ಗ್ರಾ.ಪಂ. ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಬೆಳಪು ಕಾಡು ಎಂದೇ ಖ್ಯಾತಿ ಪಡೆದಿದ್ದ ಪುಟ್ಟ ಗ್ರಾಮ ಬೆಳಪುವಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆಧುನಿಕ ಸಂಶೋಧನಾ ಕೇಂದ್ರ ಹಾಗೂ ಪಿ.ಜಿ. ಸೆಂಟರ್‌ನ ಕಾಮಗಾರಿ ಪ್ರಗತಿಯಲ್ಲಿದ್ದು ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಶಿಕ್ಷಣಕ್ಕಾಗಿ ಮೌಲಾನಾ ಆಜಾದ್ ವಸತಿ ಶಾಲೆ ಸ್ಥಾಪನೆಗೆ 1.00 ಎಕ್ರೆ ಜಾಗ ಕಾಯ್ದಿರಿಸಲಾಗಿದ್ದು, 68 ಎಕ್ರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕೆಗಳ ಪಾರ್ಕ್ ನಿರ್ಮಾಣವಾಗುತ್ತಿದೆ. ಅದರೊಂದಿಗೆ ಪೊಲೀಸ್ ಇಲಾಖೆಯ ಯೋಜನೆಗಳು ಕೂಡಾ ಬೆಳಪು ಗ್ರಾಮಕ್ಕೆ ಬರುವುದಾದರೆ ಅದನ್ನು ಸ್ವಾಗತಿಸುತ್ತೇವೆ.
– ಡಾ| ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್
ಕಾಪು ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಬರುವ ವೃತ್ತ ನಿರೀಕ್ಷಕರ ಕಛೇರಿ ಸಹಿತವಾಗಿ ಕಾಪು, ಪಡುಬಿದ್ರಿ ಮತ್ತು ಶಿರ್ವ ಪೊಲೀಸ್ ಠಾಣೆ ಹಾಗೂ ಕಟಪಾಡಿ ಹೊರಠಾಣೆಗಳಲ್ಲಿ ಸುಮಾರು 150ಕ್ಕೂ ಅಧಿಕ ಮಂದಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದು, ಇವರಲ್ಲಿ ಹೆಚ್ಚಿನವರು ಸರಕಾರಿ ವಸತಿ ವ್ಯವಸ್ಥೆಯಿಲ್ಲದೇ ಬಾಡಿಗೆ ಮನೆಗಳಲ್ಲಿ ಅಥವಾ ಜಿಲ್ಲೆಯ ಬೇರೆ ಕಡೆಗಳಲ್ಲಿ ವಾಸಿಸುವಂತಾಗಿದೆ. ಕಾಪು ವೃತ್ತ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ, ಸಮರ್ಪಕ ಸರಕಾರಿ ಜಮೀನು ಇಲ್ಲದಿರುವುದರಿಂದ ಮನೆ ನಿರ್ಮಾಣ ಕಷ್ಟ ಸಾಧ್ಯವಾಗಿದೆ. ಅದರೊಂದಿಗೆ ಕಾಪು ತಾಲೂಕು ಆಗಿ ಮಾರ್ಪಟ್ಟಿದ್ದು ಪೊಲೀಸ್ ಬಲ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದ್ದು, ಪೊಲೀಸ್ ಸಂಶೋಧನಾ ಕೇಂದ್ರ, ವಸತಿಗೃಹ ಮತ್ತು ಕವಾಯತು ಮೈದಾನ ನಿರ್ಮಾಣಕ್ಕೆ 10 ಎಕ್ರೆ ಜಮೀನು ಒದಗಿಸುವಂತೆ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು.
– ಮಹೇಶ್ ಪ್ರಸಾದ್ , ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತ