Advertisement

ಅಸ್ಸಾಂ ಟಿಎಂಸಿಯಲ್ಲಿ ಒಡಕು

06:00 AM Aug 03, 2018 | |

ಹೊಸದಿಲ್ಲಿ /ಸಿಲ್ಚಾರ್‌(ಅಸ್ಸಾಂ): ಅಸ್ಸಾಂನಲ್ಲಿ ನಡೆಸಲಾಗಿರುವ ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್‌ಆರ್‌ಸಿ) ವಿರೋಧಿಸಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ನವದೆಹಲಿ ಮತ್ತು ಅಸ್ಸಾಂನ ಸಿಲ್ಚಾರ್‌ನಲ್ಲಿ ಪ್ರತಿಭಟನೆ ಮುಂದುವರಿಸಿದೆ. ಈ ನಡುವೆಯೇ, ಟಿಎಂಸಿಯ ಅಸ್ಸಾಂ ಘಟಕದಲ್ಲಿ ಒಡಕು ಮೂಡಿದ್ದು, ರಾಜ್ಯಾಧ್ಯಕ್ಷರೇ ರಾಜೀನಾಮೆ ನೀಡಿದ್ದಾರೆ. ಅತ್ತ ಎನ್‌ಆರ್‌ಸಿ ಗದ್ದಲದಿಂದಾಗಿ ರಾಜ್ಯಸಭೆ ಕಲಾಪ ಸಂಪೂಣವಾಗಿ ಕೊಚ್ಚಿಹೋದರೆ, ಇತ್ತ ಲೋಕಸಭೆಯಲ್ಲೂ ಟಿಎಂಸಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಎನ್‌ಆರ್‌ಸಿ ವಿರುದ್ಧ ಹೋರಾಟ ನಡೆಸುವ ಸಂಬಂಧ ಅಸ್ಸಾಂನ ಸಿಲ್ಚಾರ್‌ಗೆ ಬಂದಿಳಿದ ಟಿಎಂಸಿ ಸಂಸದರು ಮತ್ತು ಶಾಸಕರನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗಿದೆ.

Advertisement

ಎನ್‌ಆರ್‌ಸಿ ಕರಡು ಪಟ್ಟಿ ಬಿಡುಗಡೆ ಅನಂತರ ಅಸ್ಸಾಂನಲ್ಲಿ ಉಂಟಾಗಿರುವ ಪರಿಸ್ಥಿತಿ ಪರಿಶೀಲನೆಗಾಗಿ ಟಿಎಂಸಿಯ ಆರು ಸಂಸದರು ಮತ್ತು ಇಬ್ಬರು ಶಾಸಕರ‌ನ್ನೊಳಗೊಂಡ ನಿಯೋಗ ಸಿಲ್ಚಾರ್‌ಗೆ ಬಂದಿಳಿಯಿತು. ಆದರೆ, ಬುಧವಾರ ರಾತ್ರಿಯೇ ಜಿಲ್ಲೆಯಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಗಿದ್ದು, ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವವರನ್ನು ಬಿಟ್ಟು ಉಳಿದವರಿಗೆ ಪ್ರವೇಶವಿಲ್ಲ ಎಂಬ ನಿಯಮ ಮಾಡಲಾಗಿದೆ. ಹೀಗಾಗಿ ಈ ನಿಯೋಗ ಸಿಲ್ಚಾರ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಅಲ್ಲೇ ಇದ್ದ ಪೊಲೀಸರು ಎಲ್ಲರನ್ನೂ ಬಂಧಿಸಿದ್ದಾರೆ.

ನಿಯೋಗದಲ್ಲಿ ಸುಖೇಂದು ಶೇಖರ್‌ ರಾಯ್‌, ಕಕೋಲಿ ಘೋಷ್‌ ದಸ್ತಿದಾರ್‌, ರತ್ನ ದೇ ನಾಗ್‌, ನಾದಿಮುಲ್‌ ಹಕ್‌, ಅರ್ಪಿತಾ ಘೋಷ್‌, ಮಮತಾ ಬಾಲಾ ಠಾಕೂರ್‌, ಫಿರ್ಹಾದ್‌ ಹಕೀಮ್‌ ಮತ್ತು ಮಹುವಾ ಮೋಯ್ತಿರಾ ಇದ್ದಾರೆ. ಈ ನಿಯೋಗದಲ್ಲಿದ್ದ ಕೆಲವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ದಿಲ್ಲಿಯಲ್ಲಿ ಟಿಎಂಸಿ ಸಂಸದ ಡೆರೆಕ್‌ ಒಬ್ರಿಯಾನ್‌ ಆರೋಪಿಸಿದ್ದಾರೆ. ಸದ್ಯ ಅಸ್ಸಾಂನಲ್ಲೀಗ ಸೂಪರ್‌ ತುರ್ತುಪರಿಸ್ಥಿತಿ ಜಾರಿಯಾಗಿದೆ ಎಂದೂ ಟೀಕಿಸಿದ್ದಾರೆ. ಇದಷ್ಟೇ ಅಲ್ಲ, ಲೋಕಸಭೆಯಲ್ಲಿ ಪಕ್ಷದ ಸಂಸದರು ಈ ಬಗ್ಗೆ ಪ್ರಸ್ತಾಪಿಸಿದರೂ, ಸದನದಲ್ಲೇ ಇದ್ದ ಗೃಹ ಸಚಿವ ರಾಜನಾಥ್‌ ಸಿಂಗ್‌ ಯಾವುದೇ ಹೇಳಿಕೆ ನೀಡಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎಲ್ಲರೂ ಹೊರಗಿನವರಲ್ಲ: ಇದೀಗ ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿರುವ ಎಲ್ಲ 40 ಲಕ್ಷ ಮಂದಿಯೂ ವಲಸಿಗರಲ್ಲ. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಇವರ ಹೆಸರು ಬಿಟ್ಟು ಹೋಗಿದೆ ಎಂದು ಭಾರತದ ಜನಗಣತಿ ಆಯೋಗದ ರಿಜಿ ಸ್ಟ್ರಾರ್‌ ಜನರಲ್‌ ಶೈಲೇಶ್‌ ಹೇಳಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕೆಲವೊಂದು ಸಂವಹನ ಕೊರತೆಯಿಂದಾಗಿ ಇವರ ಹೆಸರು ಬಿಟ್ಟು ಹೋಗಿರಬಹುದು. ನೈಜ ಭಾರತೀ ಯರು ಹೆದರಬೇಕಾಗಿಲ್ಲ ಎಂದು ಅಭಯ ನೀಡಿದ್ದಾರೆ. ಅಲ್ಲದೆ ಇನ್ನೂ ತಿದ್ದುಪಡಿಗೆ ಅವಕಾಶಗಳಿದ್ದು ಮುಂದೆ ಸೇರ್ಪಡೆಯಾಗಬಹುದು ಎಂದಿದ್ದಾರೆ.

ಅರುಣಾಚಲದಲ್ಲಿ ಹೋರಾಟ ಆರಂಭ: ಅರುಣಾಚಲ ಪ್ರದೇಶದಲ್ಲಿರುವ ಅಕ್ರಮ ವಲಸಿಗರು ಇನ್ನು 15 ದಿನಗಳಲ್ಲಿ ರಾಜ್ಯ ಬಿಟ್ಟು ಹೊರಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ರಾಜ್ಯದ ಅತಿಮುಖ್ಯ ವಿದ್ಯಾರ್ಥಿ ಸಂಘಟನೆಯೊಂದು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಸರಿಯಾದ ದಾಖಲೆಗಳಿಲ್ಲದೇ ಅಕ್ರಮ ವಾಗಿ ನೆಲೆಸಿರುವವರು ರಾಜ್ಯ ಬಿಟ್ಟು ತೆರಳಬೇಕು ಎಂದಿದೆ. ಇದಕ್ಕಾಗಿಯೇ ಆಪರೇಶನ್‌ ಕ್ಲೀನ್‌ ಆಂದೋಲನ ಕೈಗೊಳ್ಳುವುದಾಗಿ ಅದು ಹೇಳಿದೆ.

Advertisement

ರಾಜ್ಯಸಭೆಯಲ್ಲಿ ಗದ್ದಲ: ಎನ್‌ಆರ್‌ಸಿ ಸಂಬಂಧ ಟಿಎಂಸಿ ಸದಸ್ಯರು ಭಾರೀ ಗದ್ದಲ ಉಂಟು ಮಾಡಿದ್ದರಿಂದ ರಾಜ್ಯಸಭೆಯ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ. ಸಭಾಪತಿ ವೆಂಕಯ್ಯ ನಾಯ್ಡು ಅವರು ಟಿಎಂಸಿ ಸದಸ್ಯರ ಮನವೊಲಿಕೆಗೆ ಪ್ರಯತ್ನಿಸಿದರೂ, ಕೈಗೂಡಲಿಲ್ಲ. 

ವಲಸಿಗರ ಹೊರಗಟ್ಟಲು ರಾಜೀನಾಮೆ ನೀಡಿದ್ದ ದೀದಿ
ಎನ್‌ಆರ್‌ಸಿ ಕರಡು ಪಟ್ಟಿ ಕುರಿತಂತೆ ಈಗ ಭಾರೀ ಗದ್ದಲ ಮಾಡುತ್ತಿರುವ ಮಮತಾ ಬ್ಯಾನರ್ಜಿ ಅವರು, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧೆಡೆ ಇರುವ ಅಕ್ರಮ ಬಾಂಗ್ಲಾದೇಶೀ ವಲಸಿಗರನ್ನು ಹೊರಗೆ ಹಾಕುವಂತೆ ಒತ್ತಾಯಿಸಿ ಲೋಕಸಭೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ನಡೆದದ್ದು 2005ರ ಆ.4 ರಂದು. ಆಗ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಸರಕಾರ ಇತ್ತು. ಅಕ್ರಮ ವಲಸಿಗರ ಕಾಟ ಹೆಚ್ಚಾಗುತ್ತಿದೆ. ಇವರನ್ನು ವೋಟ್‌ ಬ್ಯಾಂಕ್‌ ಮಾಡಿಕೊಂಡಿರುವ ಎಡಪಕ್ಷಗಳು ಅವರನ್ನು ಹೊರಗೆ ಕಳುಹಿಸುತ್ತಿಲ್ಲ. ಇದನ್ನು ವಿರೋಧಿಸುತ್ತೇನೆ ಎಂದು ಹೇಳಿ ಆಗಿನ ಸ್ಪೀಕರ್‌ ಸೋಮನಾಥ ಚಟರ್ಜಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಸರಿಯಾಗಿ ರಾಜೀನಾಮೆ ನೀಡದ್ದರಿಂದ ಇದು ಅಂಗೀಕಾರವಾಗಲೇ ಇಲ್ಲ. ಇದಷ್ಟೇ ಅಲ್ಲ, ತಮ್ಮ ಕೈಲಿದ್ದ ಪೇಪರ್‌ಗಳನ್ನು ಸ್ಪೀಕರ್‌ ಮೇಲೆ ಮಮತಾ ತೂರಿದ್ದರು.

ಅಧ್ಯಕ್ಷ ರಾಜೀನಾಮೆ
ಎನ್‌ಆರ್‌ಸಿ ಕುರಿತಂತೆ ಮಮತಾ ಅವರಿಗೆ ಇರುವ ಅರಿವು ಕಡಿಮೆ ಎಂದು ಆರೋಪಿಸಿ ರುವ ಅಸ್ಸಾಂನಲ್ಲಿನ ಟಿಎಂಸಿ ಘಟಕದ ಅಧ್ಯಕ್ಷ ರಾಜೀನಾಮೆ ನೀಡಿದ್ದಾರೆ. ಜತೆಗೆ ಇಬ್ಬರು ಪದಾಧಿಕಾರಿಗಳೂ ಪದತ್ಯಾಗ ಮಾಡಿದ್ದಾರೆ. ಎನ್‌ಆರ್‌ಸಿ ವಿಚಾರದಲ್ಲಿ ಮಮತಾ ಅವರ ನಿಲು ವನ್ನು ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ತಿಳಿದು ಕೊಳ್ಳದೇ, ಸುಖಾಸುಮ್ಮನೆ ವಿರೋಧಿ ಸುತ್ತಿ ದ್ದಾರೆ ಎಂದು ರಾಜ್ಯ ಘಟಕದ ಅಧ್ಯಕ್ಷ ದ್ವಿಪಿನ್‌ ಪಾಠಕ್‌ ಆರೋಪಿಸಿದ್ದಾರೆ. ಇದರಿಂದಾ ಗಿಯೇ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ದೇಶವ್ಯಾಪಿ ಮಾಡಿ
ಈ ಮಧ್ಯೆ ನಾಗರಿಕರ ರಾಷ್ಟ್ರೀಯ ನೋಂದಣಿ ಕಾರ್ಯಕ್ರಮವನ್ನು ಕೇವಲ ಅಸ್ಸಾಂ, ಜಮ್ಮು ಕಾಶ್ಮೀರವಷ್ಟೇ ಅಲ್ಲ, ಇಡೀ ದೇಶಾದ್ಯಂತ ಮಾಡ ಬೇಕಿದೆ ಎಂದು ಬಿಜೆಪಿ ಸಂಸದರೊಬ್ಬರು ಲೋಕ ಸಭೆಯಲ್ಲಿ ಆಗ್ರಹಿಸಿದ್ದಾರೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂಸದ ನಿಶಿಕಾಂತ್‌ ದುಬೆ, ದೇಶಾದ್ಯಂತ ಈ ಕಾರ್ಯಕ್ರಮ ಮಾಡಿ ಅಕ್ರಮ ವಲಸಿಗರನ್ನು ದೇಶದಿಂದ ಹೊರಗೆ  ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ದುಬೆ ಅವರ ಭಾಷಣಕ್ಕೆ ಪ್ರತಿಪಕ್ಷಗಳ ಕಡೆಯಿಂದ ಭಾರಿ ವಿರೋಧ ಕೇಳಿಬಂದಿದೆ.

ನಾಗರಿಕರ ರಾಷ್ಟ್ರೀಯ ನೋಂದಣಿ ವಿರೋಧಿಸಿ ಟಿಎಂಸಿ ಹೋರಾಟ
ಸೂಪರ್‌ ತುರ್ತುಪರಿಸ್ಥಿತಿ ಘೋಷಣೆಯಾಗಿದೆ ಎಂದ ಡೆರೆಕ್‌ ಒಬ್ರಿಯಾನ್‌
ಲೋಕಸಭೆಯಲ್ಲೂ ಮುಂದುವರಿದ 
ಎನ್‌ಆರ್‌ಸಿ ಗದ್ದಲ
ಇಡೀ ದೇಶಾದ್ಯಂತ ನಾಗರಿಕರ ರಾಷ್ಟ್ರೀಯ ನೋಂದಣಿ ಮಾಡಲು ಬಿಜೆಪಿ ಆಗ್ರಹ

Advertisement

Udayavani is now on Telegram. Click here to join our channel and stay updated with the latest news.

Next