ನವದೆಹಲಿ: ವಕ್ಫ್ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಮಂಗಳವಾರ(ಅ.22) ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.
ಮಂಗಳವಾರ ನಡೆದ ಜೆಪಿಸಿ ಸಭೆಯಲ್ಲಿ ಕಲ್ಯಾಣ್ ಬ್ಯಾನರ್ಜಿ ಮತ್ತು ಬಿಜೆಪಿ ಸಂಸದ ಅಭಿಜಿತ್ ಗಂಗೋಪಾಧ್ಯಾಯ ನಡುವೆ ಘರ್ಷಣೆ ನಡೆದಿತ್ತು. ತೀವ್ರ ವಾಗ್ವಾದದ ವೇಳೆ ಕಲ್ಯಾಣ್ ಬ್ಯಾನರ್ಜಿ ಅವರು ಮೇಜಿನ ಮೇಲಿದ್ದ ಗಾಜಿನ ನೀರಿನ ಬಾಟಲಿಯನ್ನು ಒಡೆದಿದ್ದು, ಇದರಿಂದ ಅವರ ಕೈಗೆ ಗಾಯವಾಗಿದೆ.
ಘರ್ಷಣೆ ಬಳಿಕ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ನೇತೃತ್ವದಲ್ಲಿ ನಿಯಮ 374ರ ಅಡಿಯಲ್ಲಿ ಮತದಾನ ನಡೆಯಿತು. ಇದರಲ್ಲಿ ಕಲ್ಯಾಣ್ ಬ್ಯಾನರ್ಜಿ ಅವರ ಅಮಾನತಿನ ಪರವಾಗಿ 9 ಹಾಗೂ ವಿರುದ್ಧವಾಗಿ 7 ಮತಗಳು ಚಲಾವಣೆಯಾದವು. ಆಡಳಿತ ಪಕ್ಷದ ಸದಸ್ಯರು ಬ್ಯಾನರ್ಜಿ ಅವರನ್ನು ಜೆಪಿಸಿಯಿಂದಲೇ ಅಮಾನತುಗೊಳಿಸುವ ಬಗ್ಗೆ ಒಲವು ತೋರಿದರು. ಆದರೆ ಚರ್ಚೆಯ ನಂತರ ಒಂದು ದಿನದ ಮಟ್ಟಿಗೆ ಅಮಾನತು ಮಾಡಲು ನಿರ್ಧರಿಸಲಾಯಿತು.
ಜೆಪಿಸಿ ಸಭೆಯಲ್ಲಿ ಏನಾಯ್ತು?
ಈ ಸಭೆಯಲ್ಲಿ ಹಲವು ನಿವೃತ್ತ ನ್ಯಾಯಮೂರ್ತಿಗಳು, ಹಿರಿಯ ವಕೀಲರು ಮತ್ತು ಬುದ್ಧಿಜೀವಿಗಳು ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಕಲ್ಯಾಣ್ ಬ್ಯಾನರ್ಜಿ ಎದ್ದು ಮಾತನಾಡತೊಡಗಿದರು. ಈ ಹಿಂದೆಯೂ ಹಲವು ಬಾರಿ ಸಭೆಯಲ್ಲಿ ಮಾತನಾಡಿದ್ದರು. ಆದರೆ ಈ ವೇಳೆ ಅವರು ಮಾತನಾಡಲು ಆರಂಭಿಸಿದಾಗ ಅಭಿಜಿತ್ ಗಂಗೋಪಾಧ್ಯಾಯ ಆಕ್ಷೇಪ ವ್ಯಕ್ತಪಡಿಸಿದರು. ಅಭಿಜಿತ್ ಗಂಗೋಪಾಧ್ಯಾಯ ಆಕ್ಷೇಪ ವ್ಯಕ್ತಪಡಿಸಿದಾಗ, ಕಲ್ಯಾಣ್ ಬ್ಯಾನರ್ಜಿ ಅವರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದರು. ಇದೇ ವೇಳೆ ಇಬ್ಬರೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಕೋಪದಿಂದ ಕಲ್ಯಾಣ್ ಬ್ಯಾನರ್ಜಿ ಗಾಜಿನ ಬಾಟಲಿಯನ್ನು ಎತ್ತಿ ಮೇಜಿನ ಮೇಲೆ ಎಸೆದಿದ್ದು, ಇದರಿಂದ ಗಾಯಗೊಂಡಿದ್ದಾರೆ.