ಸುಳ್ಯ: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮೂವರಿಗೆ ಪ್ರಭಾವಿಗಳು ಹಾಗೂ ಸುಳ್ಯದ ಪೊಲೀಸ್ ಅಧಿಕಾರಿಯೋರ್ವರ ನಂಟಿದೆ ಎಂಬ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರೋಪಿಗಳಾದ ಸಂಪತ್, ಹರಿಪ್ರಸಾದ್ ಮತ್ತು ಜಯ ಅವರಿಗೆ ಸುಳ್ಯದ ಪೊಲೀಸ್ ಅಧಿಕಾರಿ ಜತೆ ನಂಟಿದೆ ಎಂಬ ಆಡಿಯೋವನ್ನು ಯಾರು ಹರಿಯ ಬಿಟ್ಟಿದ್ದಾರೆ ಎಂಬುದು ತನಿಖೆ ಯಿಂದ ತಿಳಿದು ಬರಬೇಕಿದೆ. ಆಡಿಯೋದಲ್ಲಿರು ವುದು ಸುಳ್ಳಾಗಿದ್ದು, ಅದು ಕಿಡಿಗೇಡಿಗಳ ಕೃತ್ಯ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆನ್ನಲಾಗಿದೆ.
ಆಡಿಯೋದಲ್ಲಿ ಹೇಳಿರುವಂತೆ ಆರೋಪಿ ಸಂಪತ್ ಕುಮಾರ್‌ನ ಹಲವು ಅಕ್ರಮಗಳಿಗೆ ಅಧಿಕಾರಿಗಳು ಸಹಕಾರ ನೀಡಿದ್ದು, ಈತನಿಂದ ಹಣ ಸಂದಾಯವಾಗುತ್ತಿತ್ತು. ಹಲವಾರು ಬಾರಿ ಸಂಪತ್‌ಕುಮಾರ್ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರನ್ನು ಫೋನ್‌ನಲ್ಲಿ ಸಂಪರ್ಕಿಸಿದ್ದ. ಈ ಅಧಿಕಾರಿಯನ್ನು ಉನ್ನತ ಮಟ್ಟದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಬೇಕು ಎಂದು ಆಡಿಯೋ ಧ್ವನಿ ಸುರಳಿಯಲ್ಲಿ ಆಗ್ರಹಿಸಲಾಗಿದೆ.
ಆಡಿಯೋ ಮೂಲಕ್ಕೆ ಹುಡುಕಾಟ
ಆಡಿಯೋವನ್ನು ಸಾಮಾಜಿಕ ಜಾಲ ತಾಣಕ್ಕೆ ಅಪ್‌ಲೋಡ್ ಮಾಡಿದವರಿಗಾಗಿ ಸುಳ್ಯ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ವಾಟ್ಸಾಪ್ ಗ್ರೂಪ್‌ಗ್ಳಿಗೆ ಫಾರ್ವರ್ಡ್ ಮಾಡಿದ ನಾಲ್ವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ.