ವಾಡಿ: ಸಮೀಪದ ಮಾರಡಗಿ ಗ್ರಾಮದ ಸಮೀಪದಲ್ಲಿ ಇತ್ತೀಚೆಗೆ ಸ್ನೇಹಿತನನ್ನು ಕೊಂದು ತಲೆಮರೆಸಿಕೊಂಡಿದ್ದ ಉಳಂಡಗೇರಾ ತಾಂಡಾದ ಹರ್ಯಾ ರಾಠೊಡ, ವಾಲ್ಮೀಕ್ ಕಿಶನ್, ಮೋಹನ ಮಾನ್ಯಾ ಮಿಣಜಗಿ ಎನ್ನುವವರನ್ನು ವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಾಲವಾರ ವಲಯದ ಕೊಲ್ಲೂರು ಸಮೀಪದ ಉಳಂಡಗೇರಾ ತಾಂಡಾದ ವಿಜಯ ರೂಪ್ಲಾ ಚಿನ್ನಾ ರಾಠೊಡ (36) ಎಂಬ ವ್ಯಕ್ತಿಯನ್ನು ಕಳೆದ ನ.18ರಂದು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಜಟಿಲವಾದ ಪ್ರಕರಣ ಭೇದಿಸಲು ಮುಂದಾದ ಖಾಕಿಪಡೆ, ಆರೋಪಿಗಳ ಬೇಟೆಗೆ ಪಣ ತೊಟ್ಟಿತ್ತು. ಕೊಲೆಗೆ ಕಾರಣ ಕಲೆಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲೆಯಾದ ವಿಜಯಕುಮಾರ ಮತ್ತು ಅದೇ ತಾಂಡಾದ ಹರಿ ಚಿನ್ನಾ ರಾಠೊಡ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ನಂತರ ನ್ಯಾಯ ಪಂಚಾಯತಿ ಮಾಡಿಸಿ ನನಗೆ ಅವಮಾನ ಮಾಡಿದ್ದಾನೆ ಎನ್ನುವ ಕಾರಣಕ್ಕೆ ಹರ್ಯ್ಯಾ ರಾಠೊಡ ಎಂಬಾತ ಗೆಳೆಯ ವಿಜಯ ಕುಮಾರನ ಕೊಲೆಗೆ ಯೋಜನೆ ರೂಪಿಸಿದ್ದ. ಇದಕ್ಕಾಗಿ ವಾಲ್ಮೀಕ್ ಕಿಶನ್ ಚಿನ್ನಾ ರಾಠೊಡ, ಮೋಹನ್ ಮಾನ್ಯ, ಸಿದ್ಧು ಚಿನ್ನಾ ರಾಠೊಡ, ಶಿವು ಹೀರು ಚಿನ್ನಾ ರಾಠೊಡ ಎನ್ನುವರ ಸಹಾಯ ಪಡೆದಿದ್ದ. ಕೊಲೆಗೂ ಮುಂಚೆ ವಿಜಯ ಕುಮಾರನ ಚಲನವಚನಗಳ ಮೇಲೆ ನಿಗಾವಹಿಸಿದ್ದರು.
ನ.18ರಂದು ಆರೋಪಿಗಳು ವಿಜಯ ಕುಮಾರನನ್ನು ಬೈಕ್ ಮೇಲೆ ಕೂಡಿಸಿ ಕುಂಬಾರಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವೈನ್ ಶಾಪ್‌ಗೆ ತಂದು ಕಂಠಪೂರ್ತಿ ಮದ್ಯ ಕುಡಿಸಿದ್ದರು. ಕತ್ತಲಾಗುವವರೆಗೂ ನಾಲವಾರದಲ್ಲಿ ಸಮಯ ಕಳೆದಿದ್ದರು. ನಂತರ ಮಾರಡಗಿ ಗ್ರಾಮ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿಜಯ ಕುಮಾರನ ಮರ್ಮಾಂಗಕ್ಕೆ ಪೆಟ್ಟು ನೀಡಿ, ಉಸಿರು ನಿಂತ ಬಳಿಕ ಕಾಲುವೆಗೆ ಎಸೆದು ಪರಾರಿಯಾಗಿದ್ದರು.
ಈ ಕೊಲೆಯನ್ನು ಆತ್ಮಹತ್ಯೆ ಅಥವಾ ಅಪಘಾತ ಎಂಬಂತೆ ಬಿಂಬಿಸಲು ಆರೋಪಿಗಳು ಮೃತನ ದೇಹದ ಮೇಲೆ ಬೈಕ್ ಹಾಯಿಸಿ ಗಾಯಗೊಳಿದ್ದೆವು ಎಂದು ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪಿಎಸ್‌ಐ ವಿಜಯಕುಮಾರ ಭಾವಗಿ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿಪಿಐ ಕೃಷ್ಣಪ್ಪ ಕಲ್ಲೆದೇವರು ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದ ಮುಂಬೈ ನಗರವನ್ನು ಜಾಲಾಡಿದ ವಾಡಿ ಠಾಣೆ ಪಿಎಸ್‌ಐ ವಿಜಯಕುಮಾರ ಭಾವಗಿ ಹಾಗೂ ಸಿಬ್ಬಂದಿಗಳಾದ ಮಧುಕರ, ನಾಗೇಂದ್ರ ತಳವಾರ, ದತ್ತಾತ್ರೇಯ ಜಾನೆ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಮೋಹನ್ ಮಾನ್ಯ ಮತ್ತು ವಾಲ್ಮೀಕ್ ಕಿಶನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಮಂಗಳವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದಕ್ಕೂ ಮುಂಚೆ ಪ್ರಮುಖ ಆರೋಪಿ ಹರ್ಯಾ ಚಿನ್ನಾ ರಾಠೊಡನನ್ನು ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿತ್ತು. ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳಾದ ಸಿದ್ಧು ಮತ್ತು ಶಿವರಾಂ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.