ಮುಂಬಯಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಪೊಳಲಿಯಲ್ಲಿ ಸುಮಾರು 1700 ವರ್ಷಗಳಿಂದ ರಾರಾಜಿಸುತ್ತಿರುವ ಇತಿಹಾಸ ಪ್ರಸಿದ್ಧ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಯೋಜನೆಗಳು ಭರದಿಂದ ಸಾಗುತ್ತಿದ್ದು, ನವ ನಿರ್ಮಾಣ ಕಾಮಗಾರಿಗೆ ಸುಮಾರು 20 ಕೋ. ರೂ. ವೆಚ್ಚ ತಗಲಬಹುದೆಂದು ಅಂದಾಜು ಮಾಡಲಾಗಿದೆ. ಈ ಬಗ್ಗೆ ಊರಿನ ಜೀರ್ಣೋದ್ಧಾರ ಸಮಿತಿಯೊಂದಿಗೆ ಇದೀಗ ಮುಂಬಯಿ ಸಮಿತಿಯೂ ಕಾರ್ಯಪ್ರವೃತ್ತವಾಗಿದ್ದು, ಸಮಿತಿಯ ಅಧ್ಯಕ್ಷ ಪದ್ಮನಾಧ ಎಸ್. ಪಯ್ಯಡೆ, ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ. ಇದರ ಬಗ್ಗೆ ಸಮಾಲೋಚನ ಸಭೆಯು ಮೇ 7 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಸಂಘದಲ್ಲಿ ನಡೆಯಿತು.
ಜೀರ್ಣೋದ್ಧಾರ ಮುಂಬಯಿ ಸಮಿತಿಯ ಅಧ್ಯಕ್ಷ ಹಾಗೂ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರ ಅಧ್ಯಕ್ಷತೆಯಲ್ಲಿ ಈ ವಿಶೇಷ ಸಭೆಯನ್ನು ಆಯೋಜಿಸಲಾಗಿದ್ದು, ಇದೆ ಸಂದರ್ಭದಲ್ಲಿ ಮಾತನಾಡಿದ ಪದ್ಮನಾಭ ಎಸ್. ಪಯ್ಯಡೆ ಇವರು, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮುಂಬಯಿ ಘಟಕವು ದೇವಸ್ಥಾನದ ಕಾಮಗಾರಿಗಾಗಿ ನಿರೀಕ್ಷೆಗೂ ಮೀರಿ ದೇಣಿಗೆ ಸಂಗ್ರಹಿಸುವುದೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಬಂಟರ ಸಂಘದ ವ್ಯಾಪ್ತಿಯಲ್ಲಿ ಬರುವ ಒಂಭತ್ತು ಪ್ರಾದೇಶಿಕ ಸಮಿತಿಗಳ ನೆರವಿನಿಂದ ದಾನಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಪುಣೆಯಲ್ಲೂ ಜೀರ್ಣೋದ್ಧಾರ ಮುಂಬಯಿ ಸಮಿತಿಯ ಉಪಸಮಿತಿಯೊಂದನ್ನು ಸದ್ಯದಲ್ಲಿಯೇ ರಚಿಸಲಾಗುವುದು ಎಂದು ನುಡಿದರು.
ಸಭೆಯಲ್ಲಿ ಮುಂಬಯಿ ಜೀರ್ಣೋದ್ಧಾರ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ಪಕ್ಕಳ, ಜೊತೆ ಕಾರ್ಯದರ್ಶಿ ದಿವಾಕರ ಶೆಟ್ಟಿ ಕುರ್ಲಾ, ಜೊತೆ ಕೋಶಾಧಿಕಾರಿ ದಯಾನಂದ ಶೆಟ್ಟಿ, ಬೊಳ್ನಾಡುಗುತ್ತು ಚಂದ್ರಹಾಸ ರೈ, ಪ್ರಕಾಶ್ ಶೆಟ್ಟಿ ನಲ್ಯಗುತ್ತು, ಜಗನ್ನಾಥ ರೈ ನಲಸೋಪರ, ಡಾ| ಪ್ರಭಾಕರ ಶೆಟ್ಟಿ ಬಿ., ರಾಘು ಪಿ. ಶೆಟ್ಟಿ, ಅರುಣೋದಯ ರೈ, ಗಂಗಾಧರ ಶೆಟ್ಟಿ, ಸುಂದರ್ ಶೆಟ್ಟಿ, ಪ್ರೇಮನಾಥ್ ಮುಂಡ್ಕೂರು, ಅರುಣ್ ಶೆಟ್ಟಿ, ನಾರಾಯಣ
ಶೆಟ್ಟಿ, ಶೋಧನ್ ಮೆಂಡಾ ಮೊದಲಾದವರು ಹಾಜರಿದ್ದು, ವಿಚಾರ-ವಿನಿಮಯ ನಡೆಸಿದರು. ಕೊನೆಯಲ್ಲಿ ಕಾರ್ಯದರ್ಶಿ ಅಶೋಕ್ ಪಕ್ಕಳ ವಂದಿಸಿದರು.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು