ಜೀವ ರಕ್ಷಿಸಬೇಕಿರುವ ಜಲವೇ ಜೀವ ಹಿಂಡುವ ವಿಷವಾಗಿರುವುದು ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇದು ಎಚ್ಚರಿಕೆ ಗಂಟೆಯಾಗಿದ್ದು, ಇತರೆಡೆ ಮರುಕಳಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.
ಕಲುಷಿತ ನೀರು ಸೇವಿಸಿ ರಾಯಚೂರಿನ 60ಕ್ಕೂ ಅಧಿಕ ಜನ ವಾಂತಿ, ಬೇಧಿ ಸೇರಿದಂತೆ ಅನೇಕ ಕಾಯಿಲೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ದೂರದ ಊರುಗಳಿಗೆ ತೆರಳಿದರೆ, ಅನೇಕರು ಇಲ್ಲಿಯೇ ಚಿಕಿತ್ಸೆ ಪಡೆದು ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ. ಎರಡು ಮೂರು ದಿನಗಳಿಗೆ ಒಂದು ಸಾವು ಸಂಭವಿಸುತ್ತಿದ್ದು, ಜನ ಭಯಭೀತರಾಗಿದ್ದಾರೆ.
ರಾಯಚೂರಿನಲ್ಲಿ ಈಗಾಗಲೇ ಜನಸಂಖ್ಯೆ 3 ಲಕ್ಷ ಗಡಿ ದಾಟಿದೆ. ಇಷ್ಟು ಜನರಿಗೆ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತದೆ. ತುಂಗಭದ್ರಾ ನದಿಯಿಂದ ರಾಂಪುರ ಕೆರೆಗೆ ನೀರು ತುಂಬಿಸಿ, ಅಲ್ಲಿಂದ ಶುದ್ಧೀಕರಿಸಿ ನಗರಕ್ಕೆ ಪೂರೈಸಲಾಗುತ್ತಿತ್ತು. ಇಲ್ಲಿ ಹೊಸ ಶುದ್ಧೀಕರಣ ಘಟಕ ನಿರ್ಮಿಸಿದ್ದರೂ ನಗರಸಭೆಗೆ ಹಸ್ತಾಂತರವಾಗದ ಕಾರಣ ಲೋಕಾರ್ಪಣೆಗೊಂಡಿರಲಿಲ್ಲ. ಆದರೆ ಹಳೆಯ ಘಟಕವನ್ನು ಕಳೆದ 15 ವರ್ಷಗಳಿಂದ ಸ್ವತ್ಛಗೊಳಿಸದೆ ಜನರಿಗೆ ಹಾಗೆ ನೀರು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿತ್ತು ಎನ್ನುವ ಕಹಿ ಸತ್ಯ ಈಗಷ್ಟೇ ಬಯಲಾಗಿದೆ. ಶುದ್ಧೀಕರಣ ಘಟಕದಲ್ಲಿ ಅಪಾರ ಪ್ರಮಾಣದ ಹೂಳು ಶೇಖರಣೆಗೊಂಡಿದ್ದು, ಅದಕ್ಕೆ ಬ್ಲೀಚಿಂಗ್, ಅಲಂ ಹಾಕಿ ಶುದ್ಧೀಕರಣ ಮಾಡಿ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಕಾಲಕ್ರಮೇಣ ಇಲ್ಲಿನ ಹೂಳು ವಿಷವಾಗಿ ಪರಿವರ್ತನೆಗೊಂಡಿದೆಯಾ ಎಂಬ ಶಂಕೆ ಮೂಡಿದೆ.
ಸದ್ಯ ಸರಕಾರ ಘಟನೆಗೆ ಕಾರಣವಾದ ಎಂಜಿನಿಯರ್, ಸಿಬಂದಿಯನ್ನು ಅಮಾನತು ಮಾಡಿದೆ. ಅಲ್ಲದೇ ಡಿವೈಎಸ್‌ಪಿ ನೇತೃತ್ವದಲ್ಲಿ ಘಟನೆಗೆ ಕಾರಣವಾದವರ ವಿಚಾರಣೆ ನಡೆಸಲಾಗುತ್ತಿದೆ.
ಘಟನೆ ತೀವ್ರತೆ ಹೆಚ್ಚಿದಂತೆಲ್ಲ ಒಂದೊಂದು ಆತಂಕಕಾರಿ ಸಂಗತಿಗಳು ಬಯಲಾಗುತ್ತಿವೆ. ನಗರದಲ್ಲಿ ಸುಮಾರು 20-30 ವರ್ಷದ ಹಳೇ ಪೈಪ್‌ಲೈನ್ ವ್ಯವಸ್ಥೆಯಿದ್ದು, ಕೆಲವೊಂದು ಪೈಪ್‌ಗ್ಳು ಚರಂಡಿ ಮಧ್ಯೆಯೇ ಹಾದು ಹೋಗಿವೆ. ಅಂಥ ಪೈಪ್‌ಗ್ಳು ಲೀಕ್ ಆದಲ್ಲಿ ಚರಂಡಿ ಮಿಶ್ರಿತ ನೀರು ಸರಬರಾಜು ಆಗಿರುವ ಸಾಧ್ಯತೆಗಳೂ ಇವೆ ಎಂದು ನಗರಸಭೆ ಪೌರಾಯುಕ್ತರೇ ತಿಳಿಸಿದ್ದಾರೆ.
– ಸಿದ್ಧಯ್ಯಸ್ವಾಮಿ ಕುಕನೂರು