*ಒಂದು ಸಿನಿಮಾಕ್ಕೆ ಮೂರು ವರ್ಷ ತಗೋಬೇಕಿತ್ತಾ?
ಮೂರು ವರ್ಷ ಸಮಯ ತೆಗೆದುಕೊಳ್ಳಲು ಸಾಕಷ್ಟು ಕಾರಣಗಳಿವೆ. ಒಬ್ಬ ನಟನಾಗಿ ನಾವು ಏನಾದ್ರೂ ಮಾಡ್ತೀವಿ ಅಂತ ಹೊರಟಾಗ ನಾವಿದ್ದೀವಿ ಅಂತ ಹೇಳಬೇಕಾದವರು ನಿರ್ಮಾಪಕ, ನಿರ್ದೇಶಕರು. ನನಗೆ ಆ ತರಹ ತಂಡ ಸಿಕ್ಕಿತು. ಸಣ್ಣ ಆಗೋಕೆ, ದಪ್ಪ ಆಗೋಕೆ ಸಾಕಷ್ಟು ಸಮಯ ಬೇಕಾಯಿತು.
*ಪೊಗರು ಚಿತ್ರದ ಹೈಲೈಟ್ಸ್ ಏನು?
ನಿಮಗೆ ಎಕ್ಸ್‌ಕ್ಲೂಸಿವ್ ಕಂಟೆಂಟ್ ಈ ಸಿನಿಮಾದಲ್ಲಿ ಸಿಗುತ್ತದೆ. ಈ ಸಿನಿಮಾದಲ್ಲಿ ಸಾಕಷ್ಟು ಶೇಡ್ಸ್ ಇದೆ. ಮುಖ್ಯವಾಗಿ ಇದು ಫ್ಯಾಮಿಲಿ ಎಂಟರ್‌ಟೈನರ್. ಚಿಕ್ಕ ಮಕ್ಕಳಿಂದ ದೊಡ್ಡವರೆಗೂ ಕುಳಿತು ನೋಡುವಂತಹ ಸಿನಿಮಾ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದಾಗ ಮೂರು ವರ್ಷ ತಗೊಂಡಿರೋದನ್ನು ಮರೆತು ಬಿಡುವಂತಿದೆ ಸಿನಿಮಾ ಜನರಲ್ಲಿ ನಂಬಿಕೆ ಉಳಿಸಿಕೊಳ್ಳೋದು ತುಂಬಾ ಕಷ್ಟ. ಹೆಂಗೆಂಗೋ ಸಿನಿಮಾ ಮಾಡಿದ್ರೆ, ಮತ್ತೆ ಯಾವ ಮುಖ ಇಟ್ಟುಕೊಂಡು ಹೋಗಿ ಸಿನಿಮಾ ಚೆನ್ನಾಗಿ ಬಂದಿದೆ ಎಂದು ಹೇಳ್ಳೋದು. ನಮಗೆ ಗಿಲ್ಟ್ ಫೀಲ್ ಆಗುತ್ತೆ. ಹಾಗಾಗಿ, ಸಮಯ ತಗೊಂಡು ಒಳ್ಳೆಯ ಸಿನಿಮಾ ಮಾಡಿದ್ದೇವೆ.
*ಒಬ್ಬ ಕಲಾವಿದನಿಗೆ ಒಂದು ಪಾತ್ರವನ್ನು 3 ವರ್ಷ ಟ್ರಾವೆಲ್ ಮಾಡೋದು ಎಷ್ಟು ಕಷ್ಟ?
ಎಲ್ಲಾ ಕಲಾವಿದರ ಉದ್ದೇಶ ಜನರನ್ನು ತಲುಪಬೇಕೆಂಬುದು. ಅದಕ್ಕಾಗಿ ಏನು ಬೇಕಾದರೂ ಕಷ್ಟ ಪಡ್ತಾರೆ. ಅದನ್ನು ತಲೆಯಲ್ಲಿ ಇಟ್ಟುಕೊಂಡಾಗ ಯಾವುದೇ ಕಷ್ಟ ಅನ್ಸಲ್ಲ. ಎಲ್ಲವೂ ಇಷ್ಟಪಟ್ಟೇ ಆಗುತ್ತದೆ.
*ಒಬ್ಬ ಸ್ಟಾರ್ ನಟ ಒಂದೊಂದು ಸಿನಿಮಾಕ್ಕೆ ಮೂರು ವರ್ಷ ತೆಗೆದುಕೊಳ್ಳೋದು ಕಮರ್ಷಿಯಲ್ ಆಗಿ ಆತನಿಗೆ ವರ್ಕೌಟ್ ಆಗುತ್ತಾ?
ನಾವು ಏನೇ ಕಟ್ಟಬೇಕಾದರೂ ಫೌಂಡೇಶನ್ ಮುಖ್ಯ.ಧ್ರುವ ಯಾರೂ ಅಂತ ಮೊದಲು ಗೊತ್ತಾಗಲಿ. ಆ ನಂತರ ಒಂದರಮೇಲೊಂದು ಸಿನಿಮಾ ಮಾಡಿಕೊಂಡು ಹೋಗೋಣ. ಇವತ್ತೂ ಜನ ನಾಗರಹಾವು ಚಿತ್ರವನ್ನು ಮರೆತಿಲ್ಲ ಎಂದರೆ ಅದಕ್ಕೆ ಕಾರಣ ಅದರ ಕ್ವಾಲಿಟಿ ಹಾಗೂ ನಟರ ನಟನೆ. ಆ ಸಮಯದಲ್ಲೇ ಅವರು ಅದ್ಭುತವಾಗಿ ಮಾಡಿದ್ದಾರೆ. ನಾವಿಲ್ಲಂದ್ರೂ ಸಿನಿಮಾ ಇರುತ್ತೆ. ಸಿನಿಮಾಕ್ಕಿಂತ ದೊಡ್ಡವರು ಯಾರೂ ಅಲ್ಲ.
*ಅಭಿಮಾನಿಗಳು ನೀವು ಹೆಚ್ಚು ಸಿನಿಮಾ ಮಾಡಬೇಕೆಂದು ಬಯಸುತ್ತಾರೆ ಮತ್ತು ಅದೇ ಪ್ರಶ್ನೆಯನ್ನು ಕೇಳುತ್ತಾರಲ್ಲ?
ಅವರ ಪ್ರಶ್ನೆ ಅಷ್ಟಕ್ಕೆ ನಿಲ್ಲಲ್ಲ. ಮುಂದುವರೆದು, ನೀವು ವರ್ಷಕ್ಕೆರಡು ಸಿನಿಮಾ ಮಾಡಬೇಕು ಮತ್ತು ಯಾರೂ ಮಾಡದಂತಹ ಸಿನಿಮಾ ಮಾಡಬೇಕು ಅಂತಾರೆ. ನಾನು ಅವರ “ಯಾರೂ ಮಾಡದಂತಹ ಸಿನಿಮಾ’ಕ್ಕಾಗಿ ವರ್ಕ್ ಮಾಡುತ್ತೇನೆ.
*ಇತ್ತೀಚಿನ ವರ್ಷಗಳಲ್ಲಿ ನೀವು ಎಷ್ಟು ಸಿನಿಮಾ ಬಿಟ್ಟಿದ್ದೀರಾ ಮತ್ತು ನೀವು ಕಥೆ ಒಪ್ಪಿಕೊಳ್ಳೋದು ಹೇಗೆ?
ಮೊದಲು ಕಥೆ ನನಗೆ ಕಾಡಬೇಕು. ಆಗ ನಾವು ಅದಕ್ಕೆ ವರ್ಕ್ ಮಾಡಲು ಶುರು ಮಾಡುತ್ತೇವೆ. ಬಂದು ಹೇಳಿದವರ ಎಲಾ ಕಥೆನೂ ಚೆನ್ನಾಗಿದೆ. ಅದರಲ್ಲಿ ನನಗೆ ಇಷ್ಟವಾಗಿದ್ದು ಕೆಲವು. ಅದನ್ನು ನಾನು ಒಪ್ಪಿಕೊಂಡಿದ್ದೇನೆ.
*ನೀವು ಕೂಡಾ ಭಾಷೆಯ ಗಡಿದಾಟಿ ಹೋಗುತ್ತಿದ್ದೀರಿ?
ಸಿನಿಮಾಕ್ಕೆ, ಕಲಾವಿದನಿಗೆ ಯಾವತ್ತೂ ಭಾಷೆಯ ಹಂಗಿಲ್ಲ. ಇವತ್ತು ಮಾರ್ಕೇಟ್ ಫಾಸ್ಟ್ ವೈಡ್ ಆಗಿದೆ. ಈಗ ಎಲ್ಲವೂ ಚೇಂಜ್ ಆಗಿದೆ.
*ಕೊರೊನಾ ಸಮಯದಲ್ಲಿ ನಿಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ಹೇಗನಿಸುತ್ತಿದೆ ನಿಮಗೆ?
ಆರಂಭದಲ್ಲಿ ಸ್ವಲ್ಪ ಭಯವಾಯಿತು. ಆದರೆ, ನನಗೆ ನಂಬಿಕೆ ಇದೆ. ಕಷ್ಟಪಟ್ಟು ಮಾಡಿದ್ದೀವಿ, ಜನ ಕೈ ಬಿಡಲ್ಲ.
*ನಾಯಕಿ ರಶ್ಮಿಕಾ ಮಂದಣ್ಣ ಪ್ರಮೋಶನ್‌ನಿಂದ ದೂರವಿದ್ದಾರಲ್ಲ?
ಅವರು ಬಿಝಿ ಇದ್ದಾರೋ ಏನೋ, ಬರ್ತೀನಿ ಅಂದಿದ್ದಾರೆ. ಬರಬಹುದು
*”ಖರಾಬು’ ಸಾಂಗ್‌ನಲ್ಲಿ ನೀವು ಹೀರೋಯಿನ್ ಅನ್ನು ನಡೆಸಿಕೊಂಡ ವಿಚಾರಕ್ಕೆ ಬಂದ ನೆಗೆಟಿವ್ ಕಾಮೆಂಟ್ಸ್ ಬಗ್ಗೆ ಏನಂತೀರಿ?
ಎಲ್ಲವನ್ನು ಬ್ಯಾಲೆನ್ಸ್ ಮಾಡಬೇಕು. ಕಾಮೆಂಟ್ ಮಾಡಿದವರು ಯಾರೂ ಸಿನಿಮಾ ನೋಡಿಲ್ಲ. ಸುಮ್ ಸುಮ್ನೆ ಯಾರೂ ಹೋಗಿ ಎಳೆದಾಡಲ್ಲ. ಎಲ್ಲದಕ್ಕೂ ಒಂದು ರೀಸನ್ ಇರುತ್ತದೆ.
ರವಿಪ್ರಕಾಶ್ ರೈ