ಧಾರವಾಡ: ಸಮಗ್ರ ವೇದ ವೇದಾಂಗಗಳೆಲ್ಲವನ್ನೂ ಅರಗಿಸಿಕೊಂಡದ್ದಲ್ಲದೆ ಭಾರತೀಯ ತತ್ವಶಾಸ್ತ್ರದ ಆಳವಾದ ತಿಳಿವಳಿಕೆ ಹೊಂದಿದ್ದ ಪರಿಪಕ್ವ ಜ್ಞಾನಿ, ಮಹಾಮೇಧಾವಿ ಕಾಳಿದಾಸನ ಸಮಗ್ರ ಕೃತಿಗಳನ್ನು ಓದಿದಾಗ ಕಾಳಿದಾಸನಿರದ ಭಾರತ ಭಾರತವೇ ಅಲ್ಲ ಎಂಬ ಮಾತು ನೂರಕ್ಕೆ ನೂರು ಸತ್ಯವಾಗಿ ಪರಿಣಮಿಸುತ್ತದೆ ಎಂದು ಸಂಸ್ಕೃತ ಅಧ್ಯಾಪಕ ಡಾ| ಭೀಮಸೇನಾಚಾರ ಮಳಗಿ ಹೇಳಿದರು.
ನಗರದಲ್ಲಿ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟವು ಸಾಧನಕೇರಿಯ ಚೈತ್ರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಕಾಳಿದಾಸನ ಕಾವ್ಯ ಸೌಂದರ್ಯ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಕುನ ಶಾಸ್ತ್ರದ ನಿಸ್ಸೀಮ ಪಂಡಿತನೂ ಆಗಿದ್ದ ಕಾಳಿದಾಸನ ಎಲ್ಲ ಧರ್ಮಗಳ ಬಗೆಗಿನ ಜ್ಞಾನವಂತೂ ಅತ್ಯದ್ಭುತದ ಮಾತಾಗಿದೆ.
ಮಹಾಭಾರತ, ವಿಷ್ಣುಪುರಾಣ, ಶಿವಪುರಾಣಗಳ ಕಥೆಗಳನ್ನೆ ತನ್ನೆಲ್ಲ ಕೃತಿಗಳಲ್ಲಿ ಸುಂದರವಾಗಿ ಪೊಣಿಸಿಟ್ಟ, ರಘುವಂಶದ ದೊರೆ ಬಿರುದಾಂಕಿತ ಕಾಳಿದಾಸನ ಉಪಮಾಲಂಕಾರ ಶೋಭಿತ ನಿರೂಪಣಾಶೈಲಿ ವರ್ಣನಾತೀತವಾಗಿದ್ದು ಎಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಆನಂದ ಝುಂಜರವಾಡ ಮಾತನಾಡಿ, ಸಮರ್ಥ ಕವಿಗೆ ಸೂಕ್ತ ಸಾಮರ್ಥ್ಯ ಕೊಡುವ ಶಕ್ತಿ ಸಂಸ್ಕೃತ ಭಾಷೆಗಿದೆ ಎಂದರು.
ಪ್ರೊ| ದುಷ್ಯಂತ ನಾಡಗೌಡ, ಡಾ| ಆರ್.ಬಿ. ಚಿಲುಮಿ, ಹ.ಶಿ. ಬೈರನಟ್ಟಿ, ಎಂ.ಎಸ್. ಪರಮೇಶ್ವರ, ಜಿ.ಆರ್. ಭಟ್ಟ, ಕೆ.ಎನ್. ಹಬ್ಬು, ಎಸ್.ಎಮ್.ದೇಶಪಾಂಡೆ, ಆರ್.ಬಿ. ಚನ್ನಪ್ಪಗೌಡರ, ಶ್ರೀನಿವಾಸ ಕುಲಕರ್ಣಿ, ಗಿರೀಶ ವಾಜಪೇಯಿ, ವಸಂತ ಎಸ್. ದೇಸಾಯಿ, ಡಾ| ದೀಪಕ ಆಲೂರ, ಜಯತೀರ್ಥ ಜಹಗೀರದಾರ, ಅನಂತ ಥಿಟೆ, ಹೇಮಂತ ಲಮಾಣಿ, ರಾಜೀವ ಪಾಟೀಲ ಕುಲಕರ್ಣಿ,
-ಬದರೀವಿಶಾಲ ಪರ್ವತೀಕರ, ಜಿ.ಎನ್. ಇನಾಮದಾರ, ಎಚ್.ಎಮ್ .ಪಾಟೀಲ, ಆರ್.ಜಿ. ನಾಡಿಗೇರ, ಅನಿಲ ಶೇಡಬಾಳ, ಡಾ| ಮಂದಾಕಿನಿ ಪುರೋಹಿತ, ಶೈಲಾ ಛಬ್ಬಿ, ಶ್ಯಾಮಲಾ ಕುಲಕರ್ಣಿ, ವಿಜಯಾ ಪಾಟೀಲ ಇದ್ದರು. ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಸ್ವಾಗತಿಸಿದರು. ವೆಂಕಟೇಶ ದೇಸಾಯಿ ನಿರೂಪಿಸಿದರು. ಡಾ| ಹ.ವೆಂ. ಕಾಖಂಡಿಕಿ ವಂದಿಸಿದರು.