Advertisement

ಕವಿತೆಗಳಿಗೂ ಒಂದು ಕಾಲ ಬರುತ್ತೆ

12:17 PM Jul 30, 2018 | |

ಬೆಂಗಳೂರು: ಕವಿತೆಗಳು ಅವಗಣನೆಗೆ ತುತ್ತಾಗುತ್ತಿವೆ. ಆದರೂ ಕವಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಒಂದಲ್ಲ ಒಂದು ದಿನ ಕವಿತೆಗಳಿಗೂ ಮಹತ್ವ ಬರುತ್ತದೆ ಎಂದು ಕವಿ ಡಾ. ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

Advertisement

ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌, ಕನ್ನಡ ಸಾಹಿತ್ಯ ವೇದಿಕೆ ಹಾಗೂ ಶೇಷಾದ್ರಿಪುರ ಸಂಜೆ ಪದವಿ ಕಾಲೇಜು ವತಿಯಿಂದ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕಾವ್ಯ-ಸಂಸ್ಕೃತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಹಿತ್ಯ ಪ್ರಕಾರದಲ್ಲಿ ಕವಿತೆಗಳನ್ನು ಕಡೆಗಣಿಸಲಾಗುತ್ತಿದೆ.

ಪ್ರಕಾಶಕರು ಕವಿತೆಗಳನ್ನು ಪ್ರಕಟಿಸಲು ಮುಂದೆ ಬರುತ್ತಿಲ್ಲ. ಪತ್ತೇದಾರಿ ಕಾದಂಬರಿ, ನಾಟಕ ಇತ್ಯಾದಿ ಸಾಹಿತ್ಯಗಳು ಪ್ರಕಾಶಕರ ಆದ್ಯತೆಯಾಗಿವೆ. ಕವಿಗಳೇ ತಮ್ಮ ಕವಿತೆಗಳನ್ನು ಪ್ರಕಟಿಸುವ ದುಸ್ಥಿತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಕವಿಗಳ ಕಷ್ಟ ಹೇಳ ತೀರದಾಗಿದೆ. ಪರಿಶ್ರಮದಿಂದ ಬರೆದ ಕವಿತೆಗಳನ್ನು ಸಂಕಷ್ಟದಲ್ಲಿ ಓದಬೇಕಾದ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಆದರೂ, ಕವಿತೆಗೆ ಒಂದು ಶಕ್ತಿ ಇದೆ. ಜನ ಒಂದಲ್ಲ ಒಂದು ದಿನ ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಕವಿಗಳಿಗೆ ಜ್ಞಾನವೇ ಮಾರಕವಾಗುವ ಸಾಧ್ಯತೆ ಹೆಚ್ಚು. ಲೋಕರೂಢಿ ಜ್ಞಾನ ಹೊಟ್ಟೆಪಾಡಿಗೆ ಅಗತ್ಯ. ಆದರೆ, ಕವಿತೆಯ ವಿಷಯದಲ್ಲಿ ಜ್ಞಾನ‌ ಅಪಾಯಕಾರಿ. ಜ್ಞಾನ ಅಂತಿಮವಾಗಿ ತರ್ಕಕ್ಕೆ ಕೊಂಡೊಯ್ಯುತ್ತದೆ. ತರ್ಕ ಕವಿತೆಯನ್ನೇ ಕೊಲ್ಲುತ್ತದೆ. ಹೀಗಾಗಿ ತರ್ಕಕ್ಕೆ ಅನುವು ಮಾಡಿಕೊಡುವ ಜ್ಞಾನ ಕವಿ ಹಾಗೂ ಕವಿತೆಗೆ ಅಗತ್ಯವಿಲ್ಲ ಎಂದು ವಿಶ್ಲೇಷಿಸಿದರು.

Advertisement

ಶೇಷಾದ್ರಿಪುರ ಸಂಜೆ ಕಾಲೇಜಿನ ಪ್ರಾಂಶುಪಾಲ  ಪ್ರೊ.ಎನ್‌.ಎಸ್‌.ಸತೀಶ್‌,  ನಿವೃತ್ತ ತಹಸೀಲ್ದಾರ್‌ ಕೆ.ಎಂ. ರೇವಣ್ಣ, ಕಮ್ಮಟದ ಸಂಚಾಲಕಿ ಪ್ರತಿಮ ಎಂ.ಸಿ.ನಾಗರಾಜ, ಟ್ರಸ್ಟ್‌ನ ಅಧ್ಯಕ್ಷ ಸ್‌.ರಾಮಲಿಂಗೇಶ್ವರ  ಉಪಸ್ಥಿತರಿದ್ದರು.

ಒಂದಲ್ಲ ಒಂದು ದಿನ ಜನರು ಕವಿತೆಯನ್ನು ಸ್ವೀಕರಿಸುತ್ತಾರೆ. ಕವಿತೆಯೊಳಗಿರುವ ಕವಿಯ ನೋವನ್ನು ಅರ್ಥ ಮಾಡಿಕೊಳ್ಳುತ್ತಾರೆ. ನನ್ನ ಕವಿತೆಗಳನ್ನು ಜನ ಇದೇ ಮಾನದಂಡದಲ್ಲಿ ಸ್ವೀಕರಿಸಿ, ಅರ್ಥಮಾಡಿಕೊಂಡಿದ್ದಾರೆ.
-ಡಾ.ಸಿದ್ದಲಿಂಗಯ್ಯ, ಕವಿ

Advertisement

Udayavani is now on Telegram. Click here to join our channel and stay updated with the latest news.

Next