Advertisement

IPL; ಸಂಚಲನ ಮೂಡಿಸಿದ ಲಕ್ನೋ ತಂಡದ ಮಾಯಾಂಕ್‌ ಯಾದವ್‌ ಗಾಯಾಳು

12:03 AM Apr 09, 2024 | Team Udayavani |

ಲಕ್ನೋ : ಈ ಬಾರಿಯ ಐಪಿಎಲ್‌ನಲ್ಲಿ ಶರವೇಗದ ಎಸೆತಗಳ ಮೂಲಕ ಭಾರೀ ಸಂಚಲನ ಮೂಡಿಸಿದ ಲಕ್ನೋ ತಂಡದ ಮಾಯಾಂಕ್‌ ಯಾದವ್‌ ಗಾಯಾಳಾಗಿದ್ದಾರೆ. ರವಿವಾರ ರಾತ್ರಿಯ ಗುಜರಾತ್‌ ಎದುರಿನ ಪಂದ್ಯದ ವೇಳೆ ಮಾಯಾಂಕ್‌ ಯಾದವ್‌ ಕೇವಲ ಒಂದೇ ಓವರ್‌ ಎಸೆದ ಬಳಿಕ ಅಂಗಳ ತೊರೆದಿದ್ದರು. ಅನಂತರ ಆಡಲಿಳಿಯಲಿಲ್ಲ.

Advertisement

ಈ ಐಪಿಎಲ್‌ನಲ್ಲಿ ಗಂಟೆಗೆ 156.7 ಕಿ.ಮೀ. ವೇಗದಲ್ಲಿ ಎಸೆತವನ್ನಿಕ್ಕುವ ಮೂಲಕ ಪ್ರಸಿದ್ಧಿಗೆ ಬಂದ ಮಾಯಾಂಕ್‌ ಯಾದವ್‌, 9 ಓವರ್‌ಗಳಲ್ಲಿ 54 ರನ್ನಿಗೆ 6 ವಿಕೆಟ್‌ ಉರುಳಿಸಿದ್ದಾರೆ. ಸತತ 2 ಪಂದ್ಯಗಳಲ್ಲಿ “ಪಂದ್ಯಶ್ರೇಷ್ಠ’ ಗೌರವಕ್ಕೂ ಪಾತ್ರರಾಗಿದ್ದಾರೆ. ಆದರೆ ಗುಜರಾತ್‌ ವಿರುದ್ಧ ಗಂಟೆಗೆ 140 ಕಿ.ಮೀ.ಗೂ ಕಡಿಮೆ ವೇಗದಲ್ಲಿ ಎಸೆತಗಳನ್ನಿಕ್ಕಿದ್ದರು.

“ಅವರು ಪಾರ್ಶ್ವ ಸ್ನಾಯು ಸೆಳೆತಕ್ಕೆ ಸಿಲುಕಿದ್ದಾರೆ. ಆದರೆ ಇದೇನೂ ಗಂಭೀರ ನೋವಲ್ಲ. ಮುಂದಿನ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ’ ಎಂಬುದಾಗಿ ಲಕ್ನೋ ತಂಡದ ಮತ್ತೋರ್ವ ಬೌಲರ್‌ ಯಶ್‌ ಠಾಕೂರ್‌ ಹೇಳಿದ್ದಾರೆ.

ಮಾಯಾಂಕ್‌ ಗೈರು: ಯಶ್‌ ಯಶಸ್ಸು
ತಂಡ ಒಬ್ಬರನ್ನೇ ಅವ ಲಂಬಿಸಿಲ್ಲ, ಇರಲೂಬಾರದು ಎಂಬುದಕ್ಕೆ ಲಕ್ನೋ ಸೂಪರ್‌ ಜೈಂಟ್ಸ್‌ ಉತ್ತಮ ನಿದರ್ಶನ ಒದಗಿಸಿದೆ. ಹಿಂದಿನೆರಡು ಪಂದ್ಯಗಳಲ್ಲಿ ಮಾಯಾಂಕ್‌ ಯಾದವ್‌ ತಮ್ಮ ವೇಗದ ಅಸ್ತ್ರದ ಮೂಲಕ ಎದುರಾಳಿಯನ್ನು ಪುಡಿಗಟ್ಟಿದ್ದರು. ರವಿವಾರ ರಾತ್ರಿ ಮಾಯಾಂಕ್‌ ಗಾಯಾ ಳಾಗಿ ಹಿಂದೆ ಸರಿದಾಗ ಲಕ್ನೋ ಆತಂಕಕ್ಕೆ ಸಿಲುಕಿದ್ದು ಸಹಜ. ಕಾರಣ, ಗುಜರಾತ್‌ ಮುಂದಿದ್ದುದು ಸಾಮಾನ್ಯ ಗುರಿ.

ಇಂಥ ಸಂದರ್ಭದಲ್ಲಿ ತಂಡದ ಕೈ ಹಿಡಿದು ಗೆಲುವಿನ ರೂವಾರಿಯಾಗಿ ಮೂಡಿಬಂದವರು ಯಶ್‌ ಠಾಕೂರ್‌. ಇವರ ಸಾಧನೆ 30ಕ್ಕೆ 5 ವಿಕೆಟ್‌. ಠಾಕೂರ್‌ ಐಪಿಎಲ್‌ನಲ್ಲಿ 5 ವಿಕೆಟ್‌ ಉರುಳಿಸಿದ ಮೊದಲ ನಿದರ್ಶನ ಇದಾಗಿತ್ತು.

Advertisement

ಈ ದಿನ ನಿನ್ನದಾಗಲಿದೆ…
“ಮಾಯಾಂಕ್‌ ಮೈದಾನ ತೊರೆದು ಹೋದ ಬಳಿಕ ರಾಹುಲ್‌ ಭಾಯ್‌ ನನಗೆ ಹೇಳಿದ್ದಿಷ್ಟು, “ಬಹುಶಃ ಈ ದಿನ ನಿನ್ನದಾಗಲಿದೆ. ನೀನು ನಮಗಾಗಿ ಪಂದ್ಯವನ್ನು ಗೆಲ್ಲಿಸಿ ಕೊಡಬಲ್ಲೆ’. ಈ ಬಗ್ಗೆ ಹೆಚ್ಚು ಯೋಚಿಸುವುದು ಬೇಡ, ನಿನ್ನ ಮೇಲೆ ನಿನಗೆ ನಂಬಿಕೆ ಇದ್ದರೆ ಸಾಕು ಎಂದು ಸ್ಫೂರ್ತಿ ತುಂಬಿದರು’ ಎಂಬುದಾಗಿ ಯಶ್‌ ಠಾಕೂರ್‌ ಆ ಕ್ಷಣವನ್ನು ನೆನಪಿಸಿಕೊಂಡರು. ಬಳಿಕ ತಮ್ಮ ಮ್ಯಾಚ್‌ ವಿನ್ನಿಂಗ್‌ ಸಾಧನೆಯನ್ನು ನಾಯಕ ರಾಹುಲ್‌ ಅವರಿಗೆ ಅರ್ಪಿಸಿದರು.

ನೀನಿಂದು ನನ್ನ ಹೀರೋ…
ಬೌಲಿಂಗ್‌ ಕೋಚ್‌ ಮಾರ್ನೆ ಮಾರ್ಕೆಲ್‌ ಅವರ ಮಾರ್ಗದರ್ಶನ ವನ್ನೂ ಯಶ್‌ ಗುಣಗಾನ ಮಾಡಿದರು. “ನೀನಿಂದು ನನ್ನ ಹೀರೋ ಎಂಬುದಾಗಿ ಮಾರ್ನೆ ಸರ್‌ ಪ್ರಶಂಸಿಸಿದರು. ಅವರು ನನ್ನ ಮೇಲಿರಿಸಿದ ನಂಬಿಕೆಗೆ ಹೆಮ್ಮೆ ಆಗುತ್ತಿದೆ’ ಎಂದರು.

1998ರ ಡಿಸೆಂಬರ್‌ 28ರಂದು ಕೋಲ್ಕತಾದಲ್ಲಿ ಜನಿಸಿದ ಯಶ್‌ ಠಾಕೂರ್‌, ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ಪರ ಆಡುತ್ತಾರೆ. ಆರಂಭದಲ್ಲಿ ವಿಕೆಟ್‌ ಕೀಪರ್‌ ಆಗಬೇಕೆಂಬುದು ಠಾಕೂರ್‌ ಬಯಕೆ ಆಗಿತ್ತು. ಆದರೆ ಕೀಪಿಂಗ್‌ನಲ್ಲಿ ಅವಕಾಶ ಕಡಿಮೆ ಎಂದರಿತು ವೇಗದ ಬೌಲಿಂಗ್‌ ನೆಚ್ಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next