ಹೊಸದಿಲ್ಲಿ : ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 11,400 ಕೋಟಿ ರೂ.ಗಳನ್ನು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ನೀರವ್ ಮೋದಿ ಕಂಪೆನಿಯ 30 ಕೋಟಿ ರೂ. ಹಣ ಇರುವ ಬ್ಯಾಂಕ್ ಖಾತೆಯನ್ನು ಸ್ತಂಭನಗೊಳಿಸಿದರಲ್ಲದೆ 13.86 ಕೋಟಿ ರೂ.ಮೌಲ್ಯದ ಶೇರುಗಳನ್ನು ವಶಪಡಿಸಿಕೊಂಡರು.
ಖಚಿತ ಸುಳಿವಿನ ಮೇರೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ಈ ದಾಳಿಯಲ್ಲಿ ಅತ್ಯಂತ ದುಬಾರಿ ವಿದೇಶೀ ವಾಚುಗಳಿರುವ 176 ಸ್ಟೀಲ್ ಆಲ್‌ಮಿರಾಗಳನ್ನು ಮತ್ತು 60 ಪ್ಲಾಸ್ಟಿಕ್ ಕಂಟೇನರ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನಿನ್ನೆ ಗುರುವಾರ ನಡೆಸಲಾಗಿದ್ದ ದಾಳಿಯಲ್ಲಿ ಚೋಕ್ಸಿಗೆ ಸೇರಿದ 86.72 ಕೋಟಿ ರೂ ಮೌಲ್ಯದ ಶೇರುಗಳನ್ನು ಮತ್ತು ನೀರವ್ ಮೋದಿ ಸಮೂಹದ 7.80 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಮಾತ್ರವಲ್ಲದೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀರವ್ ಮೋದಿಗೆ ಸೇರಿದ 9 ಐಶಾರಾಮಿ ಬ್ರಾಂಡ್ ಕಾರುಗಳನ್ನು ವಶಪಡಿಸಿಕೊಂಡಿತ್ತು. ಇವುಗಳಲ್ಲಿ ಒಂದು ರೋಲ್ಸ್ ರಾಯ್ಸ “ಘೋಸ್ಟ್’, ಒಂದು ಮರ್ಸಿಡಿಸ್ ಬೆಂಜ್, ಒಂದು ಪೋರ್ಶ್ ಪ್ಯಾನಮೆರಾ, ಮೂರು ಹೋಂಡಾ ಮಾಡೆಲ್‌ಗಳು, ಒಂದು ಟೊಯೋಟಾ Fortuner ಮತ್ತು ಒಂದು ಇನ್ನೋವಾ ಸೇರಿದ್ದವು.
ನೀರವ್ ಮೋದಿಗೆ ಸೇರಿದ ಶೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳ ಒಟ್ಟು ಮೌಲ್ಯ 94.52 ಕೋಟಿ ರೂ.ಗಳಾಗಿದ್ದು ಅತ್ಯಂತ ದುಬಾರಿ ಕಾರುಗಳ ಮೌಲ್ಯವೇ ಕೆಲವು ಕೋಟಿ ರೂ.ಗಳಾಗುತ್ತವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.