Advertisement

ಪಿಎನ್‌ಬಿಯಲ್ಲಿ ಮತ್ತೆ 9 ಕೋಟಿ ಹಗರಣ

06:00 AM Mar 16, 2018 | |

ನವದೆಹಲಿ/ಮುಂಬೈ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ 3 ಸಾವಿರ ಕೋಟಿ ರೂ. ಹಗರಣ ಬೆಳಕಿಗೆ ಬಂದು ದಿನಗಳು ಕಳೆದಿಲ್ಲ. ಗುರುವಾರ ಅದೇ ಬ್ಯಾಂಕ್‌ನಲ್ಲಿ ನಕಲಿ ಲೆಟರ್‌ ಆಫ್ ಅಂಡರ್‌ಟೇಕಿಂಗ್‌ (ಎಲ್‌ಓಯು) ಮೂಲಕ 9 ಕೋಟಿ ರೂ. ವಂಚಿಸಲಾಗಿದೆ. ಸ್ವರ್ಣೋದ್ಯಮಿ ನೀರವ್‌ ಮೋದಿ ಮತ್ತು ಮೆಹುಲ್‌ ಚೋಸ್ಕಿ ವಂಚಿಸಿದ ಮಾದರಿಯಲ್ಲಿಯೇ ಚಂದ್ರಿ ಪೇಪರ್ಸ್‌ ಆ್ಯಂಡ್‌ ಅಲೈಡ್‌ ಪ್ರಾಡಕ್ಟ್ ಎಂಬ ಕಂಪನಿ ಮುಂಬೈ ಬ್ರಾಡಿ ಹೌಸ್‌ ಶಾಖೆಯಲ್ಲಿ ವಂಚಿಸಿದೆ. ಎರಡು ನಕಲಿ ಎಲ್‌ಓಯು ಮೂಲಕ ಶಾಖೆಗೆ 9 ಕೋಟಿ ರೂ. ಮೊತ್ತವನ್ನು ಬೆಲ್ಜಿಯಂನಲ್ಲಿರುವ ಆ್ಯಂಟ್ರೂಪ್‌ ನಗರದಲ್ಲಿರುವ ಎಸ್‌ಬಿಐ ಶಾಖೆಗೆ ಪಾವತಿಯಾಗುವಂತೆ ಮಾಡಿದ್ದಾರೆ.  ಈ ಬಗ್ಗೆ ಸಿಬಿಐ ಹೊಸತಾಗಿ ಕೇಸು ದಾಖಲಿಸಿಕೊಂಡಿದೆ. ಅದರಲ್ಲಿ  ಪಿಎನ್‌ಬಿಯ ನಿವೃತ್ತ ಅಧಿಕಾರಿ ಗೋಕುಲ್‌ನಾಥ್‌ ಶೆಟ್ಟಿ ಮತ್ತು ಏಕ ಗವಾಕ್ಷ ಅಧಿಕಾರಿ ಮನೋಜ್‌ ಖಾರಟ್‌ ವಿರುದ್ಧವೂ ಆರೋಪ ಹೊರಿಸಲಾಗಿದೆ. 

Advertisement

ಪರಾರಿಯಾಗದಂತೆ ಕ್ರಮ: ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಉದ್ದೇಶಪೂರ್ವಕ ಸುಸ್ತಿದಾರರಾಗಿರುವ 91 ಮಂದಿಯ ವಿವರಗಳನ್ನು ಕೇಂದ್ರ ಸರ್ಕಾರ ಕಲೆಹಾಕಿದ್ದು, ಅವರು ದೇಶ ಬಿಟ್ಟು ಪರಾರಿಯಾಗದಂತೆ ಕ್ರಮ ಕೈಗೊಂಡಿದೆ. ಇದರ ಜತೆಗೆ ಸುಮಾರು 400 ಕಂಪನಿಗಳು ಮತ್ತು ಅದರ ನಿರ್ದೇಶಕರು ಮತ್ತು ಆಡಳಿತ ಮಂಡಳಿ ಸದಸ್ಯರನ್ನು ಉದ್ದೇಶಪೂರ್ವಕ ಸುಸ್ತಿದಾರರು ಎಂದು ಹೆಸರಿಸಿದೆ. ಜತೆಗೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿ ಮಾಹಿತಿ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next