ನವದೆಹಲಿ: ಕೋವಿಡ್ 19 ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ರಾಷ್ಟ್ರವ್ಯಾಪಿ ಜಾರಿಗೊಳಿಸಿರುವ ಲಾಕ್‌ಡೌನ್‌ನ ನಾಲ್ಕನೇ ಚರಣದ ಅಂತಿಮ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗಲಿದ್ದು ಲಾಕ್ ಡೌನ್ 5 ನೇ ಹಂತ ಮತ್ತು ಅನ್ ಲಾಕ್ 1.0 ಇದರ ಕುರಿತಾಗಿ ಹೆಚ್ಚಿನ ಮಾಹಿತಿ ನೀಡುವ ಸಾಧ‍್ಯತೆಯಿದೆ.
ದೇಶಾದ್ಯಂತ ಕೋವಿಡ್ 19 ವೈರಸ್ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಧಾನಿ ಮೋದಿ ಮಾರ್ಚ್ 24 ರಂದು 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದರು. ನಂತರ ಲಾಕ್‌ಡೌನ್ ಮೂರು ಬಾರಿ ವಿಸ್ತರಿಸಲಾಯಿತು.
ಮೋದಿ ಸರ್ಕಾರದ ಎರಡನೇ ಅವಧಿಯ ಒಂದು ವರ್ಷದ ವಾರ್ಷಿಕೋತ್ಸವದ ಒಂದು ದಿನದ ನಂತರ ‘ಮನ್ ಕಿ ಬಾತ್’ ನ 65 ನೇ ಆವೃತ್ತಿ ಬರುತ್ತದೆ.ಈಗಾಗಲೇ ಕೇಂದ್ರ ಗೃಹ ಸಚಿವಾಲಯ (ಎಂಎಚ್ ಎ) ಜೂನ್ 1ರಿಂದ ಮುಂದಿನ ಒಂದು ತಿಂಗಳವರೆಗೆ ಎಲ್ಲಾ ಚಟುವಟಿಕೆಗಳನ್ನು ಹಂತಹಂತವಾಗಿ ಪುನಃ ತೆರೆಯಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ, ಭಾರತಲ್ಲಿ ಶನಿವಾರ 7,964 ಕೋವಿಡ್ -19 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿದ್ದು ಇದೇ ಮೊದಲು. ಆ ಮೂಲಕ ಒಟ್ಟಾರೆ ಸೋಂಕಿತರ ಪ್ರಮಾಣ 173,763 ಕ್ಕೆ ತಲುಪಿದೆ.
ಕಳೆದ 24 ಗಂಟೆಗಳಲ್ಲಿ 265 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದು, ವೈರಸ್‌ನಿಂದ ಮೃತರಾದವರ ಸಂಖ್ಯೆ ಈಗ 4,971ಕ್ಕೆ ಏರಿಕೆಯಾಗಿದೆ. ಒಟ್ಟು ಕೋವಿಡ್ -19 ಸೋಂಕಿತರ ಪೈಕಿ 86,422 ಸಕ್ರಿಯ ಪ್ರಕರಣಗಳಿದ್ದು, 82,370 ಜನರು ಗುಣಮುಖರಾಗಿ ಬಿಡುಗಡೆ ಮಾಡಲಾಗಿದೆ.