ಮುಂಬಯಿ : ‘ಫ್ರಾನ್ಸ್ ಜತೆಗಿನ ರಾಫೇಲ್ ಫೈಟರ್ ಜೆಟ್ ವ್ಯವಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಭಾರೀ ಕ್ರಿಮಿನಲ್ ದುರ್ವರ್ತನೆಯನ್ನು ತೋರಿದೆ’ ಎಂದು ಆಪಾದಿಸಿದ ಎರಡು ದಿನಗಳ ತರುವಾಯ ಮಾಜಿ ಕೇಂದ್ರ ಸಚಿವರಾದ ಯಶ್ವಂತ್ ಸಿನ್ಹಾ ಮತ್ತು ಅರುಣ್ ಶೌರಿ ಅವರು “ಎಲ್ಲ ಮುಖ್ಯ ಕೇಂದ್ರ ಸಚಿವಾಲಯ ನಿರ್ಧಾರಗಳನ್ನು ಪ್ರಧಾನಿ ಕಾರ್ಯಾಲವೊಂದೇ ತೆಗೆದುಕೊಳ್ಳುತ್ತಿದೆ; ಕೇಂದ್ರ ಸಚಿವರುಗಳು ಏನೂ ಮಾಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ.
ಸಿನ್ಹಾ ಮತ್ತು ಶೌರಿ ಜತೆಗೆ ಬಿಜೆಪಿಯ ಇನ್ನೋರ್ವ ಬದಿಗೊತ್ತಲ್ಪಟ್ಟಿರುವ ನಾಯಕ ಶತ್ರುಘ್ನ ಸಿನ್ಹಾ ಕೂಡ ಸೇರಿಕೊಂಡು ಮೋದಿ ಸರಕಾರದ ವಿರುದ್ಧ ವಾಕ್ ದಾಳಿ ನಡೆಸಿದ್ದಾರೆ.
ಮುಂಬಯಿಯಲ್ಲಿ ನಡೆದ “ಪ್ರಜಾಸತ್ತೆ ಉಳಿಸಿ, ಸಂವಿಧಾನ ಉಳಿಸಿ ಚರ್ಚೆಯಲ್ಲಿ ಪಾಲ್ಗೊಂಡ ಈ ಮೂವರು ಹಿರಿಯ ನಾಯಕರು ಭಾರತ – ಫ್ರಾನ್ಸ್ ರಾಫೇಲ್ ಫೈಟರ್ ಜೆಟ್ ವಹಿವಾಟಿನಲ್ಲಿನ ಅವ್ಯವಹಾರ, ಭ್ರಷ್ಟಾಚಾರ ಮತ್ತು ಭಾರೀ ಬ್ಯಾಂಕ್ ಸಾಲ ಸುಸ್ತಿಗಾರ ಉದ್ಯಮಿಗಳೊಂದಿಗೆ ಸರಕಾರ ಸೇರಿಕೊಂಡಿರುವುದನ್ನು ಆರೋಪಿಸಿದ್ದಾರೆ.
‘ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜತೆಗಿನ ಮೈತ್ರಿ ಸರಕಾರದಿಂದ ಬಿಜೆಪಿ ಹೊರಬರುವ ನಿರ್ಧಾರ ಮೋದಿ ಸರಕಾರದ ನಂಬರ್ 2 ಹುದ್ದೆಯ ವ್ಯಕ್ತಿಗೂ ಗೊತ್ತಿರಲಿಲ್ಲ’ ಎಂದು ಯಶ್ವಂತ್ ಸಿನ್ಹಾ ಅವರು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಗುರಿ ಇರಿಸಿ ಟೀಕಿಸಿದರು.
ಪ್ರಧಾನಿ ಮೋದಿ 500 ಮತ್ತು 1,000 ರೂ. ಕರೆನ್ಸಿ ನೋಟುಗಳನ್ನು ಅಮಾನ್ಯ ಮಾಡುವ ವಿಷಯ ಕೇಂದ್ರ ಹಣಕಾಸು ಸಚಿವರಾಗಿದ್ದ ಅರುಣ್ ಜೇತ್ಲಿ ಗೂ ಮೊದಲಾಗಿ ಗೊತ್ತಿರಲಿಲ್ಲ ಎಂದು ಸಿನ್ಹಾ ಟೀಕಿಸಿದರು.
ಈಚೆಗಷ್ಟೇ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪ್ರಕಟಿಸಿದ್ದ ಯಶ್ವಂತ್ ಸಿನ್ಹಾ ಅವರು “ರಾಫೇಲ್ ಫೈಟರ್ ಜೆಟ್ ಡೀಲ್‌ನಲ್ಲಿ ಮೋದಿ ಸರಕಾರದಿಂದ 35,000 ಕೋಟಿ ರೂ. ಹಗರಣ ನಡೆದಿದೆ, ಕಾಂಗ್ರೆಸ್ ಕಾಲದಲ್ಲಿ ನಡೆದಿದ್ದ ಬೊಫೋರ್ಸ್ ಹಗರಣ ಕೇವಲ 64 ಕೋಟಿ ರೂ.ಗಳದ್ದಾಗಿತ್ತು’ ಎಂದು ಆರೋಪಿಸಿದರು.