ನವದೆಹಲಿ: ಕೋವಿಡ್ 19 ವೈರಸ್ ಗೆ ಸಂಬಂಧಿಸಿದಂತೆ ಅರಿವು ಮೂಡಿಸುವಲ್ಲಿ ಮುದ್ರಣ ಮಾಧ್ಯಮದ ಪಾತ್ರ ಶ್ಲಾಘನೀಯವಾದದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಪ್ರತಿಯೊಂದು ಗ್ರಾಮದಿಂದ ಹಿಡಿದು ದೇಶದ ಮೂಲೆ, ಮೂಲೆಗೂ ಅರಿವು ಮೂಡಿಸುವ, ಸುದ್ದಿ ತಲುಪಿಸುವಲ್ಲಿ ಮುದ್ರಣ ಮಾಧ್ಯಮದ ಕೆಲಸ ತುಂಬಾ ಮುಖ್ಯವಾದದ್ದು. ಇದರಲ್ಲಿ ಮುದ್ರಣ ಮಾಧ್ಯಮ ತುಂಬಾ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದರು.
ದೇಶದ ಪ್ರಮುಖ ದಿನಪತ್ರಿಕೆಯ ಸಂಪಾದಕರು, ಪಬ್ಲಿಷರ್ಸ್ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಪ್ರಧಾನಿ ಮೋದಿ, ಕೋವಿಡ್ 19 ವಿಚಾರದಲ್ಲಿ ಮುದ್ರಣ ಮಾಧ್ಯಮ ಅದ್ಭುತ ವಿಶ್ವಾಸಾರ್ಹ ಕಾರ್ಯ ನಿರ್ವಹಿಸಿದೆ. ಪತ್ರಿಕೆಗಳ ಸ್ಥಳೀಯ ಪುಟಗಳನ್ನು ಓದಿದ್ದೇನೆ. ಕೋವಿಡ್ 19 ಬಗ್ಗೆ ಅರಿವು ಮೂಡಿಸುವ ಅತ್ಯುತ್ತಮ ಫ್ಲ್ಯಾಟ್ ಫಾರಂ ಇದಾಗಿದೆ ಎಂದು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಕೋವಿಡ್ 19 ಪರೀಕ್ಷಾ ಕೇಂದ್ರಗಳ ಬಗ್ಗೆ, ಯಾರು ಪರೀಕ್ಷೆಗೊಳಗಾಬೇಕು, ಪರೀಕ್ಷೆಗೊಳಾಗುವವರು ಯಾರನ್ನು ಸಂಪರ್ಕಿಸಬೇಕು, ಮನೆಯಲ್ಲಿರುವಾಗ ಅನುಸರಿಸಬೇಕಾದ ಮಾರ್ಗಗಳು ಹೀಗೆ ಹಲವು ವಿಷಯಗಳ ಕುರಿತು ಜನರಿಗೆ ಮಾಹಿತಿ ನೀಡುವುದು ಅಗತ್ಯ. ಇದರ ಬಗ್ಗೆ ಮುದ್ರಣ ಮಾಧ್ಯಮಗಳು, ವೆಬ್ ಪೋರ್ಟಲ್ ಗಳು ಉತ್ತಮವಾಗಿ ಮಾಹಿತಿ ನೀಡಬೇಕಾಗಿದೆ ಎಂದರು.
ದೇಶದಲ್ಲಿ ಲಾಕ್ ಡೌನ್ ಆದಾಗ ಜನರಿಗೆ ಯಾವ ವಸ್ತುಗಳ ದೊರೆಯಲಿದೆ, ಯಾವ ವಸ್ತು ಲಭ್ಯವಿಲ್ಲ ಎಂಬುದನ್ನು ಸ್ಥಳೀಯ ಪುಟಗಳಲ್ಲಿಯೂ ಪ್ರಕಟಿಸುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದರು ಎಂದು ವರದಿ ತಿಳಿಸಿದೆ. ಮಾಧ್ಯಮಗಳು ಸರ್ಕಾರ ಮತ್ತು ಜನರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ತಿಳಿಸಿದ್ದರು. ಅದೇ ರೀತಿ ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದ ಫೀಡ್ ಬ್ಯಾಕ್ ಗಳನ್ನು ಕೂಡಾ ನೀಡುವುದು ಅಗತ್ಯ ಎಂದರು.