ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡ್ ನ ರುದ್ರಪ್ರಯಾಗ್ ಜಿಲ್ಲೆಯಲ್ಲಿರುವ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಆದಿ ಗುರು ಶಂಕರಾಚಾರ್ಯರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು.
2013 ರ ಉತ್ತರಾಖಂಡದ ಪ್ರವಾಹದಲ್ಲಿ ಆದಿ ಶಂಕರಾಚಾರ್ಯರ ಸಮಾಧಿಗೆ ಹಾನಿಯಾಗಿತ್ತು. ಹೀಗಾಗಿ ಅದನ್ನು ಪುನರ್ನಿರ್ಮಿಸಲಾಗಿದೆ.
ಇದನ್ನೂ ಓದಿ:ಮೈಸೂರು ಶಿಲ್ಪಿಯಿಂದ ಕೇದಾರನಾಥದಲ್ಲಿ ಶಂಕರಾಚಾರ್ಯ ಪ್ರತಿಮೆ
ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಅವರು ಕೇದಾರನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಆರತಿ ಮಾಡಿದರು. ಭಗವಾನ್ ಶಿವನಿಗೆ ನಮನ ಸಲ್ಲಿಸಿದ ಅವರು ಪ್ರಾರ್ಥನೆ ಸಲ್ಲಿಸಿದ ನಂತರ ಕೇದಾರನಾಥ ದೇಗುಲಕ್ಕೆ ಪ್ರದಕ್ಷಿಣೆ ಹಾಕಿದರು.
ಹಿಮಾಲಯ ದೇವಾಲಯದಲ್ಲಿ 300 ಕೋಟಿ ರೂ. ಗೂ ಅಧಿಕ ಮೊತ್ತದ ಪುನರ್ ನಿರ್ಮಾಣ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಉತ್ತರಾಖಂಡದ ಗವರ್ನರ್ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ), ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳಾದ ಸುಬೋಧ್ ಉನಿಯಾಲ್ ಮತ್ತು ಗಣೇಶ್ ಜೋಶಿ, ಉತ್ತರಾಖಂಡ ವಿಧಾನಸಭೆ ಸ್ಪೀಕರ್ ಪ್ರೇಮಚಂದ್ ಅಗರ್ವಾಲ್ ಅವರು ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡರು.
“ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ. ಪ್ರಧಾನಿ ಮೋದಿ ಬೆಳಿಗ್ಗೆ ಇಲ್ಲಿಗೆ ತಲುಪುತ್ತಾರೆ. ಅವರು ಮಹಾ ರುದ್ರ ಅಭಿಷೇಕವನ್ನು ಮಾಡುತ್ತಾರೆ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಾರೆ. ಅವರು ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸುತ್ತಾರೆ. ದೇವಾಲಯವನ್ನು ಅಲಂಕರಿಸಲಾಗಿದೆ. ಹೂವುಗಳೊಂದಿಗೆ, ”ಕೇದಾರನಾಥ ದೇವಸ್ಥಾನದ ಅರ್ಚಕ ಬಾಗೀಶ್ ಲಿಂಗ್ ಭೇಟಿಯ ಮೊದಲು ಸುದ್ದಿ ಸಂಸ್ಥೆ ಎಎನ್ ಐ ಗೆ ತಿಳಿಸಿದರು.