ಅಹಮದಾಬಾದ್: ದೇಶದ ಮೊತ್ತಮೊದಲ ಬುಲೆಟ್ ಟ್ರೈನ್‌ನ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸುವ ನಿಟ್ಟಿನಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ದಂಪತಿ ಬುಧವಾರ ಅಹಮದಾಬಾದ್‌ಗೆ ಆಗಮಿಸಿದ್ದರು. ಈ ವೇಳೆ ಶಿಂಜೋ ದಂಪತಿಯನ್ನು ಏರ್‌ಪೋರ್ಟ್‌ನಿಂದ ಎಂಟು ಕಿಮೀ ದೂರದ ವರೆಗೆ ಪ್ರಧಾನಿ ನರೇಂದ್ರ ಮೋದಿ ಜತೆಗೆ ರೋಡ್‌ಶೋ ಮೂಲಕ ಸಬರಮತಿ ಆಶ್ರಮಕ್ಕೆ ಕರೆತರಲಾಯಿತು.
2 ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ಶಿಂಜೋ ಅಬೆ ದಂಪತಿ ಭಾರತಕ್ಕೆ ಆಗಮಿಸಿದ್ದರು. ಭಾರತದ ಪ್ರಥಮ ಬುಲೆಟ್ ಟ್ರೈನ್ ಶಿಲಾನ್ಯಾಸ ಕಾರ್ಯಕ್ರಮವನ್ನು ಅಬೆ ನೆರವೇರಿಸಲಿದ್ದಾರೆ. ಅಹಮದಾಬಾದ್ ಟು ಮುಂಬೈ ಮಾರ್ಗ ಇದಾಗಿದೆ.
ಅಹಮದಾಬಾದ್ ಏರ್ ಪೋರ್ಟ್ ಗೆ ಬಂದಿಳಿದ ಶಿಂಜೋ ಅಬೆ ದಂಪತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮೀಯವಾಗಿ ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದವರೆಗೆ ಶಿಂಜೋ ಅಬೆ ಮತ್ತು ಮೋದಿ ರೋಡ್ ಶೋ ನಡೆಸಿದರು. ರೋಡ್ ಶೋ ಉದ್ದಕ್ಕೂ 40 ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಿಂಜೋ ಅಬೆ ದಂಪತಿ ಮಹಾತ್ಮ ಗಾಂಧಿ ಅವರ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು, ಗಾಂಧಿ ಉಪಯೋಗಿಸುತ್ತಿದ್ದ ಚರಕದ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ನೀಡಿದರು. ಸಬರಮತಿ ಆಶ್ರಮದ ವಿಸಿಟರ್ (ಭೇಟಿ ಮಾಡುವವರ) ಪುಸ್ತಕದಲ್ಲಿ ಶಿಂಜೋ ಅಬೆ ಮತ್ತು ಪತ್ನಿ ಹಸ್ತಾಕ್ಷರವನ್ನು ಬರೆದರು.
ಶಿಂಜೋ ಅಬೆ ದಂಪತಿ ಭಾರತೀಯ ಶೈಲಿಯ ಉಡುಗೆ ತೊಟ್ಟಿದ್ದರು. ರೋಡ್ ಶೋ ಉದ್ದಕ್ಕೂ ಲಕ್ಷಾಂತರ ಜನರು ನೆರದಿದ್ದರು. ಗುರುವಾರ ಜಪಾನ್ ಮತ್ತು ಭಾರತದ ಪ್ರಧಾನಿಗಳು ಐತಿಹಾಸಿಕ ಯೋಜನೆಯ ಭೂಮಿ ಪೂಜೆ ನೆರವೇರಿಸಲಿದ್ದಾರೆ.