Advertisement

ಖೇಲ್‌ ಮಹಾಕುಂಭಕ್ಕೆ ಚಾಲನೆ; ವಲ್ಲಭಭಾಯ್‌ ಕ್ರೀಡಾಂಗಣದಲ್ಲಿ ಪಿಎಂ ಮೋದಿಯಿಂದ ಉದ್ಘಾಟನೆ

12:06 AM Mar 13, 2022 | Team Udayavani |

ಅಹ್ಮದಾಬಾದ್‌: ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಶನಿವಾರ ಇಲ್ಲಿನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಕ್ರೀಡಾಂಗಣದಲ್ಲಿ 11ನೇ ಖೇಲ್‌ ಮಹಾಕುಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶೇಷವೆಂದರೆ 2010ರಲ್ಲಿ ಮೋದಿ ಅವರು ಗುಜರಾತ್‌ ಸಿಎಂ ಆಗಿದ್ದ ವೇಳೆ ಈ ಖೇಲ್‌ ಮಹಾಕುಂಭ ಕಾರ್ಯಕ್ರಮ ಜಾರಿ ಮಾಡಿದ್ದರು.

Advertisement

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಮೋದಿ ಅವರು, 12 ವರ್ಷದ ಹಿಂದೆ ನಾನೇ ಈ ಖೇಲ್‌ ಮಹಾಕುಂಭ ಆರಂಭಿಸಿದ್ದೆ. ಇಂಥದ್ದೊಂದು ಕಾರ್ಯಕ್ರಮ ಆರಂಭಿಸಬೇಕು ಎಂಬುದು ನನ್ನ ಅತೀ ದೊಡ್ಡ ಕನಸಾಗಿತ್ತು. ಅಂದು ನೆಟ್ಟ ಬೀಜ ಇಂದು ದೊಡ್ಡ ಹೆಮ್ಮರವಾಗಿ ಬೆಳೆದಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

2010ರಲ್ಲಿ ಆರಂಭಿಸಿದಾಗ ಈ ಕ್ರೀಡಾಕೂಟದಲ್ಲಿ 16 ಕ್ರೀಡೆಗಳಲ್ಲಿ 13 ಲಕ್ಷ ಮಂದಿ ಭಾಗಿಯಾಗಿದ್ದರು. 2019ರಲ್ಲಿ 40 ಲಕ್ಷ ಯುವಕರು, 36 ಕ್ರೀಡಾ ಮತ್ತು 26 ಪ್ಯಾರಾ ಕ್ರೀಡಾಕೂಟಗಳಲ್ಲಿ  ಭಾಗವಹಿಸಿದ್ದರು. ಈಗ 55 ಲಕ್ಷ ಯುವಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಯುಪಿಯಲ್ಲಿ ಹೀನಾಯ ಸೋಲು: ಮಾಧ್ಯಮಗಳ ಮುಂದೆ ಬರಲ್ಲ ಎಂದ ಮಾಯಾವತಿ

ಸಮಾಜದ ಬಗ್ಗೆ ಮೃದು ಇರಲಿ : ಈ ಮಧ್ಯೆ, ಶನಿವಾರ ಬೆಳಗ್ಗೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದ ಮೋದಿ ಅವರು, ಪೊಲೀಸ್‌ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಯಾಗಬೇಕು ಎಂದು ಕರೆ ನೀಡಿದರು. ಪೊಲೀಸರು ಸಮಾಜದ ಬಗ್ಗೆ ಮೃದು ಧೋರಣೆ ಇರಿಸಿಕೊಂಡಿರಲಿ, ಹಾಗೆಯೇ ಸಮಾಜ ವಿರೋಧಿ ಶಕ್ತಿಗಳ ಬಗ್ಗೆ ಕಠಿನ ಧೋರಣೆ ಇರಿಸಿಕೊಂಡಿರಬೇಕು ಎಂದರು. ಪೊಲೀಸ್‌ ಇಲಾಖೆಯಲ್ಲಿ ತಂತ್ರಜ್ಞಾನವನ್ನೂ ಹೆಚ್ಚಾಗಿ ಬಳಸಿಕೊಳ್ಳಬೇಕು. ಇದಕ್ಕಾಗಿ ಎಲ್ಲ ರೀತಿಯಲ್ಲಿಯೂ ತರಬೇತಿಯಾಗಬೇಕು ಎಂದು ಮೋದಿ ಕರೆ ನೀಡಿದರು.

Advertisement

ಶನಿವಾರವೂ ಮೋದಿ ಅವರು, ಅಹ್ಮದಾಬಾದ್‌ನಲ್ಲಿ ರೋಡ್‌ ಶೋ ನಡೆಸಿದರು.1947ರ ಅನಂತರ ದೇಶದ ಭದ್ರತಾ ಪಡೆಗಳ ಪರಿಕರಗಳು ಆಧುನೀಕರಣಗೊಂಡಿರಲೇ ಇಲ್ಲ. ಬಹುಮುಖ್ಯವಾಗಿ ಆಗಬೇಕಿದ್ದ ಈ ಕೆಲಸದಲ್ಲಿ ಭಾರತ ತೀರಾ ಹಿಂದುಳಿದಿತ್ತು ಎಂದು ಪ್ರಧಾನಿ ಇದೇ ವೇಳೆ ವಿಷಾದಿಸಿದರು. ಈಗಲೂ ಭಾರತದಲ್ಲಿ ಪೊಲೀಸರು ಬಳಸುವ ಶಸ್ತ್ರಾಸ್ತ್ರಗಳು ಕಾಲಕ್ಕೆ ತಕ್ಕಂತೆ ಇಲ್ಲ. ನಾವು ಪೊಲೀಸ್‌ ಇಲಾಖೆಯಲ್ಲಿ ಸಿಬಂದಿಯನ್ನು ಹೆಚ್ಚಿಸಲು ಗಮನ ಕೊಡುವುದಕ್ಕಿಂತ ಹೆಚ್ಚಾಗಿ ಆಧುನಿಕ ತಂತ್ರಜ್ಞಾನದಡಿ ರೂಪಿತಗೊಂಡ ಭದ್ರತಾ ಪರಿಕರಗಳನ್ನು ಬಳಸುವಂಥ ಸಿಬಂದಿಯನ್ನು ರೂಪಿಸಬೇಕಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next