ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಗುಡುಗಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಕೇಜ್ರಿವಾಲ್, “ನೀವು ಈ ಬಾರಿ ಹಾಕುವ ಮತವು ಮೋದಿಗಲ್ಲ, ಅಮಿತ್ ಶಾಗೆ’ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಮಧ್ಯಾಂತರ ಜಾಮೀನು ಪಡೆದು ಹೊರಬಂದ ಮಾರನೇ ದಿನವೇ, ಶನಿವಾರ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ಕೇಜ್ರಿವಾಲ್, “ಬಿಜೆಪಿಯವರು ಪದೇಪದೆ ಐಎನ್‌ಡಿಐಎ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಕೇಳುತ್ತಿರುತ್ತಾರೆ. ಆದರೆ ಇಂದು ನಾನು ಮೋದಿ ಬಳಿಕ ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಕೇಳಲು ಇಚ್ಛಿಸುತ್ತೇನೆ. ಮೋದಿ ಅವರು ಇದೇ ಸೆಪ್ಟಂಬರ್‌ನಲ್ಲಿ 75ನೇ ವರ್ಷಕ್ಕೆ ಕಾಲಿಡಲಿದ್ದಾರೆ.
75 ವರ್ಷ ವಯಸ್ಸಾದವರು ರಾಜಕೀಯದಿಂದ ನಿವೃತ್ತಿಯಾಗಬೇಕು ಎಂಬ ನಿಯಮವನ್ನು 2014ರಲ್ಲಿ ಮೋದಿಯವರೇ ತಂದಿದ್ದಾರೆ. ಈಗಾಗಲೇ ಈ ನಿಯಮದಲ್ಲಿ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ ಜೋಷಿ, ಸುಮಿತ್ರಾ ಮಹಾಜನ್‌ಅವರಂಥ ಅನೇಕ ನಾಯಕರಿಗೆ ನಿವೃತ್ತಿ ನೀಡಿ ಕಳುಹಿಸಲಾಗಿದೆ ಎಂದಿದ್ದಾರೆ.ಮೋದಿ ಅವರೇ ಮಾಡಿರುವ ನಿಯಮದಂತೆ ಮುಂದಿನ ವರ್ಷ ಅವರು ನಿವೃತ್ತರಾಗಲಿದ್ದಾರೆ. ಬಳಿಕ ಯಾರು ಪ್ರಧಾನಿ ಆಗಲಿದ್ದಾರೆ? ಹೀಗಾಗಿ ಅಮಿತ್ ಶಾ ಅವರನ್ನು ಪ್ರಧಾನಿ ಸ್ಥಾನಕ್ಕೆ ಏರಿಸಲೆಂದು ಮೋದಿ ನಿಮ್ಮ ಮತಗಳನ್ನು ಯಾಚಿಸುತ್ತಿದ್ದಾರೆ. ಆದರೆ, “ಮೋದಿ ಗ್ಯಾರಂಟಿ’ಗಳನ್ನು ಅಮಿತ್ ಶಾ ಪೂರ್ಣಗೊಳಿಸಬಲ್ಲರೇ’ ಎಂದು ಕೇಜ್ರಿವಾಲ್ ಪ್ರಶ್ನಿಸಿದರು.
“ಒಂದು ದೇಶ, ಒಂದು ನಾಯಕ’ ಎಂಬ ಧ್ಯೇಯದೊಂದಿಗೆ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಪಕ್ಷವನ್ನು ಮುಗಿಸಲು ಸಂಚು ರೂಪಿಸಿದೆ. ಭವಿಷ್ಯದಲ್ಲಿ ವಿವಿಧ ವಿಪಕ್ಷಗಳ ಎಲ್ಲ ನಾಯಕರನ್ನೂ ಜೈಲಿಗಟ್ಟುವ ಯೋಜನೆ ಅವರದ್ದು ಎಂದೂ ಕೇಜ್ರಿ ಆರೋಪಿಸಿದ್ದಾರೆ.
ಕೇಜ್ರಿವಾಲ್ ಆ್ಯಂಡ್ ಕಂಪೆನಿ ಮತ್ತು ಐಎನ್‌ಡಿಐಎ ಒಕ್ಕೂಟಕ್ಕೆ ನಾನು ನೀಡುತ್ತಿರುವ ಸ್ಪಷ್ಟನೆಯಿದು- ಬಿಜೆಪಿಯ ಸಂವಿಧಾನದಲ್ಲಿ 75 ವರ್ಷಕ್ಕೆ ನಿವೃತ್ತಿ ಎಂಬ ನಿಯಮ ವೇನೂ ಇಲ್ಲ. 2029ರ ವರೆಗೂ ಮೋದಿಯವರೇ ದೇಶದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಬಿಜೆಪಿಯಲ್ಲಿ ಈ ಬಗ್ಗೆ ಯಾವುದೇ ಗೊಂದಲ ಇಲ್ಲ.
-ಅಮಿತ್ ಶಾ,
ಕೇಂದ್ರ ಗೃಹ ಸಚಿವ
ಮತ್ತೆ ಮೋದಿ ಅಧಿಕಾರಕ್ಕೇರಿದರೆ ಎರಡೇ ತಿಂಗಳಲ್ಲಿ ಉತ್ತರಪ್ರದೇಶ ಸಿಎಂ ಸ್ಥಾನದಿಂದ ಯೋಗಿ ಆದಿತ್ಯನಾಥ್ ಅವರನ್ನು ಕೆಳಕ್ಕಿಳಿಸಲಿದ್ದಾರೆ. ಆಡ್ವಾಣಿ, ಜೋಶಿ, ಚೌಹಾಣ್, ರಾಜೇ, ಖಟ್ಟರ್ ಅಧಿಕಾರ ಅಂತ್ಯವಾದಂತೆ ಯೋಗಿ ರಾಜಕೀಯ ಬದುಕು ಅಲ್ಲಿಗೆ ಕೊನೆಯಾಗಲಿದೆ. ಇದಕ್ಕಾಗಿಯೇ ಮೋದಿ “ಒನ್ ನೇಶನ್, ಒನ್ ಲೀಡರ್’ ಎಂಬ ಕಾನೂನು ಜಾರಿ ಮಾಡಲಿದ್ದಾರೆ.
-ಕೇಜ್ರಿವಾಲ್,
ದಿಲ್ಲಿ ಮುಖ್ಯಮಂತ್ರಿ