ನವದೆಹಲಿ: ಹಂಗಾಮಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಹಕ್ಕುಮಂಡಿಸುವ ಸಿದ್ಧತೆಯಲ್ಲಿರುವ ನಡುವೆಯೇ ಶುಕ್ರವಾರ (ಜೂನ್ 07) ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ್ದಾರೆ.
ಇದನ್ನೂ ಓದಿ:3 ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದಕ್ಕಿಂತ ಹೆಚ್ಚು ನಾವು 2024ರಲ್ಲಿ ಗೆದ್ದಿದ್ದೇವೆ: ಮೋದಿ
2024ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಪೂರ್ಣಪ್ರಮಾಣದ ಬಹುಮತ ಪಡೆಯದಿದ್ದರೂ, ಎನ್ ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ (292) ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಅಧಿಕಾರ ನಡೆಸಲು 272 ಸ್ಥಾನಗಳ ಅಗತ್ಯವಿದೆ.
ಇಂದು ನಡೆದ ಎನ್ ಡಿಎ ಮೈತ್ರಿಕೂಟದ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು 18ನೇ ಲೋಕಸಭೆಯ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡಿದ್ದು, ಈ ಮೂಲಕ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಹಾದಿ ಸುಗಮವಾದಂತಾಗಿದೆ.
ಜೂನ್ 9ರಂದು ಸಂಜೆ 6ಗಂಟೆಗೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ದೇಶ-ವಿದೇಶದ ಗಣ್ಯರು ಭಾಗಿಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.