ಪಣಜಿ: ಗೋವಾದಲ್ಲಿ ಮಳೆಯಿಂದ ಉಂಟಾದ ಜಲಪ್ರಳಯದಿಂದಾಗಿ ಆಗಿರುವ ತೊಂದರೆಗೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಪ್ರಧಾನಿ ನರೇಂದ್ರ ಮೋದಿಯವರ ಬಳಿ ದೂರವಾಣಿಯ ಮೂಲಕ ಮಾತನಾಡಿದ್ದು, ಗೋವಾದ ಪ್ರವಾಹ ಪರಿಸ್ಥಿತಿಯ ಎಲ್ಲ ವಿವರವನ್ನೂ ಪ್ರಧಾನಿಗಳು ಪಡೆದುಕೊಂಡಿದ್ದಾರೆ.
ಅಗತ್ಯ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದ್ದು,ಕೇಂದ್ರ ಗೃಹಮಂತ್ರಿ ಅಮಿತ್ ಶಾ ರವರು ಕೂಡ ಗೋವಾದ ಸದ್ಯದ ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡಿರುವುದಾಗಿ ಮುಖ್ಯಮಂತ್ರಿ ಸಾವಂತ್ ಹೇಳಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಮಳೆಯಬ್ಬರ ಕಡಿಮೆಯಾದರೂ ನದಿಗಳ ಅಪಾಯಮಟ್ಟ ಮತ್ತಷ್ಟು ಏರಿಕೆ
ಗೋವಾದಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ಸುರಕ್ಷತೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳೊಂದಿಗೆ ದೂರವಾಣಿಯ ಮೂಲಕ ಮಾತುಕತೆ ನಡೆಸಿದ್ದೇನೆ. ರಾಜ್ಯಕ್ಕೆ ಪೂರ್ಣ ಸಹಕಾರ ನೀಡುವ ಭರವಸೆಯನ್ನು ಪ್ರಧಾನಿಗಳು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.
ಗೋವಾದ ಬಿಚೋಲಿ, ಸಾಖಳಿ, ವಾಳಪೈ ಭಾಗದಲ್ಲಿ ಜಲಪ್ರಳಯವೇ ಉಂಟಾಗಿದ್ದು, ಈ ಭಾಗದಲ್ಲಿ ಸಾವಿರಾರು ಮನೆಗಳ ಜಲಾವೃತಗೊಂಡಿದೆ. ಈ ಭಾಗಕ್ಕೆ ತೆರಳಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಪರಿಶೀಲನೆ ನಡೆಸಿ ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.