ರಾಮನಾಥಪುರಂ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಪುಣ್ಯ ಕ್ಷೇತ್ರ ರಾಮೇಶ್ವರದ ಸಮುದ್ರದ ಅಗ್ನಿತೀರ್ಥದಲ್ಲಿ ಪುಣ್ಯಸ್ನಾನ ಮಾಡಿದ ನಂತರ ಇಲ್ಲಿನ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ತಿರುಚಿರಾಪಳ್ಳಿ ಜಿಲ್ಲೆಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ, ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರು ಅದ್ದೂರಿ ಸ್ವಾಗತ ಕೋರಿದರು.
ರುದ್ರಾಕ್ಷಿ ಮಾಲೆ ಧರಿಸಿದ್ದ ಪ್ರಧಾನಿ ಮೋದಿ, ತಮಿಳುನಾಡಿನ ಪುರಾತನ ಶಿವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪುರೋಹಿತರು ಸಾಂಪ್ರದಾಯಿಕ ಗೌರವಗಳನ್ನು ನೀಡಿದರು. ದೇಗುಲದಲ್ಲಿ ನಡೆದ ಭಜನೆಯಲ್ಲಿಯೂ ಭಾಗವಹಿಸಿದರು.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದಲ್ಲಿರುವ ಶಿವ ದೇವಾಲಯವು ರಾಮಾಯಣದಲ್ಲಿ ವಿಶೇಷ ಪ್ರಾತಿನಿಧ್ಯ ಹೊಂದಿದೆ. ವಿಷ್ಣುವಿನ ಏಳನೇ ಅವತಾರವಾದ ಶ್ರೀ ರಾಮಚಂದ್ರ ಲಂಕೆಯ ರಾಕ್ಷಸ-ರಾಜ, ದುಷ್ಟನಾದರೂ ಬ್ರಾಹ್ಮಣನಾಗಿ, ಶಿವಭಕ್ತನಾಗಿದ್ದ ರಾವಣನ ಸಂಹಾರ ಮಾಡಿದ ಬಳಿಕ, ತಾನು ಯಾವುದಾದರೂ ಪಾಪಗಳನ್ನು ಮಾಡಿದುದಿದ್ದರೆ ಪರಿಹರಿಸುವ ಸಲುವಾಗಿ ಶಿವನನ್ನು ಪ್ರಾರ್ಥಿಸಿ, ಋಷಿಗಳ ಸಲಹೆಯ ಮೇರೆಗೆ ಸೀತೆ ಮತ್ತು ಸಹೋದರ ಲಕ್ಷ್ಮಣನೊಂದಿಗೆ ಲಿಂಗವನ್ನು ಸ್ಥಾಪಿಸಿ ಪೂಜಿಸಿದುದರ ಕುರಿತು ಪುರಾಣಗಳಲ್ಲಿ ಉಲ್ಲೇಖದವಿದೆ. ಇದು ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾಗಿದೆ.