ಝುಂಜು: ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆ ಅಡಿಯಲ್ಲಿ ಬಾಲಕಿಯರನ್ನು ರಕ್ಷಿಸುವಲ್ಲಿ ವಿಶೇಷ ಕ್ರಮ ಕೈಗೊಂಡ ವಿಜಯಪುರ ಸೇರಿದಂತೆ ಹನ್ನೆರಡು ಜಿಲ್ಲೆಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪುರಸ್ಕಾರ ನೀಡಿದ್ದಾರೆ.
ರಾಜಸ್ಥಾನದ ಜುಂಜು ಹಾಗೂ ಸಿಕಾರ್ ಜಿಲ್ಲೆ ಕೂಡ ಪುರಸ್ಕಾರ ಪಡೆದುಕೊಂಡಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಹಾಗೂ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸಮುದಾಯವನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ಈ ಪುರಸ್ಕಾರ ಲಭ್ಯವಾಗಿದೆ ರಾಜಸ್ಥಾನದಲ್ಲಿ ರಾಷ್ಟ್ರೀಯ ಪೌಷ್ಟಿಕಾಂಶ ಮಿಶನ್ ಅನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ,ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ ವಿಸ್ತರಣೆಯನ್ನೂ ಘೋಷಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಹೆಣ್ಣು ಭ್ರೂಣ ಹತ್ಯೆ ಅವಮಾನಕರ. ಈ ಅಮಾನವೀಯ ಕೃತ್ಯವನ್ನು ತಡೆಯಲು ಅತ್ತೆಯಂದಿರು ವಿಶೇಷವಾಗಿ ಶ್ರಮಿಸಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು. ಬಾಲಕರಂತೆಯೇ ಹೆಣ್ಣು ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಲಭ್ಯವಾಗಬೇಕು ಎಂದಿದ್ದಾರೆ.
ಕನ್ವರ್ ಬಾಯಿ ಸ್ಮರಿಸಿದ ಪ್ರಧಾನಿ: ಇದಕ್ಕೂ ಮುನ್ನ, ಇಳಿ ವಯಸ್ಸಿನಲ್ಲಿ ತಮ್ಮ ಏಕೈಕ ಆಸ್ತಿಯಾಗಿದ್ದ ಮೇಕೆಗಳ ಪುಟ್ಟ ಮಂದೆಯನ್ನು ಮಾರಿ ತಮ್ಮ ಮನೆಯಲ್ಲಿ ಎರಡು ಶೌಚಾಲಯಗಳನ್ನು ಕಟ್ಟಿಸಿದ್ದ ಛತ್ತೀಸ್‌ಗಢದ ಕೊಟಭರ್ರಿ ಹಳ್ಳಿಯ ವೃದೆಟಛಿ, ದಿವಂಗತ ಕುನ್ವರ್ ಬಾಯಿ (106) ಅವರನ್ನು ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸ್ಮರಿಸಿದ್ದಾರೆ. ಟ್ವಿಟರ್‌ನಲ್ಲಿ ಅವರನ್ನು ಹೊಗಳಿರುವ ಪ್ರಧಾನಿ, ಕುನ್ವರ್ ಅವರಂಥ ಮಹಿಳೆಯರು ಆದರ್ಶಪ್ರಾಯ ಕಾರ್ಯಗಳನ್ನು ಮಾಡುವ ಮೂಲಕ ಮನುಕುಲದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ ಎಂದು ಶ್ಲಾಘಿಸಿದ್ದಾರೆ. ಅಲ್ಲದೆ, ತಮ್ಮ ಜೀವನದಲ್ಲಿ ಸ್ಫೂರ್ತಿಗೊಳಿಸಿದ ಮಹಿಳೆಯರ ಬಗ್ಗೆ ಟ್ವಿಟರ್‌ನಲ್ಲಿ #SheInspiresMe
ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಬರೆಯಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.