Advertisement

Dk Shivakumar: ಮನೆಗೆ ಕಾವೇರಿ ಬರುತ್ತಾಳೆ, ಪೂಜೆ ಮಾಡಿ ಸ್ವೀಕರಿಸಿ; ಡಿಕೆಶಿ

10:58 AM Oct 16, 2024 | Team Udayavani |

ಬೆಂಗಳೂರು: “ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲವು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ಮೊದಲ ಆದ್ಯತೆಯಾಗಿ ಬೆಂಗಳೂರು ನಾಗರಿಕರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದು ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಕಾವೇರಿ 5ನೇ ಹಂತದ ಯೋಜನೆ ಬುಧವಾರ ಲೋಕಾರ್ಪಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಡಿಸಿಎಂ ಹಲವು ವಿಷಯಗಳನ್ನು ಹಂಚಿಕೊಂಡರು.

ಬ್ರ್ಯಾಂಡ್‌ ಬೆಂಗಳೂರಿಗೆ ಫೌಂಡೇಷನ್‌ನಂತಿರುವ ಸಂಚಾರ ನಿರ್ವಹಣೆ, ತ್ಯಾಜ್ಯ ವಿಲೇವಾರಿ, ಕುಡಿಯುವ ನೀರು ಹಾಗೂ ವಿದ್ಯುತ್‌ ಪೂರೈಕೆ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. 110 ಹಳ್ಳಿಗಳ ಅಂದಾಜು 50 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆ ಉದ್ಘಾಟಿಸುವ ಮೂಲಕ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂಬ ಸಂದೇಶವನ್ನು ವಿಶ್ವಕ್ಕೆ ರವಾನಿಸಲಾಗುತ್ತಿದೆ. ನಿಮ್ಮ ಮನೆಗೆ ಕಾವೇರಿ ಬಂದಿದ್ದಾಳೆ, ಪೂಜೆ ಮಾಡಿ ಸ್ವೀಕರಿಸಿ ಎಂದು ರಾಜಧಾನಿಯ ನಾಗರಿಕರಲ್ಲಿ ಶಿವಕುಮಾರ್‌ ಮನವಿ ಮಾಡಿದರು.

ಕಾವೇರಿ 5ನೇ ಹಂತದ ಯೋಜನೆಯಿಂದ ಅನುಕೂಲ ಪಡೆಯುವ ಪ್ರದೇಶಗಳು ಯಾವುವು?

ನಗರದ 7 ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ಅಂದಾಜು 50 ಲಕ್ಷ ಜನರಿಗೆ ಅನುಕೂಲ ಆಗಲಿದೆ. ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿಯಲ್ಲಿ ದೇಶದಲ್ಲೇ ಅತ್ಯಾಧುನಿಕ ಬೃಹತ್‌ ನೀರು ಸಂಸ್ಕರಣ ಘಟಕ ಸ್ಥಾಪಿಸಲಾಗಿದೆ. ಯೋಜನೆ ಜಾರಿಯಲ್ಲಿ ಹಲವು ದೊಡ್ಡ ಸವಾಲುಗಳಿದ್ದವು, ಅವುಗಳನ್ನು ನಿವಾರಿಸಿಕೊಂಡು ಈಗ ಉದ್ಘಾಟನೆ ಹಂತಕ್ಕೆ ಬಂದು ನಿಂತಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಜೈಕಾ ನೆರವಿನೊಂದಿಗೆ ಅಂದಾಜು 5 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ 775 ಎಂಎಲ್‌ಡಿ ನೀರನ್ನು ಈ ಪ್ರದೇಶಗಳಿಗೆ ಪೂರೈಸಲಾಗುತ್ತಿದೆ. ಕಾವೇರಿ 4ನೇ ಹಂತದಲ್ಲಿ 1500 ಎಂಎಲ್‌ಡಿ ಸೇರಿದಂತೆ ಈಗ ಒಟ್ಟು 2275 ಎಂಎಲ್‌ಡಿ ನೀರು ನಗರಕ್ಕೆ ಪೂರೈಕೆ ಆಗುತ್ತಿದೆ. ಸದ್ಯ ಒಟ್ಟಾರೆ ನಗರಕ್ಕೆ ತಿಂಗಳಿಗೆ 1.58 ಟಿಎಂಸಿ ನೀರು ಬೇಕಿದ್ದು ಅದನ್ನು ನಿರ್ವಹಣೆ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ವರ್ಷಕ್ಕೆ 30 ಟಿಎಂಸಿ ನೀರು ಬೇಕಿದ್ದು ಅಂದರೆ ಮಾಸಿಕ 2.40 ಟಿಎಂಸಿ ನೀರು ಪೂರೈಸುವ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ.

Advertisement

ಕಾವೇರಿ ನೀರು ಪೂರೈಕೆಗೆ ಜಲಮಂಡಳಿ ಸಿದ್ಧವಿದ್ದರೂ ನೀರಿನ ಸಂಪರ್ಕ ಪಡೆದವರ ಸಂಖ್ಯೆ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂಬ ವರದಿಗಳಿವೆಯಲ್ಲಾ?

ಹೌದು, ಇದಕ್ಕೆ ಪ್ರತಿ ಕ್ಷೇತ್ರದಲ್ಲೂ ಸಂಪರ್ಕ ಅಭಿಯಾನ ಮಾಡುತ್ತೇವೆ, ಈಗಾಗಲೇ ಬೆಂಗಳೂರಿನಲ್ಲಿ 10.50 ಲಕ್ಷ ನೀರಿನ ಸಂಪರ್ಕಗಳಿವೆ. 110 ಹಳ್ಳಿಗಳ ಪ್ರದೇಶದಲ್ಲಿ 4 ರಿಂದ 5 ಲಕ್ಷ ಹೊಸ ಸಂಪರ್ಕಗಳಿಗೆ ಅವಕಾಶಗಳಿವೆ. ನಾನೇ ಖುದ್ದಾಗಿ ಪ್ರತಿ ಕ್ಷೇತ್ರಕ್ಕೂ ಹೋಗಿ ಕಾರ್ಯಕ್ರಮ ಮಾಡುವೆ, ಕಾನೂನುಬಾಹಿರವಾಗಿ ಸಂಪರ್ಕ ಪಡೆಯಲು ಅವಕಾಶ ಇಲ್ಲ. ಇದನ್ನು ಪ್ರತಿಯೊಬ್ಬ ನಾಗರಿಕರಿಗೂ ಮನದಟ್ಟು ಮಾಡಿಕೊಡಲಾಗುವುದು, ಪ್ರತಿ ಮನೆಯಲ್ಲೂ ಕಾನೂನುಬದ್ಧ ನೀರಿನ ಸಂಪರ್ಕ ಇರಬೇಕು.

ಮೇಕೆದಾಟು ಯೋಜನೆ ಸ್ಥಿತಿಗತಿ ಏನು?

ಮೇಕೆದಾಟುವಿನಲ್ಲೇ ಸಮತೋಲನ ಜಲಾಶಯ ನಿರ್ಮಿಸಬೇಕೆಂಬುದು ನಮ್ಮ ರಾಜ್ಯದ ಬೇಡಿಕೆ, ತಮಿಳುನಾಡಿನವರು ಹೇಳಿದಂತೆ ಎಲ್ಲೋ ಡ್ಯಾಂ ನಿರ್ಮಿಸಲು ಸಾಧ್ಯವಿಲ್ಲ, ಅವರು ಎಲ್ಲಿ ಬೇಕಾದರೂ ಮಾಡಿಕೊಳ್ಳಲಿ. ಬರಗಾಲ, ವಿಪರೀತ ಮಳೆ ಎರಡನ್ನೂ ನೋಡಿದ್ದೇವೆ. ಹೆಚ್ಚಾದ ನೀರು ಸಮುದ್ರದ ಪಾಲಾಗುತ್ತಿದೆ, ಇದು ಕೋರ್ಟ್‌ಗೆ ಅರ್ಥವಾಗುತ್ತದೆ ಎಂದು ಭಾವಿಸಿದ್ದೇನೆ. ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

193 ಕೆರೆಗಳಿಗೆ ನೀರು ತುಂಬಿಸಲು ಪೈಪ್‌ಲೈನ್‌: 

ಭವಿಷ್ಯದಲ್ಲೂ ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಲಾಗುತ್ತಿದೆಯೇ ?

ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಈಗಾಗಲೇ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿರುವೆ. ಈಗಾಗಲೇ ನಗರಕ್ಕೆ 6 ಟಿಎಂಸಿ ನೀರು ಹೆಚ್ಚುವರಿ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಕಾವೇರಿ 6ನೇ ಹಂತದಲ್ಲಿ ಅದನ್ನು ಜಾರಿಗೊಳಿಸುತ್ತೇವೆ. ಈ ಮಧ್ಯೆ ನಗರದ ಅಂತರ್ಜಲ ವೃದ್ಧಿಗೆ ಕೆರೆ ಭರ್ತಿ ಯೋಜನೆ ಜಾರಿಗೊಳಿಸಲು ಮುಂದಾಗಿದ್ದೇವೆ. ಅಂದಾಜು 193 ಕೆರೆಗಳಿಗೆ ನೀರು ತುಂಬಿಸಲು ಪೈಪ್‌ಲೈನ್‌ ಮಾಡುವ ಹಂತದಲ್ಲಿದ್ದೇವೆ. ಮಳೆ ನೀರು ಸಹ ಕೆರೆಗಳಿಗೆ ಹೋಗಲು ಕಾಲುವೆಗಳನ್ನು ಮಾಡಲಿದ್ದೇವೆ. ಕೆರೆಗಳನ್ನು ಸಂರಕ್ಷಿಸಬೇಕಿದೆ. ಕಳೆದ ಬೇಸಿಗೆ ಸಾಕಷ್ಟು ಪಾಠ ಕಲಿಸಿದೆ, ಯಾವ ಕೆರೆಯಲ್ಲೂ ನೀರು ಇರಲಿಲ್ಲ. 7100 ಕೊಳವೆಬಾವಿಗಳು ಒಣಗಿ ಹೋಗಿದ್ದವು. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಮಳೆ ನೀರು ಕೊಯ್ಲಿಗೆ ಆದ್ಯತೆ ಕೊಡುತ್ತಿದ್ದೇವೆ. ಮಳೆ ಬಿದ್ದಷ್ಟು ಅಂತರ್ಜಲ ವೃದ್ಧಿಯಾಗುತ್ತದೆ, ಬೆಂಗಳೂರಿನ ಜನ ಎಷ್ಟೇ ಬೈಯ್ದುಕೊಂಡರೂ ಪರವಾಗಿಲ್ಲ ಮಳೆ ಬೀಳಬೇಕು. ಕೆಲವೊಂದು ಕಡೆ ಸ್ವಯಂಕೃತ ಅಪರಾಧಗಳಿಂದಾಗಿ ನಾಗರಿಕೆಗೆ ಸಣ್ಣಪುಟ್ಟ ತೊಂದರೆಗಳು ಆಗುತ್ತಿವೆ. ಕಾಲುವೆಗಳ ಅಕ್ಕಪಕ್ಕ ಜಾಗ ಬಿಡದೆ ಮನೆ ನಿರ್ಮಿಸಿಕೊಂಡಿರುವುದು ತಪ್ಪು, ಅಂತಹವರಿಗೆ ಅನುಕಂಪ ತೋರಿಸಬಾರದು.

ನೀರು ಸೋರಿಕೆ ಇಲ್ಲವೇ ಕಳ್ಳತನ ತಡೆಗೆ ಏನು ಕ್ರಮ ಕೈಗೊಳ್ಳಲಾಗುತ್ತಿದೆ?

ಕೆಲವು ಕಡೆ ವಸತಿ, ವಾಣಿಜ್ಯ ಹಾಗೂ ಕೈಗಾರಿಕಾ ಗ್ರಾಹಕರು ಮೀಟರ್‌ ಇಲ್ಲದೆ ನೀರು ಬಳಸುತ್ತಿದ್ದಾರೆ. ಇನ್ನು ಮುಂದೆ ಈ ರೀತಿಯ ಕಳ್ಳಾಟಕ್ಕೆ ಅವಕಾಶ ಇಲ್ಲ. ಯಾರು ನೀರು ಕದಿಯುತ್ತಿದ್ದಾರೆ ಎಂಬ ಮಾಹಿತಿಗೆ ಅನುಗುಣವಾಗಿ ಅದನ್ನು ನಿಲ್ಲಿಸುವ ವ್ಯವಸ್ಥೆ ತರಲಾಗುವುದು. ಕಾವೇರಿ ನೀರು ಬಳಸುತ್ತಿರುವ ಗ್ರಾಹಕರು ಸ್ವಯಂಪ್ರೇರಣೆಯಿಂದ ಮೀಟರ್‌ ಹಾಕಿಸಿಕೊಳ್ಳಬೇಕು.

ಎಂ.ಎನ್‌.ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next