Advertisement

PM ಸುದೀರ್ಘ ಭಾಷಣ: ಕೊನೆಗೂ ಮಣಿಪುರ ವಿಚಾರದಲ್ಲಿ ಮಾತು; ವಿಪಕ್ಷಗಳ ವಿರುದ್ಧ ಕಿಡಿ

07:25 PM Aug 10, 2023 | Team Udayavani |

ಹೊಸದಿಲ್ಲಿ : ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಅವರು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉತ್ತರಿಸಿದ್ದು, ಸುದೀರ್ಘ ಭಾಷಣದ ಕೊನೆಯಲ್ಲಿ ವಿಪಕ್ಷಗಳ ವಿರುದ್ಧ ಕೆಂಡ ಕಾರಿದ್ದಾರೆ.

Advertisement

ಕಳೆದ ಎರಡು ದಿನಗಳಿಂದ, ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯ ಬಗ್ಗೆ ಸರಕಾರ ಮತ್ತು ಪ್ರತಿಪಕ್ಷಗಳ ನಾಯಕರ ನಡುವೆ ಬಿಸಿಯೇರಿದ ಚರ್ಚೆಗಳಿಗೆ ಸಂಸತ್ತು ಸಾಕ್ಷಿಯಾಗಿತ್ತು. ಬುಧವಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಣಿಪುರವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಬಿಜೆಪಿಯ ಭಾರತವನ್ನು ಕೊಲೆ ಮಾಡಿದೆ ಎಂದು ಆರೋಪಿಸಿ ಕಟುವಾದ ವಾಗ್ದಾಳಿ ನಡೆಸಿದ್ದರು. ಕೋಲಾಹಲಕ್ಕೆ ಕಾರಣವಾಗಿತ್ತು.

ಪ್ರಧಾನಿ ಮೋದಿ ಅವರ ಸುದೀರ್ಘ ಭಾಷಣದ ವೇಳೆ ಪ್ರತಿಪಕ್ಷಗಳು ಸಭಾ ತ್ಯಾಗ ಮಾಡಿ ಹೊರನಡೆಯುತ್ತಿದ್ದಂತೆ ಭಾಷಣ ಮುಂದುವರಿಸಿದ ಪ್ರಧಾನಿ ಮೋದಿ, ”ವಿಪಕ್ಷಗಳಿಗೆ ತಾಳ್ಮೆ ಇಲ್ಲ” ಎಂದು ಕಿಡಿ ಕಾರಿದರು.

ಮಣಿಪುರದ ವಿಚಾರದ ಕುರಿತು ಉತ್ತರಿಸಿ, ”ಈ ವಿಷಯ ನ್ಯಾಯಾಲಯದಲ್ಲಿದೆ ಮತ್ತು ಮುಂದಿನ ದಿನಗಳಲ್ಲಿ ಈಶಾನ್ಯ ರಾಜ್ಯದಲ್ಲಿ ಶಾಂತಿಯನ್ನು ಕಾಣಬಹುದು.ಮಣಿಪುರ ಹೊಸ ಆತ್ಮವಿಶ್ವಾಸದಿಂದ ಮುನ್ನಡೆಯಲಿದೆ. ಮಣಿಪುರದ ಜನರ ಅಭಿವೃದ್ಧಿಯಾಗಲಿದೆ” ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

”ಮಣಿಪುರದ ಜನತೆಗೆ, ಅಲ್ಲಿನ ತಾಯಂದಿರಿಗೆ ಮತ್ತು ಸಹೋದರಿಯರಿಗೆ ದೇಶ ನಿಮ್ಮೊಂದಿಗಿದೆ, ಈ ಸದನ ನಿಮ್ಮೊಂದಿಗಿದೆ ಎಂದು ಹೇಳಲು ಬಯಸುತ್ತೇನೆ.ಒಟ್ಟಾಗಿ ನಾವು ಈ ಸವಾಲಿಗೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ.ಅಲ್ಲಿ ಮತ್ತೆ ಶಾಂತಿ ನೆಲೆಸುತ್ತದೆ.ಮಣಿಪುರವು ವೇಗವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಪ್ರಯತ್ನಗಳ ಕೊರತೆ ಇರುವುದಿಲ್ಲ” ಎಂದರು.

Advertisement

”ಮಣಿಪುರದಲ್ಲಿ ಅನೇಕ ಜನರು ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡರು, ಮಹಿಳೆಯರ ವಿರುದ್ಧ ಗಂಭೀರ ಅಪರಾಧಗಳನ್ನು ಮಾಡಲಾಯಿತು. ಈ ಅಪರಾಧಗಳು ಅಕ್ಷಮ್ಯ.ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸತತ ಪ್ರಯತ್ನ ನಡೆಸುತ್ತಿವೆ” ಎಂದು ಹೇಳಿದರು.

”ಮಣಿಪುರದ ವಿಚಾರ ಮಾತ್ರ ಚರ್ಚಿಸಲು ಗೃಹ ಸಚಿವರಿಗೆ ಪತ್ರ ಬರೆದಿದ್ದರು, ಆದರೆ ವಿರೋಧ ಪಕ್ಷಗಳಿಗೆ ಧೈರ್ಯವಿಲ್ಲ, ಉದ್ದೇಶವಿಲ್ಲ ಮತ್ತು ಹೊಟ್ಟೆಯಲ್ಲಿ ಪಾಪವಿದೆ. ಹೊಟ್ಟೆಯಲ್ಲಿ ನೋವು ಉಂಟಾಗಿ ತಲೆ ಒಡೆದು ಹೋಗುತ್ತಿತ್ತು. ಇದು ಇದರ ಫಲಿತಾಂಶವಾಗಿತ್ತು.ತಮ್ಮ ಒಪ್ಪಿಗೆಯನ್ನು ತೋರಿಸಿದ್ದರೆ, ಮಣಿಪುರದ ವಿಚಾರವನ್ನು ಮಾತ್ರ ವಿವರವಾಗಿ ಚರ್ಚಿಸಬಹುದಿತ್ತು.ಅವರು ಬಹಳಷ್ಟು ಹೇಳಲು ಅವಕಾಶವನ್ನು ಪಡೆಯಬಹುದಿತ್ತು. ಆದರೆ ಅವರಿಗೆ ಚರ್ಚೆಯಲ್ಲಿ ಆಸಕ್ತಿ ಇರಲಿಲ್ಲ” ಎಂದು ಕಿಡಿ ಕಾರಿದರು.

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, ‘ಕೆಲವರು ಭಾರತ್ ಮಾತೆಯ ಸಾವನ್ನು ಏಕೆ ಊಹಿಸುತ್ತಾರೆ ಎಂದು ನನಗೆ ತಿಳಿದಿಲ್ಲ. 5 ಮಾರ್ಚ್ 1966 ರಂದು ಕಾಂಗ್ರೆಸ್ ಮಿಜೋರಾಂನ ಅಸಹಾಯಕ ಜನರ ಮೇಲೆ ವಾಯುಪಡೆಯ ಮೂಲಕ ದಾಳಿ ಮಾಡಿತು, ಇಂದಿಗೂ, ಮಿಜೋರಾಂ ಭಯಾನಕ ದಿನವನ್ನು ಶೋಕಿಸುತ್ತದೆ. ಅವರು ಯಾವತ್ತೂ ಜನರಿಗೆ ಸಾಂತ್ವನ ಹೇಳಲು ಪ್ರಯತ್ನಿಸಲಿಲ್ಲ.ಕಾಂಗ್ರೆಸ್ ದೇಶದ ಜನರಿಂದ ಘಟನೆಯನ್ನು ಮರೆಮಾಚಿತು. ಆಗ ಶ್ರೀಮತಿ ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದರು ಎಂದು ಕಿಡಿ ಕಾರಿದರು.

ಅವಿಶ್ವಾಸ ನಿರ್ಣಯದಲ್ಲಿ ವಿಪಕ್ಷ ಒಕ್ಕೂಟಕ್ಕೆ ಸೋಲು ಉಂಟಾಯಿತು. ಧ್ವನಿ ಮತದ ಮೂಲಕ ಅವಿಶ್ವಾಸದ ನಿರ್ಣಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ಜಯ ಲಭ್ಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next