ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಭಾರತದಿಂದ ಕೊಂಡೊಯ್ದ ವಿಶಿಷ್ಟ ಉಡುಗೊರೆಗಳನ್ನು ಕಮಲಾ ಹ್ಯಾರಿಸ್ ಗೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಾಂಬೆ ಷೇರುಪೇಟೆ ಇತಿಹಾಸದಲ್ಲೇ ಪ್ರಥಮ ಬಾರಿಗೆ 60,000 ಗಡಿ ದಾಟಿದ ಸೆನ್ಸೆಕ್ಸ್
ಹಿಂದೆ ಭಾರತದಲ್ಲಿ ವಿವಿಧ ಇಲಾಖೆಯಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದ ಕಮಲಾ ಹ್ಯಾರಿಸ್ ಅವರ ಅಜ್ಜ ಪಿವಿ ಗೋಪಾಲನ್ ಅವರಿಗೆ ಸೇರಿದ್ದ ಹಳೆಯ ಅಧಿಸೂಚನೆಗಳ ಪ್ರತಿಗಳು, ವಾರಣಾಸಿಯ ವಿಶಿಷ್ಟ ಕಲಾಕೃತಿ, ಚೆಸ್ ಸೆಟ್, ಮರದಿಂದ ತಯಾರಿಸಲ್ಪಟ್ಟ ಕರಕುಶಲ ವಸ್ತುಗಳನ್ನು ಮೊಮ್ಮಗಳಾದ ಕಮಲಾ ಹ್ಯಾರಿಸ್ ಗೆ ಪ್ರಧಾನಿ ಮೋದಿ ಅವರು ಉಡುಗೊರೆಯಾಗಿ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಕಮಲಾ ಹ್ಯಾರಿಸ್ ಗೆ ಗುಲಾಬಿ ಮೀನಾಕಾರಿ ಚೆಸ್ ಸೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಲಾಕೃತಿ ಕಾಶಿ ಜತೆ ನಿಕಟ ಸಂಬಂಧ ಹೊಂದಿದ್ದು, ಕಾಶಿ ಜಗತ್ತಿನಲ್ಲಿಯೇ ಅತೀ ಪುರಾತನ ನಗರಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಕಮಲಾ ಹ್ಯಾರಿಸ್ ಗೆ ಈ ಚೆಸ್ ಸೆಟ್ ನೀಡಿರುವುದಾಗಿ ವರದಿ ವಿವರಿಸಿದೆ.
ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಮಲಾ ಹ್ಯಾರಿಸ್ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಕೋವಿಡ್ 19 ನಿಯಂತ್ರಣ ಸೇರಿದಂತೆ ಜಾಗತಿಕ ವಿಷಯಗಳ ವಿಚಾರದಲ್ಲಿ ಭಾರತ, ಅಮೆರಿಕ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂಬುದಾಗಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.