ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ಜೂನ್ 10) ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗಾಗಿ ಭೇಟಿ ನೀಡಿದ್ದ ಸಂದರ್ಭದಲ್ಲಿ ವಡ್ನಾಗರ್ ನ ನವಸಾರಿಯಲ್ಲಿರುವ ತಮ್ಮ ಪ್ರಾಥಮಿಕ ಶಾಲೆಯ ನಿವೃತ್ತ ಗುರುಗಳನ್ನು ಭೇಟಿಯಾಗಿ ಕುಶಲೋಪರಿ ನಡೆಸಿರುವ ಫೋಟೊ ಇದಾಗಿದೆ.
ಇದನ್ನೂ ಓದಿ:ಪ್ರವಾದಿ ವಿರುದ್ಧ ಹೇಳಿಕೆ ಖಂಡಿಸಿ ದೇಶದೆಲ್ಲೆಡೆ ಪ್ರತಿಭಟನೆ: ಯುಪಿಯಲ್ಲಿ ಹಿಂಸಾಚಾರ
ತಮಗೆ ಬಾಲ್ಯದಲ್ಲಿ ವಿದ್ಯಾಭ್ಯಾಸ ನೀಡಿದ್ದ ಗುರುಗಳನ್ನು ಪ್ರಧಾನಿ ಮೋದಿ ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸಿ, ಆಶೀರ್ವಾದ ಪಡೆದಿದ್ದಾರೆ. ನಿವೃತ್ತ ಶಿಕ್ಷಕರನ್ನು ಜಗದೀಶ್ ನಾಯಕ್ ಎಂದು ಗುರುತಿಸಲಾಗಿದೆ.
ಚಿತ್ರದಲ್ಲಿ ಪ್ರಧಾನಿ ಮೋದಿ ಅವರು ಎರಡು ಕೈಗಳನ್ನು ಜೋಡಿಸಿ ತಮ್ಮ ಗುರುಗಳಿಗೆ ನಮಸ್ಕರಿಸಿದ್ದು, ಈ ಸಂದರ್ಭದಲ್ಲಿ ನಿವೃತ್ತ ಗುರುಗಳು ತಮ್ಮ ಶಿಷ್ಯನ ತಲೆಯ ಮೇಲೆ ಕೈಯನ್ನಿಟ್ಟು ಆಶೀರ್ವದಿಸಿರುವುದು ಸೆರೆಯಾಗಿದೆ.
ನಮ್ಮಿಂದ ವಿದ್ಯೆ ಕಲಿತ ವಿದ್ಯಾರ್ಥಿಯೊಬ್ಬ ದೇಶದ ಪ್ರಧಾನಿ ಹುದ್ದೆಗೆ ಏರಿದ್ದು, ಅಷ್ಟೇ ಅಲ್ಲ ಖುದ್ದಾಗಿ ಬಂದು ಭೇಟಿಯಾಗಿ ಆಶೀರ್ವಾದ ಪಡೆದಿರುವುದು ಇದಕ್ಕಿಂತ ದೊಡ್ಡ ಖುಷಿ ಇನ್ನೇನಿದೆ ಎಂದು ನಿವೃತ್ತ ಶಿಕ್ಷಕ ಜಗದೀಶ್ ನಾಯಕ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಗುಜರಾತ್ ಭೇಟಿಯಲ್ಲಿ ಗುಜರಾತ್ ಗೌರವ್ ಅಭಿಯಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನವ್ ಸಾರಿಯ ಬುಡಕಟ್ಟು ಪ್ರದೇಶದ ಖಡ್ವೇಲ್ ನಲ್ಲಿನ ಅಂದಾಜು 3,050 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳ ಶಂಕು ಸ್ಥಾಪನೆ ನೆರವೇರಿಸಿದ್ದರು.